ಶುಕ್ರವಾರ, ಏಪ್ರಿಲ್ 3, 2020
19 °C
ಚಾಮರಾಜನಗರ: ದಲಿತರಿಗೆ ಕ್ಷೌರ ನಿರಾಕರಣೆ; ದೇವಾಲಯ, ಹೋಟೆಲ್‌ ಪ್ರವೇಶವಿಲ್ಲ l ಎಚ್ಚರಿಕೆ ನೀಡಿದರೂ ನಿಲ್ಲದ ಅನಿಷ್ಟ ಪದ್ಧತಿ

ಹೂಗ್ಯಂ ಗ್ರಾಮದಲ್ಲಿ ಅಸ್ಪೃಶ್ಯತೆ ಇಂದಿಗೂ ಜೀವಂತ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಗಡಿ ಭಾಗದ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದ್ದು, ಹೂಗ್ಯಂ ಗ್ರಾಮದಲ್ಲಿರುವ ಏಳುದಂಡು ಮಾರಿಯಮ್ಮ ಹಾಗೂ ಕಾಶಿ ವಿಶ್ವನಾಥ ದೇವಾಲಯಗಳಿಗೆ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ.

ಕ್ಷೌರದ ಅಂಗಡಿಯವರು ಕ್ಷೌರ ಮಾಡುವುದಿಲ್ಲ. ಹೋಟೆಲ್‌ ಒಳಗೆ ಪ್ರವೇಶವಿಲ್ಲ; ಹೊರಗೇ ಕುಳಿತು ಆಹಾರ ಸೇವಿಸಬೇಕಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ತಾಲ್ಲೂಕು ಕೇಂದ್ರ ಹನೂರಿನಿಂದ 60 ಕಿ.ಮೀ ದೂರದಲ್ಲಿರುವ ಹೂಗ್ಯಂ, ತಮಿಳುನಾಡಿಗೆ ಹೊಂದಿಕೊಂಡಿದೆ. ತಮಿಳು ಪ್ರಭಾವ ಹೆಚ್ಚಿರುವ ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ‌ ನೆಲ್ಲೂರು, ಅಂಚೆಪಾಳ್ಯ, ಪೆದ್ದನಪಾಳ್ಯ, ಕೂಡ್ಲೂರು, ಯರಂಬಾಡಿ ಎಂಬ ಹಳ್ಳಿಗಳಿದ್ದು, ಅಂದಾಜು 24 ಸಾವಿರ ಜನಸಂಖ್ಯೆ ಇದೆ. ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತೆಲುಗು ಶೆಟ್ರು, ಭೋವಿ ಜನಾಂಗದವರು, ದಲಿತರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತರು ಇದ್ದಾರಾದರೂ ಅವರ ಸಂಖ್ಯೆ ಕಡಿಮೆ. 

ಇಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿರುವ ಸಂಗತಿ ಜಿಲ್ಲಾಡಳಿತಕ್ಕೂ ಗೊತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪೊಲೀಸರು ನಾಲ್ಕೈದು ಬಾರಿ ಸಮುದಾಯಗಳ ಮುಖಂಡರ ಸಭೆ ಕರೆದು, ಅಸ್ಪೃಶ್ಯತೆ ಆಚರಿಸಬಾರದು ಎಂದು ಮನವರಿಕೆ ಮಾಡಿದ್ದಾರೆ. ಕ್ಷೌರದಂಗಡಿಗಳ ಮಾಲೀಕರನ್ನು ಭೇಟಿ ಮಾಡಿ ತಿಳಿವಳಿಕೆ ನೀಡಿದ್ದಾರೆ. ‘ಕಾನೂನು ಪ್ರಕಾರ, ಇದು ಅಪರಾಧ. ಮುಂದುವರಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂಬ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೂ ಈ ಅನಿಷ್ಟ ಪದ್ಧತಿ ನಿಂತಿಲ್ಲ.

‘ಕಳೆದ ವರ್ಷದ ಏಪ್ರಿಲ್‌ನಲ್ಲೇ ನಾಲ್ಕು ಸಭೆಗಳು ನಡೆದಿದ್ದವು. ಗ್ರಾಮದ ಮುಖಂಡರು ಅಸ್ಪೃಶ್ಯತೆ ಆಚರಿಸುವುದಿಲ್ಲ ಎಂದು ಅಧಿಕಾರಿಗಳ ಮುಂದೆ ಹೇಳುತ್ತಾರೆ. ಒಂದು ವಾರ ಎಲ್ಲವೂ ಸರಿಯಾಗಿರುತ್ತದೆ. ಆ ನಂತರ ಮೊದಲಿನಂತೆಯೇ ಮುಂದುವರಿಯುತ್ತದೆ’ ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯರೊಬ್ಬರು ತಿಳಿಸಿದರು. 

‘ದಲಿತರು ಕ್ಷೌರಕ್ಕಾಗಿ ಕಿಲೋಮೀಟರ್‌ ಗಟ್ಟಲೆ ದೂರವಿರುವ ಹನೂರು, ರಾಮಾಪುರ, ಮಾರ್ಟಳ್ಳಿ, ಕೌದಳ್ಳಿಗೆ ಹೋಗಬೇಕಾಗಿದೆ. ಜಮೀನಿನಲ್ಲಿ ಕೆಲಸ ಮಾಡುವವರಿಗೆ ಬೊಗಸೆಯಲ್ಲಿ ನೀರು ಹನಿಸುತ್ತಾರೆ’ ಎಂದು ಅವರು ದೂರಿದರು.

‘ಭಯದಿಂದ ವಿರೋಧಿಸಲು ಹಿಂಜರಿಕೆ’

‘ಹಲವು ದಶಕಗಳಿಂದ ಅಸ್ಪೃಶ್ಯತೆ ಆಚರಣೆಯಲ್ಲಿದ್ದರೂ, ಭಯದಿಂದಾಗಿ ಅದನ್ನು ಪ್ರಶ್ನಿಸಲು ದಲಿತರು ಹಿಂಜರಿಯುತ್ತಿದ್ದಾರೆ’ ಎನ್ನುತ್ತಾರೆ ಸಮುದಾಯದ ಮುಖಂಡ ಮುನಿಯಪ್ಪ.

‘ಇಲ್ಲಿರುವ ಬಹುತೇಕ ದಲಿತರು ಕೂಲಿ ಕೆಲಸಕ್ಕೆ ಹೋಗುವವರು. ಇತರ ಸಮುದಾಯದವರ ಮನೆ, ಜಮೀನಿನಲ್ಲೇ ಅವರು ಕೆಲಸ ಮಾಡಬೇಕು. ಸಾಲವನ್ನೂ ಅವರ ಬಳಿಯೇ ತೆಗೆದುಕೊಳ್ಳುತ್ತಾರೆ. ಜೀವನೋಪಾಯಕ್ಕಾಗಿ ಅವರನ್ನೇ ಅವಲಂಬಿಸ‌ಬೇಕಾಗಿದೆ. ನರೇಗಾ ಯೋಜನೆಯ ಅಡಿಯಲ್ಲಿ ದಲಿತರಲ್ಲಿ ಕೆಲವರಿಗೆ 30 ದಿನಗಳ ಕಾಲ ಕೆಲಸ ಸಿಕ್ಕಿದ್ದು ಬಿಟ್ಟರೆ, ಸರ್ಕಾರದಿಂದ ಬೇರೇನೂ ಸೌಲಭ್ಯ ಸಿಕ್ಕಿಲ್ಲ. ಹಣ ಸಂಪಾದನೆಗೆ ಪರ್ಯಾಯ ವ್ಯವಸ್ಥೆ ಇದ್ದರೆ, ಅವರಿಗೂ ಧೈರ್ಯ ಬರುತ್ತದೆ. ಅದಕ್ಕಾಗಿ ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳಿದರು.

* ಹಿಂದೆಯೇ ಈ ವಿಚಾರ ಗಮನಕ್ಕೆ ಬಂದಿತ್ತು. ಹಲವು ಸಭೆಗಳನ್ನು ನಡೆಸಿ ಗ್ರಾಮಸ್ಥರಿಗೆ ತಿಳಿ ಹೇಳಲಾಗಿದೆ. ಮತ್ತೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು

- ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ

* ಅಧಿಕಾರಿಗಳು ಎಚ್ಚರಿಕೆ ನೀಡಿದ ಮೇಲೂ ಅನಿಷ್ಟ ಪದ್ಧತಿ ಮುಂದುವರಿದಿದೆ ಎಂದಾದರೆ, ಇದರ ನಿರ್ಮೂಲನೆಗೆ ಕ್ರಮ ಕೈಗೊಳ್ಳುತ್ತೇವೆ

- ಎಚ್‌.ಡಿ.ಆನಂದ ಕುಮಾರ್‌, ಎಸ್‌ಪಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು