ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಿಯಲ್ಲಿ ಅರಳಿದ ಕೃಷಿ ಸಾಧನ

Last Updated 11 ಜೂನ್ 2018, 19:30 IST
ಅಕ್ಷರ ಗಾತ್ರ

‘ಸೈಕಲ್ ಹ್ಯಾಂಡಲ್, ಕಬ್ಬಿಣದ ತಗಡು ಸೇರಿ ಹೊಲದ ಮಣ್ಣು ಹದಮಾಡುವ ಕೃಷಿ ಉಪಕರಣವಾಗಿದೆ. ಇದನ್ನು ಹಿಡ್ಕೊಂಡು ನಡೆದಾಡಿಕೊಂಡೇ ಹೊಲದಲ್ಲಿನ ಹೆಂಟೆ ಮಣ್ಣನ್ನು ಹದ ಮಾಡಬಹುದು… ಕಬ್ಬಿಣದ ತಗಡು ಸೇರಿಸಿ ಮಾಡಿರುವ ಅಗಲವಾದ ಸಲಿಕೆ ಬಳಸಿ, ಹೊಲದಲ್ಲಿ ಗೊಬ್ಬರದ ಜತೆ ಮಣ್ಣು ಹರಗಬಹುದು… ರೇಷ್ಮೆ ಹುಳುವಿಗೆ ಬೇಕಾದ ಸೊಪ್ಪು ಕತ್ತರಿಸಲು ಈ ಕಟಾವು ಯಂತ್ರ ಬಳಸಬಹುದು.. ಇವೆಲ್ಲ ನಾನೇ ತಯಾರಿಸಿದ್ದು…!

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಅಕ್ಕಿಮಂಗಲದ ಕೃಷಿಕ ಮಂಜುನಾಥ್, ತಾವೇ ತಯಾರಿಸಿದ ಕೃಷಿ ಉಪಕರಣಗಳನ್ನು ಸಾಲಾಗಿ ಜೋಡಿಸುತ್ತಾ, ಒಂದೊಂದರ ಕೆಲಸವನ್ನೇ ವಿವರಿಸುತ್ತಿದ್ದರು. ಒಂದೊಂದು ಉಪಕರಣವೂ, ಕಂಪೆನಿಯವರು ಸಿದ್ಧಪಡಿಸಿದ ವಸ್ತುಗಳಂತೆ ಕಾಣುತ್ತಿದ್ದವು. ವಿಶೇಷವೆಂದರೆ, ಈ ಎಲ್ಲ ಪರಿಕರಗಳಿಗೂ ನಿರುಪಯುಕ್ತ ವಸ್ತುಗಳೇ ಕಚ್ಚಾ ವಸ್ತುಗಳು. ಹಾಗಾಗಿ, ನಯಾ ಪೈಸೆ ಖರ್ಚಿಲ್ಲದೇ, ಉಪಕರಣಗಳನ್ನು ತಯಾರಿಸಿಕೊಂಡಿದ್ದಾರೆ ಮಂಜುನಾಥ್.

ರೇಷ್ಮೆ ಕೃಷಿಕರಾಗಿರುವ ಮಂಜುನಾಥ್, ಬಿಎಸ್‌ಸಿ ಪದವೀಧರರು. ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದು, ಕವಿತೆಗಳನ್ನು ಬರೆಯುತ್ತಾರೆ. ನಾಲ್ಕೈದು ಕವನಸಂಕಲನಗಳು ಪ್ರಕಟಗೊಂಡಿವೆ. ಪದವಿ ಓದಿ, ಉದ್ಯೋಗಕ್ಕಾಗಿ ಬೆಂಗಳೂರು ಎಡತಾಕಿದರೂ, ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡಲು ಮನಸ್ಸು ಒಪ್ಪಿಲ್ಲ. ಹಾಗಾಗಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುಲು ಹುಟ್ಟಿದ ಊರಿಗೆ ಮರಳಿದರು. ಅಪ್ಪನಿಂದ ಬಂದಿದ್ದ ಒಂದೂವರೆ ಎಕರೆ ಜಮೀನಿನಲ್ಲಿ ಹಿಪ್ಪುನೇರಳೆ ಬೆಳದು, ರೇಷ್ಮೆ ಹುಳು ಸಾಕಾಣಿಕೆ ಆರಂಭಿಸಿದರು.

ರೇಷ್ಮೆ ಕೃಷಿ ಆರಂಭಿಸಿದಾಗ, ಕೃಷಿ ಚಟುವಟಿಕೆಗಳಿಗೆ ಉಪಕರಣಗಳು ಬೇಕಾಯಿತು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಹಳ್ಳಿಗೆ ಮರಳಿದ ಮಂಜುನಾಥ್, ಕೃಷಿ ಪರಿಕರಗಳ ವಿಚಾರದಲ್ಲೂ ಅದೇ ಸಿದ್ಧಾಂತ ಅನುಸರಿಸಿದರು. ಮೊದಲಿಗೆ ಹೊಲದ ಮಣ್ಣನ್ನು ಹದಗೊಳಿಸುವ ಉಪಕರಣ ತಯಾರಿಸಿದರು. ವ್ಯರ್ಥವಾಗಿದ್ದ ಕಬ್ಬಿಣದ ತಗಡು ಹಾಗೂ ಸೈಕಲ್‌ ಹ್ಯಾಂಡಲ್‍ ಬಳಸಿ, ಈ ಪರಿಕರ ತಯಾರಿಸಿದರು. ಹೊಲದಲ್ಲಿ ಚೆಲ್ಲಿದ ಗೊಬ್ಬರವನ್ನು ಮಣ್ಣಿನೊಂದಿಗೆ ಹರಗಲು ಬೇಕಾದ ಉಪಕರಣ ತಯಾರಿಸಿದರು. ಕಳೆ ತೆಗೆಯಲು ಸಿದ್ದಪಡಿಸಿರುವ ಸಾಧನವಂತೂ ತುಂಬಾ ಸರಳವಾಗಿದ್ದು, ಯಾರು ಬೇಕಾದರೂ ಸುಲಭವಾಗಿ ಬಳಸಬಹುದಾಗಿದೆ.

ಕೊಡಲಿಗಿಂತ ಹರಿತವಾದ ದಪ್ಪ ತಗಡಿನ ಕೊಡಲಿಯನ್ನು ತಯಾರಿಸಿರುವ ಮಂಜುನಾಥ್, ಹಿಪ್ಪುನೇರಳೆ ಸೊಪ್ಪನ್ನು ಕತ್ತರಿಸಲು ಹರಿತವಾದ ಕಟಾವು ಉಪಕರಣವನ್ನು ಸಿದ್ಧಪಡಿಸಿದ್ದಾರೆ. ಪ್ರತಿ ಉಪಕರಣಕ್ಕೂ ಗಟ್ಟಿಮುಟ್ಟಾದ ಮರದ ಹಿಡಿಕೆ ಹಾಕಿದ್ದಾರೆ. ಅಗತ್ಯವಿಲ್ಲದ ಸಾಮಗ್ರಿಗಳಿಗೆ ಕಬ್ಬಿಣದ ಕೊಳವೆಗಳನ್ನು ಹಿಡಿಕೆಗಳನ್ನಾಗಿ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.

‘ಉಪಕರಣ ತಯಾರಿಸುವ ಸಾಹಸ ಏಕೆ’ ಎಂದು ಮಂಜುನಾಥ್ ಅವರನ್ನು ಕೇಳಿದರೆ, ಕುತೂಹಲಕರ ವಿಚಾರವನ್ನು ತೆರೆದಿಡುತ್ತಾರೆ.

‘ಅಕ್ಕಿಮಂಗಲ ಗ್ರಾಮಕ್ಕೆ ಬಸ್ ಸೌಲಭ್ಯವಿಲ್ಲ. ಬಸ್ ಹಿಡಿಯಬೇಕೆಂದರೆ ಗ್ರಾಮದಿಂದ ಸಂತೆಕಲ್ಲಳ್ಳಿ ಗೇಟ್‌ವರೆಗೆ ನಾಲ್ಕೈದು ಕಿ.ಮೀ ದೂರ ನಡೆದು ಹೋಗಬೇಕು. ಕೃಷಿ ಉಪಕರಣಗಳನ್ನು ತರಲು ದೂರದ ಚಿಂತಾಮಣಿಗೆ ಅಥವಾ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ಹೋಗಬೇಕು. ಹೀಗೆ ಪಟ್ಟಣ, ನಗರಗಳಿಗೆ ಹೊರಟರೆ ಒಂದು ದಿನ ಕಳೆದು ಹೋಗುತ್ತದೆ. ಹೇಳಿಕೇಳಿ ಬಡ ರೈತ ನಾನು. ಹಾಗಾಗಿ ನನಗೆ ಬೇಕಾದ ಪರಿಕರಗಳನ್ನು ನಾನೇ ತಯಾರಿಸಿಕೊಳ್ಳಲು ಆರಂಭಿಸಿದೆ. ನೆರೆ ಹೊರೆಯವರು, ಪರಿಚಿತರು, ತಮಗೆ ಬೇಡ ಎಂದು ಬಿಸಾಡಿದ ವಸ್ತುಗಳನ್ನೇ ಸಂಗ್ರಹಿಸಿ, ಹಂತ ಹಂತವಾಗಿ ಒಂದೊಂದು ಸಾಧನಗಳನ್ನು ತಯಾರಿ ಮಾಡಿಕೊಂಡೆ. ಸದ್ಯ ಯಾವ ಸಲಕರಣೆಯನ್ನು ಕೊಂಡು ತರುವ ಅಗತ್ಯ ನನಗಿಲ್ಲ’ ಎಂದು ನಗುತ್ತಲೇ ಹೇಳುತ್ತಾರೆ ಮಂಜುನಾಥ್.

ಕೃಷಿ ಬದುಕು ಕಷ್ಟ. ಸ್ವಾವಲಂಬಿ ಬದುಕು ಇನ್ನೂ ಕಷ್ಟ ಎಂದು ಹೇಳಿಕೊಂಡು ಕೃಷಿಯಿಂದ ದೂರವಾಗುವವರಿಗೆ ಮಂಜುನಾಥ್ ಅವರ ಸ್ವಾವಲಂಬಿ ಬದುಕು ಒಂದು ಉತ್ತಮ ನಿದರ್ಶನವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT