ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಎಫ್‌–16 ಹೊಡೆದುರುಳಿಸಿದ ಸ್ಥಳ ಬಹಿರಂಗ; ವಾಯುಪಡೆ ಬಳಿ ಪುರಾವೆ

ರಡಾರ್‌ ಚಿತ್ರಗಳ ಪುರಾವೆ
Last Updated 8 ಏಪ್ರಿಲ್ 2019, 14:12 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಾಯುವಲಯ ಪ್ರವೇಶಿಸಿ ಸೇನಾ ವಲಯಗಳ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದ ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನವನ್ನು ಭಾರತದ ವಾಯುಪಡೆಯ ಮಿಗ್‌ ವಿಮಾನ ಹೊಡೆದುರುಳಿಸಿತ್ತು. ಆ ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಡಾರ್‌ನಲ್ಲಿ ಮೂಡಿರುವ ಚಿತ್ರಗಳನ್ನು ಭಾರತದ ವಾಯುಪಡೆ ಸೋಮವಾರ ಬಹಿರಂಗ ಪಡಿಸಿದೆ.

ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನವನ್ನು ಹಿಮ್ಮೆಟ್ಟಿಸಿ ಹೊಡೆದುರುಳಿಸಿದ್ದಾಗಿ ಭಾರತ ವಾಯುಪಡೆ ಈ ಹಿಂದೆ ಹೇಳಿತ್ತು. ಆದರೆ, ಪಾಕಿಸ್ತಾನ ಈವರೆಗೂ ಅದನ್ನು ಒಪ್ಪಿಲ್ಲ. ಇದರೊಂದಿಗೆ, ಪಾಕಿಸ್ತಾನದಲ್ಲಿರುವ ಎಫ್‌–16 ಯುದ್ಧ ವಿಮಾನಗಳ ಎಣಿಕೆ ಮಾಡಿರುವ ಅಮೆರಿಕ ’ಯಾವುದೇ ಯುದ್ಧ ವಿಮಾನ ನಾಪತ್ತೆಯಾಗಿಲ್ಲ, ಎಲ್ಲ ವಿಮಾನಗಳು ಎಣಿಕೆಗೆ ಸಿಕ್ಕಿವೆ’ ಎಂದು ಹೇಳಿರುವುದಾಗಿ ಅಮೆರಿಕದ ಪ್ರಮುಖ ನಿಯತಕಾಲಿಕೆಯೊಂದು ವರದಿ ಮಾಡಿತ್ತು. ಇದರ ಬೆನ್ನಲೇ ಭಾರತದ ವಾಯುಪಡೆ ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಡಾರ್‌ ಚಿತ್ರಗಳನ್ನುಬಿಡುಗಡೆ ಮಾಡಿದೆ.

ವಾಯುವಲಯದಲ್ಲಿ ಎಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆಯ(AWACS) ರಡಾರ್‌ ಚಿತ್ರಗಳನ್ನು ಬಹಿರಂಗ ಪಡಿಸಲಾಗಿದ್ದು, ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನವನ್ನು ಭಾರತದ ಮಿಗ್‌ ವಿಮಾನ ಫೆ.27ರಂದು ಹೊಡೆದುರುಳಿಸಿರುವುದಾಗಿ ವಾಯುಪಡೆ ವೈಸ್‌ ಮಾರ್ಷಲ್‌ ಆರ್‌ಜಿಕೆ ಕಪೂರ್‌ ಸ್ಪಷ್ಟಪಡಿಸಿದ್ದಾರೆ.

ಭಾರತದ ಮಿಗ್‌ ಯುದ್ಧ ವಿಮಾನ ಹಾರಾಟ ನಡೆಸಿದ್ದ ವಿಂಗ್ ಕಮಾಂಡರ್‌ ಅಭಿನಂದನ್‌, ಪಾಕಿಸ್ತಾನ ಎಫ್‌–16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಸ್ಥಳವನ್ನು ರಡಾರ್‌ ಚಿತ್ರಗಳಲ್ಲಿ ಕಪೂರ್‌ ತೋರಿಸಿದರು.

ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಲು ಎಫ್‌–16 ಯುದ್ಧ ವಿಮಾನ ಬಳಸಿರುವುದಕ್ಕೆ ಸಾಕ್ಷ್ಯದ ಜತೆಗೆ ಅದನ್ನು ಭಾರತದ ‘ಮಿಗ್‌ 21 ಬೈಸನ್‌’ ಹೊಡೆದುರುಳಿಸಿರುವುದಕ್ಕೆ ಸೂಕ್ತ ಪುರಾವೆ ಸಿಕ್ಕಂತಾಗಿದೆ ಎಂದು ವಾಯುಪಡೆ ಪ್ರಕಟಣೆ ತಿಳಿಸಿದೆ.ಉಭಯ ರಾಷ್ಟ್ರಗಳ ಯುದ್ಧ ವಿಮಾನಗಳು ಭಾರತದ ವಾಯುನೆಲೆಯಲ್ಲಿ ಕಾದಾಟದಲ್ಲಿ ತೊಡಗಿದ್ದು ಎಲೆಕ್ಟ್ರಾನಿಕ್‌ ಸಿಗ್ನೇಚರ್‌ ಹಾಗೂ ರೇಡಿಯೊ ಟ್ರಾಸ್‌ಕ್ರಿಪ್ಟ್‌ಗಳ ಮೂಲಕ ಸಾಬೀತಾಗಿದೆ ಎಂದಿದೆ.

‘ಪಾಕಿಸ್ತಾನ ತನ್ನ ಒಂದು ಎಫ್‌–16 ಯುದ್ಧ ವಿಮಾನ ಕಳೆದುಕೊಂಡಿರುವುದಕ್ಕೆ ಇನ್ನೂ ಮಹತ್ತರ ಸಾಕ್ಷ್ಯಗಳು ನಮ್ಮ ಬಳಿ ಇವೆ, ಆದರೆ ಭದ್ರತೆ ಹಾಗೂ ಗೌಪತ್ಯೆಯ ದೃಷ್ಟಿಯಿಂದ ಸಾರ್ವಜನಿಕವಾಗಿ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಾಗುತ್ತಿಲ್ಲ’ ಎಂದು ವಾಯುಪಡೆ ವೈಸ್‌ ಮಾರ್ಷಲ್‌ ಆರ್‌ಜಿಕೆ ಕಪೂರ್‌ ಹೇಳಿದ್ದಾರೆ.

ಫೆ.17ರಂದು ಪಾಕಿಸ್ತಾನದ ಡೈರೆಕ್ಟರ್‌ ಜನರಲ್‌( ಡಿಜಿ–ಐಎಸ್‌ಪಿಆರ್‌) ಪ್ರಾರಂಭದಲ್ಲಿ ‘ಮೂವರು ಪೈಲಟ್‌ಗಳ ಪೈಕಿ ಒಬ್ಬ ಪೈಲಟ್‌ ನಮ್ಮ ವಶದಲ್ಲಿದ್ದಾರೆ ಹಾಗೂ ಇಬ್ಬರು ಪಾಕಿಸ್ತಾನ ನೆಲದಲ್ಲಿದ್ದಾರೆ’ ಎಂದಿದ್ದರು. ನಂತರ ಮಾಧ್ಯಮ ಗೋಷ್ಠಿಯಲ್ಲಿ ಇಬ್ಬರು ಪೈಲಟ್‌ಗಳು ನಮ್ಮ ಬಳಿಯಿದ್ದು, ಒಬ್ಬ ಸೇನೆಯ ವಶದಲ್ಲಿ ಹಾಗೂ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದ್ದರು. ಇದನ್ನೇ ಪಾಕಿಸ್ತಾನ ಪ್ರಧಾನಿ ಸಹ ಪ್ರಕಟಣೆಯಲ್ಲಿ ತಿಳಿಸಿದ್ದರು. ಈ ಎಲ್ಲವೂ ಹೇಳುವಂತೆ, ಆ ದಿನ ಒಂದೇ ಪ್ರದೇಶದಲ್ಲಿ ಒಟ್ಟು 2 ಯುದ್ಧ ವಿಮಾನಗಳು 1.5 ನಿಮಿಷಗಳ ಅಂತರದಲ್ಲಿ ಪತನಗೊಂಡಿವೆ. ಇದು ಭಾರತದ ವಾಯುಪಡೆಯ ನಿಲುವಿಗೆ ಬಲವಾದ ಸಾಕ್ಷಿಯಂತಿದೆ ಎಂದು ಕಪೂರ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT