ಸೋಮವಾರ, ಡಿಸೆಂಬರ್ 16, 2019
18 °C
ತೆಲಂಗಾಣ ಪಶುವೈದ್ಯೆ ಅತ್ಯಾಚಾರ–ಹತ್ಯೆ ಪ್ರಕರಣ

ಸಾಂತ್ವಾನ ಸಾಕು, ನ್ಯಾಯಬೇಕು: ಕುಟುಂಬದ, ಸ್ನೇಹಿತರ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ತೆಲಂಗಾಣದ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ಆಕ್ರೋಶ ತೀವ್ರ ಸ್ವರೂಪ ಪಡೆದಿದೆ. ಆದರೆ, ಅತ್ಯಾಚಾರ ಪ್ರಕರಣಗಳನ್ನು ಖಂಡಿಸುವ ಸ್ವರೂಪ ಬದಲಾಗಿದೆ. 

‘ಪ್ರತಿಭಟನೆ, ಮೋಂಬತ್ತಿ ಮೆರವಣಿಗೆಗಳಿಂದ ಯಾವುದೇ ಉಪಯೋಗವಿಲ್ಲ. ಕಠಿಣ ಕಾನೂನು ಮತ್ತು ತ್ವರಿತಗತಿಯಲ್ಲಿ ನ್ಯಾಯದಾನ ಆಗಬೇಕು’ ಎಂದು ಒತ್ತಾಯ ಎಲ್ಲೆಡೆ ಕೇಳಿಬರುತ್ತಿದೆ. ಪಶುವೈದ್ಯೆಯ ಕುಟುಂಬದವರು, ಸ್ನೇಹಿತರು ಇದೇ ಮಾತು ಹೇಳಿದ್ದಾರೆ. ರಾಜಕಾರಣಿಗಳು, ಸಿನಿಮಾ ನಟರೂ ಇದೇ ಮಾತು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಇದೇ ಅಭಿಪ್ರಾಯ ರೂಪುಗೊಳ್ಳುತ್ತಿದೆ. ಪೊಲೀಸರು ಮತ್ತು ರಾಜಕಾರಣಿಗಳ ಮೇಲೆ ಅಸಹನೆ ವ್ಯಕ್ತವಾಗುತ್ತಿದೆ.

ರಾಜಕಾರಣಿಗಳಿಗೆ, ಮಾಧ್ಯಮದವರಿಗೆ ಪ್ರವೇಶವಿಲ್ಲ: ‘ರಾಜಕಾರಣಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಹೊರಗಿನವರಿಗೆ ಪ್ರವೇಶವಿಲ್ಲ. ಸಾಂತ್ವಾನ ಸಾಕು, ತ್ವರಿತವಾಗಿ ನ್ಯಾಯಬೇಕು’.

ಪಶುವೈದ್ಯೆಯ ಮನೆ ಇರುವ ಕಾಲೊನಿಯ ಪ್ರವೇಶದ್ವಾರದಲ್ಲಿ ಭಾನುವಾರ ಕಂಡ ಫಲಕ ಇದು. ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಲು ಬರುವ ರಾಜಕಾರಣಿಗಳು, ಸಿನಿಮಾ ನಟರು ಮತ್ತು ಮಾಧ್ಯಮಪ್ರತಿನಿಧಿಗಳು ಕಾಲೊನಿಯನ್ನು ಪ್ರವೇಶಿಸದಂತೆ ತಡೆಯುತ್ತಿದ್ದಾರೆ. ಒತ್ತಾಯದ ಪ್ರವೇಶಕ್ಕೆ ಯತ್ನಿಸಿದವರನ್ನು ಅಲ್ಲಿಂದ ಓಡಿಸಿದ್ದಾರೆ.

ಮುಖ್ಯಮಂತ್ರಿ ಕೆ.ಸಿ.ರಾವ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಕೃತ್ಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದುದ್ದಕ್ಕೆ ಇಲ್ಲಿನ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಘಟನೆ ನಡೆದು ನಾಲ್ಕು ದಿನವಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ತ್ವರಿತವಾಗಿ ನ್ಯಾಯಕೊಡಿಸುತ್ತೇವೆ ಎಂದು ಈವರೆಗೆ ಒಂದು ಮಾತೂ ಹೇಳಿಲ್ಲ’ ಎಂದು ಇಲ್ಲಿನ ಮಹಿಳೆಯೊಬ್ಬರು ಪ್ರಶ್ನಿಸಿದ್ದಾರೆ. ಈ ವಿಡಿಯೊ ವೈರಲ್‌ ಆದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಎಲ್ಲದಕ್ಕೂ ಟ್ವೀಟ್‌ ಮಾಡುತ್ತಾರೆ. ಈ ಬಗ್ಗೆ ಇನ್ನೂ ಟ್ವೀಟ್‌ ಏಕೆ ಮಾಡಿಲ್ಲ?’ ಎಂದು ಇಲ್ಲಿನ ಯುವತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪಶುವೈದ್ಯೆಯನ್ನು ಕೊಂದ ರೀತಿಯಲ್ಲಿಯೇ, ಅತ್ಯಾಚಾರಿಗಳನ್ನೂ ಏಕೆ ಕೊಲ್ಲಬಾರದು? ಅವರು ಮಾಡಿದ್ದನ್ನೇ, ಅವರೂ ಏಕೆ ಅನುಭವಿಸಬಾರದು?’ ಎಂದು ಬಾಲಕಿಯೊಬ್ಬಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತ್ವರಿತಗತಿ ನ್ಯಾಯಾಲಯ: ಮುಖ್ಯಮಂತ್ರಿ

* ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆ: ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಘೋಷಣೆ

* ಪಶುವೈದ್ಯೆಯ ಸೋದರಿ ನೀಡಿದ ದೂರು ಸ್ವೀಕರಿಸಲು ನಿರಾಕರಿಸಿದ್ದ ಪೊಲೀಸರನ್ನು ಅಮಾನತು ಮಾಡಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗದ ಶಿಫಾರಸಿನಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ

* ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ಮತ್ತಷ್ಟು ವಿಚಾರಣೆ ನಡೆಸಬೇಕಿದೆ. ಹೀಗಾಗಿ ಆರೋಪಿಗಳನ್ನು ಪೊಲೀಸ್ ಬಂಧನಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ಪೊಲೀಸರ ಸಿದ್ಧತೆ

ಸರ್ಕಾರಕ್ಕೆ ರಾಜ್ಯಪಾಲೆಯ ಪತ್ರ

ಪಶುವೈದ್ಯೆಯ ಪ್ರಕರಣದ ವಿಚಾರಣೆ ತ್ವರಿತವಾಗಿ ನಡೆದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ತೆಲಂಗಾಣ ರಾಜ್ಯಪಾಲೆ ತಮಿಳುಸಾಯಿ ಸೌಂದರರಾಜನ್‌/ ಒತ್ತಾಯಿಸಿದ್ದಾರೆ. ಈ ಸಂಬಂಧ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ದೂರನ್ನು ನಿರ್ವಹಿಸುವಲ್ಲಿ ಪೊಲೀಸ್ ಸಿಬ್ಬಂದಿಯಿಂದ ಲೋಪವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಹೇಳಿದೆ. ಪೊಲೀಸ್ ಇಲಾಖೆಯಲ್ಲಿ ಇರುವ ಲೋಪವನ್ನು ಶೀಘ್ರವೇ ಸರಿಪಡಿಸಿ. ರಾಜ್ಯದಲ್ಲಿ ಸುರಕ್ಷತೆ ಹೆಚ್ಚಿಸಿ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಪೆಟ್ರೋಲ್‌ ಬಂಕ್‌ ಮೇಲೆ ಪ್ರಕರಣ

ಪಶುವೈದ್ಯೆಯನ್ನು ಸುಡಲು ಬಳಸಿದ್ದ ಪೆಟ್ರೋಲ್‌ ಅನ್ನು ಆರೋಪಿಗಳು ಖರೀದಿಸಿದ್ದ ಪೆಟ್ರೋಲ್‌ ಬಂಕ್‌ನ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.

ರಾಜ್ಯದ ಬಂಕ್‌ಗಳಲ್ಲಿ ಬಾಟಲಿ ಮತ್ತು ಕ್ಯಾನ್‌ಗಳಿಗೆ ಪೆಟ್ರೋಲ್‌–ಡೀಸೆಲ್ ಹಾಕುವುದನ್ನು ನಿಷೇಧಿಸಲಾಗಿದೆ. ಈಚೆಗೆ ತಹಶೀಲ್ದಾರ್‌ ವಿಜಯಾ ರೆಡ್ಡಿ ಅವರ ಮೇಲೆ ಪೆಟ್ರೋಲ್‌ ಸುರಿದು, ಹತ್ಯೆ ಮಾಡಿದ ನಂತರ ಸರ್ಕಾರವು ಈ ನಿಷೇಧವನ್ನು ಜಾರಿಗೆ ತಂದಿತ್ತು.

‘ಅತ್ಯಾಚಾರ ಆರೋಪಿಗಳು ಬಂಕ್‌ನಲ್ಲಿ ಬಾಟಲಿಗೆ ಪೆಟ್ರೋಲ್‌ ಹಾಕಿಸಿಕೊಂಡಿದ್ದಾರೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಬಾಟಲಿಗೆ ಪೆಟ್ರೋಲ್ ಹಾಕಬಾರದು ಎಂಬ ನಿಷೇಧವನ್ನು ಬಂಕ್‌ನ ಸಿಬ್ಬಂದಿ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಚಿಂತನೆ ನಡೆಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಕಾಲತ್ತು ನಿರಾಕರಿಸಿದರೆ ಏನಾಗುತ್ತದೆ?

ಅತ್ಯಾಚಾರ ಆರೋಪಿಗಳ ಪರವಾಗಿ ವಕಾಲತ್ತು ವಹಿಸುವುದಿಲ್ಲ ಎಂದು ತೆಲಂಗಾಣದ ಹಲವು ಜಿಲ್ಲೆಗಳ ವಕೀಲರ ಸಂಘಗಳು ಘೋಷಿಸಿವೆ. ಆರೋಪಿಗಳ ಪರ ವಕಾಲತ್ತು ವಹಿಸಲು ಯಾವ ವಕೀಲರೂ ಮುಂದೆ ಬರದೇ ಇದ್ದರೆ ಏನಾಗುತ್ತದೆ ಎಂಬುದನ್ನು ರಂಗಾರೆಡ್ಡಿ ಜಿಲ್ಲೆಯ ವಕೀಲರ ಸಂಘದ ಅಧ್ಯಕ್ಷ ಮಟ್ಟಪಲ್ಲಿ ಶ್ರೀನಿವಾಸ ವಿವರಿಸಿದ್ದಾರೆ.

‘ವಕಾಲತ್ತು ವಹಿಸಿಕೊಳ್ಳಲು ಯಾವ ವಕೀಲರೂ ಮುಂದೆ ಬರದೇ ಇದ್ದರೆ, ನ್ಯಾಯಾಲಯ ಮುಂದಿನ ಕ್ರಮ ತೆಗೆದುಕೊಳ್ಳುತ್ತದೆ. ವಕೀಲನನ್ನು ನೇಮಕ ಮಾಡಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯವು ನಿರ್ದೇಶಕ ನೀಡುತ್ತದೆ. ಪ್ರಾಧಿಕಾರವು ವಕೀಲರನ್ನು ಆಯ್ಕೆಮಾಡಿ, ವಕಾಲತ್ತು ವಹಿಸುವಂತೆ ನಿರ್ದೇಶನ ನೀಡುತ್ತದೆ. ಅದನ್ನು ವಕೀಲ ತಿರಸ್ಕರಿಸುವ ಹಾಗಿಲ್ಲ’ ಎಂದು ಅವರು ವಿವರಿಸಿದ್ದಾರೆ.

‘ಇಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆ, ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ ಹಲವು ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ಗಳ ಅಡಿ ಆರೋಪ ಸಾಬೀತಾದರೆ, ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಲು ಅವಕಾಶವಿದೆ’ ಎಂದು ಅವರು ವಿವರಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು