ಗುರುವಾರ , ಏಪ್ರಿಲ್ 2, 2020
19 °C
ಸಿಎಎ ಪ್ರತಿಭಟನೆಯಿಂದ ಹೊತ್ತಿ ಉರಿಯುತ್ತಿದೆ ರಾಜಧಾನಿ

ಹಿಂಸಾಚಾರ ಪ್ರಚೋದಿಸುವ ದೃಶ್ಯ ಬೇಡ: ಸುದ್ದಿ ವಾಹಿನಿಗಳಿಗೆ ಕೇಂದ್ರ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

Delhi CAA Protest

ನವದೆಹಲಿ: ದೆಹಲಿಯಲ್ಲಿ ಪೌರತ್ವ ಕಾಯ್ದೆ (ಸಿಎಎ) ಸಂಬಂಧಿತ ಪ್ರತಿಭಟನೆಗಳು ಕೋಮು ಸಂಘರ್ಷಕ್ಕೆ ತಿರುಗಿದ್ದು, 20ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ "ದೇಶ-ವಿರೋಧಿ" ವರ್ತನೆಗಳನ್ನು ಉತ್ತೇಜಿಸುವ ಅಥವಾ ಹಿಂಸಾಚಾರವನ್ನು ಪ್ರಚೋದಿಸಬಲ್ಲ ಯಾವುದೇ ದೃಶ್ಯಗಳನ್ನು ಪ್ರಸಾರ ಮಾಡುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲ ಖಾಸಗಿ ಟಿವಿ ಚಾನೆಲ್‌ಗಳಿಗೆ ಸಲಹೆ ನೀಡಿದೆ.

ಪೌರತ್ವ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರದಲ್ಲಿ ಸಾವಿನ ಸಂಖ್ಯೆ ಬುಧವಾರ ಬೆಳಗ್ಗೆ 20ಕ್ಕೇರಿದ್ದು, 190ಕ್ಕೂ ಹೆಚ್ಚು ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ವಾಹನಗಳು, ಮನೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ್ಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ.

"ಹಿಂಸಾಚಾರವನ್ನು ಪ್ರಚೋದಿಸಬಲ್ಲ, ಭಾವನೆಗಳನ್ನು ಕೆರಳಿಸಬಲ್ಲ ಅಥವಾ ಕಾನೂನು ಮತ್ತು ಸುವ್ಯವಸ್ಥೆ ಸ್ಥಾಪನೆಗೆ ಅಡ್ಡಿಯಾಗಬಲ್ಲ ಇಲ್ಲವೇ, ದೇಶವಿರೋಧೀ ವರ್ತನೆಗಳನ್ನು ಉತ್ತೇಜಿಸಬಲ್ಲ ಚಿತ್ರ, ವಿಡಿಯೊ ಮುಂತಾದ ಯಾವುದೇ ವಸ್ತುವಿಷಯಗಳ ಪ್ರಸಾರದ ವೇಳೆ ಎಚ್ಚರಿಕೆ ವಹಿಸುವಂತೆ ಎಲ್ಲ ಟಿವಿ ಚಾನೆಲ್‌ಗಳಿಗೆ ಈ ಮೂಲಕ ಸಲಹೆ ನೀಡಲಾಗುತ್ತಿದೆ" ಎಂದು ಸಚಿವಾಲಯ ತಿಳಿಸಿದೆ.

ಧಾರ್ಮಿಕ ಅಥವಾ ಸಮುದಾಯಗಳ ಮೇಲಿನ ದಾಳಿಗೆ ಸಂಬಂಧಿಸಿದ ವಿಷಯಗಳು ಅಥವಾ ಧಾರ್ಮಿಕ ಗುಂಪು, ಪಂಗಡಗಳನ್ನು ನಿಂದಿಸುವಂತಹಾ ಅಥವಾ ಕೋಮು ಉದ್ವಿಗ್ನತೆಯನ್ನು ಉತ್ತೇಜಿಸಬಲ್ಲ ಯಾವುದೇ ವಿಷಯಗಳನ್ನೂ ಪ್ರಸಾರ ಮಾಡುವಾಗ ಎಚ್ಚರಿಕೆ ವಹಿಸುವಂತೆಯೂ ಖಾಸಗಿ ವಾಹಿನಿಗಳಿಗೆ ನೀಡಲಾಗಿರುವ ಈ ಸಲಹೆಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಮಾನಹಾನಿಕಾರಕ, ಉದ್ದೇಶಪೂರ್ವಕ, ಸುಳ್ಳು, ವ್ಯಂಗ್ಯವಾದ ಮತ್ತು ಅರ್ಧ ಸತ್ಯಗಳನ್ನು ಬಿಂಬಿಸುವ ವಿಷಯಗಳನ್ನು ಪ್ರದರ್ಶಿಸದಂತೆಯೂ ಎಚ್ಚರಿಕೆ ನೀಡಲಾಗಿದೆ.

ಕೇಬಲ್ ಟೆಲಿವಿಷನ್ ನೆಟ್‌ವರ್ಕ್ (ನಿಯಂತ್ರಣ) ಕಾಯ್ದೆ 1995ರ ಅಡಿಯಲ್ಲಿ ವಿವರಿಸಲಾದ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳ ಉಲ್ಲಂಘನೆಯಾಗುವ ಯಾವುದೇ ವಿಷಯಗಳನ್ನು ಪ್ರದರ್ಶಿಸದಂತೆ ಗಮನ ವಹಿಸಬೇಕೆಂದು ಖಾಸಗಿ ವಾಹಿನಿಗಳಿಗೆ ಸೂಚಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು