ಸತ್ತವರ ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ: ವಾಯುಪಡೆ ಮುಖ್ಯಸ್ಥ ಧನೋಆ

ಬುಧವಾರ, ಮಾರ್ಚ್ 27, 2019
22 °C
ದಾಳಿ ಕುರಿತು ವಾಯುಪಡೆ ಮುಖ್ಯಸ್ಥ ಧನೋಆ

ಸತ್ತವರ ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ: ವಾಯುಪಡೆ ಮುಖ್ಯಸ್ಥ ಧನೋಆ

Published:
Updated:
Prajavani

ಕೊಯಮತ್ತೂರು: ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಹೊಂದಿದ್ದ ತರಬೇತಿ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ ಎಷ್ಟು ಜನರು ಸತ್ತಿದ್ದಾರೆ ಎಂಬುದನ್ನು ಲೆಕ್ಕ ಹಾಕುವುದು ತಮ್ಮ ಕೆಲಸ ಅಲ್ಲ. ಗುರಿಯ ಮೇಲೆ ನಿಖರ ದಾಳಿ ನಡೆಸುವುದಷ್ಟೇ ತಮ್ಮ ಕರ್ತವ್ಯ. ಸಾವಿನ ವಿವರಗಳನ್ನು ಸರ್ಕಾರ ನೀಡಬೇಕು ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಬಿ.ಎಸ್‌. ಧನೋಆ ಹೇಳಿದ್ದಾರೆ. 

ಸಾವಿನ ಸಂಖ್ಯೆ ಎಷ್ಟು ಎಂಬ ರಾಜಕೀಯ ವಿವಾದ ಇದರಿಂದಾಗಿ ಇನ್ನಷ್ಟು ಸಂಕೀರ್ಣಗೊಂಡಿದೆ. ಫೆ. 26ರ ದಾಳಿಯಲ್ಲಿ ಸತ್ತವರು ಎಷ್ಟು ಎಂಬುದು ನಿಗೂಢವಾಗಿ ಉಳಿದಿದೆ. 

350ರಷ್ಟು ಉಗ್ರರು ಸತ್ತಿದ್ದಾರೆ ಎಂದು ಸರ್ಕಾರದ ಮೂಲಗಳು ಆರಂಭದಲ್ಲಿ ಹೇಳಿದ್ದವು. 250 ಮಂದಿ ಸತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಕನಿಷ್ಠ ಮಟ್ಟದ ಹಾನಿಯಷ್ಟೇ ಆಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ, ಈ ಬಗ್ಗೆ ಸ್ಪಷ್ಟ ಮಾಹಿತಿ ಕೊಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಸಾವು ನೋವಿಗೆ ಸಂಬಂಧಿಸಿ ಅಧಿಕೃತ ಮಾಹಿತಿಯನ್ನು ಸರ್ಕಾರ ಈವರೆಗೆ ಬಿಡುಗಡೆ ಮಾಡಿಲ್ಲ.

ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷದಂತಹ ಸ್ಥಿತಿ ನಿರ್ಮಾಣವಾದ ಬಳಿಕ ಇದೇ ಮೊದಲಿಗೆ ಧನೋಆ ಅವರು ಮಾತನಾಡಿದ್ದಾರೆ.

ದಾಳಿಯಲ್ಲಿ ಎಷ್ಟು ಜನರು ಸತ್ತಿರಬಹುದು ಎಂಬ ಮಾಹಿತಿ ವಾಯುಪಡೆಗೆ ಲಭ್ಯವಾಗುವುದಿಲ್ಲ. ಗುರಿಯ ಮೇಲೆ ನಿಖರವಾದ ದಾಳಿ ನಡೆದಿದೆಯೇ ಇಲ್ಲವೇ ಎಂಬುದನ್ನು ಮಾತ್ರ ಕಾರ್ಯಾಚರಣೆ ನಂತರದ ವಿಶ್ಲೇಷಣೆಯು ತಿಳಿಸುತ್ತದೆ ಎಂದು ಧನೋಆ ಹೇಳಿದ್ದಾರೆ. 

ಬಾಂಬುಗಳು ಗುರಿಯ ಮೇಲೆ ಬಿದ್ದಿಲ್ಲ, ಬದಲಿಗೆ ಬೇರೆಡೆಗೆ ಬಿದ್ದಿವೆ ಎಂಬ ವರದಿಗಳನ್ನು ಅವರು ಅಲ್ಲಗಳೆದಿದ್ದಾರೆ. ತಮಗೆ ಸಿಕ್ಕ ಮಾಹಿತಿ ಪ್ರಕಾರ, ಗುರಿಯ ಮೇಲೆ ನಿಖರ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ದೈಹಿಕ ಸಾಮರ್ಥ್ಯವಿದ್ದರೆ ಅಭಿನಂದನ್‌ ಮತ್ತೆ ಪೈಲಟ್‌

ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ದೈಹಿಕವಾಗಿ ಸಮರ್ಥರಿದ್ದರೆ ಯುದ್ಧ ವಿಮಾನ ಪೈಲಟ್‌ ಆಗಿ ಮುಂದುವರಿಯಲಿದ್ದಾರೆ ಎಂದು ಧನೋಆ ಹೇಳಿದ್ದಾರೆ.  ಪಾಕಿಸ್ತಾನದ ಜತೆಗಿನ ವೈಮಾನಿಕ ಸಂಘರ್ಷದ ಸಂದರ್ಭದಲ್ಲಿ ವಿಮಾನದಿಂದ ಪ್ಯಾರಾಚೂಟ್‌ ಮೂಲಕ ಜಿಗಿದ ಅವರನ್ನು ಸಮಗ್ರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಿಗೆ ಬೇಕಿರುವ ಎಲ್ಲ ಚಿಕಿತ್ಸೆ ನೀಡಲಾಗಿದೆ. ಅವರು ದೈಹಿಕವಾಗಿ ಸಮರ್ಥರಿದ್ದಾರೆ ಎಂಬುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟ ಬಳಿಕ ಪೈಲಟ್‌ ಆಗಿ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !