ಬುಧವಾರ, ಮೇ 27, 2020
27 °C
ಕೇಂದ್ರ ಸರ್ಕಾರದ ಸಮೀಕ್ಷೆ

ದೇಶದಲ್ಲಿ ಚಿಕಿತ್ಸಾ ಸೌಲಭ್ಯಗಳ ತೀವ್ರ ಕೊರತೆ: ಐಎಎಸ್‌ ಅಧಿಕಾರಿಗಳಿಂದ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌–19ಗೆ ಚಿಕಿತ್ಸೆ ನೀಡುವ ಗಂಭೀರ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಪ್ರಮಾಣದ ವೈದ್ಯಕೀಯ ಸೌಲಭ್ಯಗಳು ದೇಶದಲ್ಲಿ ಇಲ್ಲ’ ಎಂದು ಮೂರನೇ ಒಂದರಷ್ಟು ಐಎಎಸ್ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪರಿಸ್ಥಿತಿ ಗಂಭೀರವಾಗಿದೆ. ಜನತೆ ಆತಂತಕ್ಕೆ ಒಳಗಾಗಿದ್ದಾರೆ. ತೀವ್ರ ನಿಗಾ ಘಟಕ, ವೆಂಟಿಲೇಟರ್‌, ಪ್ರತ್ಯೇಕ ನಿಗಾಕ್ಕೆ ಅಗತ್ಯವಿರುವ ಹಾಸಿಗೆಗಳ ಸೌಲಭ್ಯ, ಮುಖ, ಕೈಗವಸು ಸೇರಿ ಸಿಬ್ಬಂದಿಗೆ ವೈಯಕ್ತಿಕ ಸುರಕ್ಷತಾ ಪರಿಕರಗಳ ಕೊರತೆ ತೀವ್ರವಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್‌ ಎದುರಿಸಲು ಆಗಿರುವ ಸಿದ್ಧತೆಯ ಭಾಗವಾಗಿ ಕೇಂದ್ರ ಸರ್ಕಾರ ಈಚೆಗೆ ಸಮೀಕ್ಷೆ ನಡೆಸಿ ಐಎಎಸ್ ಅಧಿಕಾರಿಗಳ ಅಭಿಪ್ರಾಯಗಳನ್ನು ಕೇಳಿತ್ತು. ಪ್ರಮುಖವಾಗಿ 2014–2018ನೇ ಬ್ಯಾಚ್‌ಗಳ ಐಎಎಸ್‌ ಅಧಿಕಾರಿಗಳಿಗೆ ಹೀಗೆ ಪ್ರಶ್ನಾವಳಿಯನ್ನು ಕಳುಹಿಸಲಾಗಿತ್ತು.

ಸ್ಥಳೀಯವಾಗಿ ಅಗತ್ಯ ಸಿದ್ಧತೆ ಆಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ಕೇಂದ್ರ ಸರ್ಕಾರಕ್ಕಿಂತಲೂ ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಸರ್ಕಾರಗಳು ಈ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಹುತೇಕ ಜಿಲ್ಲೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಚಿಕಿತ್ಸಾ ಸೌಲಭ್ಯಗಳು ಅಗತ್ಯ ಪ್ರಮಾಣದಲ್ಲಿ ಇಲ್ಲ. ತಾಲ್ಲೂಕು ಹಂತದ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಮುಖ್ಯವಾಗಿ ಈಶಾನ್ಯ ರಾಜ್ಯಗಳಲ್ಲಿ ಸಜ್ಜಾಗಿವೆ. ಆದ್ಯತೆ ಮೇರೆಗೆ ದೇಶದಾದ್ಯಂತ ಜಿಲ್ಲಾ ಹಂತಗಳಲ್ಲಿ ಆರೋಗ್ಯ ಕೇಂದ್ರಗಳ ಸಾಮರ್ಥ್ಯ ಹೆಚ್ಚಿಸಲು ಸಿಬ್ಬಂದಿಗೆ ತರಬೇತಿ ನೀಡಬೇಕಾಗಿದೆ ಎಂದು ಹೇಳಿದ್ದಾರೆ.

ಧಾರಾವಿ: 300 ಮನೆಗಳಿಗೆ ದಿಗ್ಬಂಧನ 
ಮುಂಬೈ (ಪಿಟಿಐ): ಇಲ್ಲಿನ ಧಾರಾವಿ ಕೊಳೆಗೇರಿಯಲ್ಲಿ ವ್ಯಕ್ತಿಯೊಬ್ಬರು ಕೋವಿಡ್‌–19ಗೆ ಬಲಿಯಾದ ಹಿಂದೆಯೇ ಅಧಿಕಾರಿಗಳು, ಆತ ವಾಸವಿದ್ದ ಪ್ರದೇಶಕ್ಕೆ ದಿಗ್ಬಂಧನ ಹೇರಿದ್ದಾರೆ. ಮೃತ ವ್ಯಕ್ತಿ ವಾಸವಿದ್ದ ಕೊಳೆಗೇರಿ ಪುನರ್ವಸತಿ ಪ್ರಾಧಿಕಾರದ ವಸತಿ ಸಂಕೀರ್ಣದ ಸಂಪರ್ಕಗಳನ್ನು ಬಂದ್‌ ಮಾಡಲಾಗಿದೆ. ಈತ ವಾಸವಿದ್ದ ಕಟ್ಟಡದ ಆಸುಪಾಸಿನ ಸುಮಾರು 300 ಮನೆಗಳು, 90 ಮಳಿಗೆಗಳ ವಾಸಿಗಳಿಗೆ ದಿಗ್ಬಂಧನ ಹೇರಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್‌ ಅಗರವಾಲ್ ಅವರು ತಿಳಿಸಿದ್ದಾರೆ.

‘ಯಾರಿಗೂ ಹೊರಹೋಗಲು ಅವಕಾಶವಿಲ್ಲ. ಎಲ್ಲರ ತಪಾಸಣೆ ನಡೆಸಲಾಗುತ್ತದೆ. ಮುಂಬೈ ನಗರಪಾಲಿಕೆಯೇ ಆಹಾರ, ಪಡಿತರ ಒದಗಿಸಲಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿ ನಿಯಮಿತವಾಗಿ ರಾಸಾಯನಿಕ ಸಿಂಪಡಿಸಲಾಗುತ್ತದೆ. ಸೋಂಕು ಸೂಚನೆ ಇದ್ದಲ್ಲಿ ಮುದ್ರೆ ಒತ್ತಲಿದ್ದು, ಕಟ್ಟುನಿಟ್ಟಿನ ದಿಗ್ಬಂಧನ ವಿಧಿಸುತ್ತೇವೆ. ನಿವಾಸಿಗಳ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದವರ ಪತ್ತೆಗೆ ಕ್ರಮವಹಿಸಲಾಗಿದೆ. ಸುಮಾರು 4,000 ಆರೋಗ್ಯ ಸೇವೆ ಸಿಬ್ಬಂದಿಯನ್ನು ಈ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ಎಂದರು.

ಜೆಎನ್‌ಯು: ವಿದ್ಯಾರ್ಥಿ, ಭದ್ರತಾ ಸಿಬ್ಬಂದಿ ವಾಗ್ವಾದ
ನವದೆಹಲಿ:
ಕ್ಯಾಂಪಸ್‌ನಿಂದ ಹೊರಗೆ ಹೋಗಲು ಅವಕಾಶ ನೀಡುತ್ತಿಲ್ಲ ಎಂದು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿಗಳು ಅಲ್ಲಿನ ಭದ್ರತಾ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದ್ದಾರೆ.

ಹೊರಗೆ ಹೋಗಲು ಬಿಡದಿದ್ದರೆ ನಿಮ್ಮ ಮೈಮೇಲೆ ಸೀನುವುದಾಗಿ ವಿದ್ಯಾರ್ಥಿಯು ಭದ್ರತಾ ಸಿಬ್ಬಂದಿಗೆ ಬೆದರಿಕೆಯನ್ನು ಒಡ್ಡಿದರು ಎಂದೂ ಆರೋಪಿಸಲಾಗಿದೆ. ಈ ಕುರಿತು ವಿಡಿಯೊ ವೈರಲ್‌ ಆಗಿದೆ.

ವಿಡಿಯೊ ಪ್ರಕಾರ, ಭದ್ರತಾ ಸಿಬ್ಬಂದಿ ಗೇಟ್‌ಬಳಿ ಕುಳಿತಿದ್ದ ವಿದ್ಯಾರ್ಥಿಗಳ ತೆರವಿಗೆ ಯತ್ನಿಸುತ್ತಿದ್ದಾರೆ. ವಾಗ್ವಾದಕ್ಕೆ ಇಳಿದಿದ್ದ ವಿದ್ಯಾರ್ಥಿಯೊಬ್ಬನು ಸೋಂಕು ಹರಡಿಸಲು ನಿಮ್ಮ ಮೇಲೆ ಕೆಮ್ಮುವುದಾಗಿ ಹೆದರಿಸಿದ್ದಾನೆ. 

ಪ್ರಣಯ್‌ ಎಂದು ಗುರುತಿಸಲಾದ ವಿದ್ಯಾರ್ಥಿಯು ಮೊದಲು ಹಾಸ್ಟೆಲ್‌ ವಾರ್ಡನ್‌ ಸಹಿ ಮಾಡಿದ್ದ ಪತ್ರವನ್ನು ತೋರಿಸಿದ್ದ. ಅಧಿಕೃತ ಮುದ್ರೆ ಇಲ್ಲ ಎಂಬ ಕಾರಣಕ್ಕೇ ಭದ್ರತಾ ಸಿಬ್ಬಂದಿ ಅದನ್ನು ಮಾನ್ಯ ಮಾಡಿರಲಿಲ್ಲ.

ಈ ಬಗ್ಗೆ ಜೆಎನ್‌ಯು ಆಡಳಿತ ಮತ್ತು ಪೊಲೀಸ್‌ ಠಾಣೆ ಎರಡೂ ಕಡೆ ದೂರು ನೀಡಲಾಗಿದೆ. ಪರಿಶೀಲಿಸಿ ಕ್ರಮಜರುಗಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು