ಮಧ್ಯಪ್ರದೇಶ: ಕಮಲ್‌ನಾಥ್‌ ಆಪ್ತರಿಗೆ ಐ.ಟಿ ಆಘಾತ

ಶನಿವಾರ, ಏಪ್ರಿಲ್ 20, 2019
29 °C
ಕಾರ್ಯಾಚರಣೆಗೆ ಸಿಆರ್‌ಪಿಎಫ್‌ ಬಳಕೆ: ಅಪಾರ ನಗದು, ದಾಖಲೆಗಳು ವಶ

ಮಧ್ಯಪ್ರದೇಶ: ಕಮಲ್‌ನಾಥ್‌ ಆಪ್ತರಿಗೆ ಐ.ಟಿ ಆಘಾತ

Published:
Updated:
Prajavani

ನವದೆಹಲಿ/ಭೋಪಾಲ್‌: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ ಅವರ ಆಪ್ತರ ಮನೆ ಹಾಗೂ ಕಚೇರಿಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿ ಮತ್ತು ಮಧ್ಯಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ದಾಳಿ ನಡೆಸಿ ಅಪಾರ ನಗದು ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕನಿಷ್ಠ 50 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಇಂದೋರ್‌, ಭೋಪಾಲ್‌, ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್‌ನಲ್ಲಿ ದಾಳಿ ನಡೆಸಲಾಗಿದೆ. ಕಮಲನಾಥ್ ಅವರ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದ ಪ್ರವೀಣ್‌ ಕಕ್ಕಡ್‌, ಮಾಜಿ ಸಲಹೆಗಾರ ರಾಜೇಂದ್ರ ಮಿಗ್ಲಾಣಿ ಹಾಗೂ ಸೋದರ ಸಂಬಂಧಿ ಕಂಪನಿಯಾದ ’ಮೊಸೆರ್‌ ಬಯೇರ್’ ಮತ್ತು ಸೋದರಳಿಯ ರಾತುಲ್‌ ಪುರಿ ಅವರ ಕಂಪನಿಯ ಎಕ್ಸಿಕ್ಯೂಟಿವ್ಸ್‌ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಕೋಲ್ಕತ್ತದ ಉದ್ಯಮಿ ಪರಾಸ್ ಮಾಲ್‌ ಲೋಧಾ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆಯೂ ದಾಳಿ ನಡೆಸಲಾಗಿದೆ. ಇಲಾಖೆಯ ದೆಹಲಿ ಘಟಕ ಈ ಕಾರ್ಯಾಚರಣೆಯನ್ನು ರಹಸ್ಯವಾಗಿ ಕೈಗೊಂಡಿತ್ತು. ಕಾರ್ಯಾಚರಣೆಗೆ ಸಿಆರ್‌ಪಿಎಫ್‌ ಯೋಧರನ್ನು ನಿಯೋಜಿಸಲಾಗಿತ್ತು.  ಸಾಮಾನ್ಯವಾಗಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುವ ಸಂದರ್ಭದಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆಯಲಾಗುತ್ತದೆ.

ಬೆಳಗಿನ ಜಾವ 3ಗಂಟೆಗೆ ಸುಮಾರು 200 ಮಂದಿ ಆದಾಯ ತೆರಿಗೆ ಮತ್ತು ಪೊಲೀಸ್‌ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹವಾಲಾ ಹಣ ಸಾಗಿಸಿದ ಶಂಕೆ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ವೇಳಾಪಟ್ಟ ಪ್ರಕಟವಾಗುವ ಕೆಲವೇ ಕ್ಷಣಗಳ ಮುನ್ನವೇ ಕಕ್ಕಡ್‌ ಮತ್ತು ಮಿಗ್ಲಾಣಿ ತಮ್ಮ ಹುದ್ದೆಗಳನ್ನು ತ್ಯಜಿಸಿದ್ದರು.

ಕಕ್ಕಡ್‌ ಅವರು ಮಧ್ಯಪ್ರದೇಶದ ಮಾಜಿ ಪೊಲೀಸ್‌ ಅಧಿಕಾರಿ. ಕಮಲನಾಥ್‌ ಅವರು ಅಧಿಕಾರಕ್ಕೆ ಬಂದ ಬಳಿಕ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕಕ್ಕಡ್‌ ಅವರನ್ನು ನೇಮಿಸಲಾಗಿತ್ತು.

ಯುಪಿಎ ಆಡಳಿತದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಕಾಂತಿಲಾಲ್‌ ಭೂರಿಯಾ ಅವರಿಗೂ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಕಕ್ಕಡ್‌ ಕಾರ್ಯನಿರ್ವಹಿಸಿದ್ದರು. ಕಕ್ಕಡ್‌ ಅವರ ಕುಟುಂಬ ಹಲವು ಉದ್ಯಮಗಳನ್ನು ನಡೆಸುತ್ತಿದೆ.

ಆಗಸ್ಟಾವೆಸ್ಟ್‌ಲ್ಯಾಂಡ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ರಾತುಲ್‌ ಪುರಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸಿತ್ತು.  ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್‌ ಟೀಕಿಸಿದೆ.

*
‘ರಾಜಕೀಯ ದ್ವೇಷದಿಂದ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಚಂದ್ರಬಾಬು ನಾಯ್ಡು, ಎಂ.ಕೆ. ಸ್ಟಾಲಿನ್‌ ಕೂಡ ಈ ಬಗ್ಗೆ ದೂರಿದ್ದರು
-ಭೂಪೇಂದ್ರ ಗುಪ್ತಾ, ಕಾಂಗ್ರೆಸ್‌ ಮಾಧ್ಯಮ ಘಟಕದ ಉಪಾಧ್ಯಕ್ಷ

*
ಕಳ್ಳರು ಪೊಲೀಸರನ್ನು ದೂರುತ್ತಾರೆ. ಕೋಟ್ಯಂತರ ರೂಪಾಯಿ ಕಪ್ಪು ಹಣವನ್ನು ಕಮಲನಾಥ್‌ ಅವರ ಆಪ್ತರಿಂದ ವಶಪಡಿಸಿಕೊಳ್ಳಲಾಗಿದೆ.
-ಕೈಲಾಶ್‌ ವಿಜಯ್‌ ವರ್ಗಿಯಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !