ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಐಸಿಐ ಪ್ರಕರಣ: ತನಿಖಾಧಿಕಾರಿ ವರ್ಗ

Last Updated 27 ಜನವರಿ 2019, 19:32 IST
ಅಕ್ಷರ ಗಾತ್ರ

ನವದೆಹಲಿ: ಐಸಿಐಸಿಐ ಬ್ಯಾಂಕ್‌ನಿಂದ ಸಾಲ ನೀಡಿಕೆಯಲ್ಲಿ ವಂಚನೆ ಆರೋಪ ಪ್ರಕರಣದ ತನಿಖಾಧಿಕಾರಿ ಸುಧಾಂಶು ಧರ್‌ ಮಿಶ್ರಾ ಅವರನ್ನು ಸಿಬಿಐ ವರ್ಗಾವಣೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಎಸ್‌ಪಿ ದರ್ಜೆಯ ಅಧಿಕಾರಿ.

ತಪಾಸಣಾ ಕಾರ್ಯಾಚರಣೆಯ ಮಾಹಿತಿಯನ್ನು ಅವರು ಸೋರಿಕೆ ಮಾಡಿದ್ದಾರೆ ಎಂಬ ಅನುಮಾನದಿಂದಾಗಿ ಈ ವರ್ಗಾವಣೆ ನಡೆಸಲಾಗಿದೆ.

ಐಸಿಐಸಿಐ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚರ್‌, ಅವರ ಪತಿ ದೀಪಕ್‌ ಹಾಗೂ ವಿಡಿಯೋಕಾನ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್‌ ಧೂತ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಾದ ಮರುದಿನವೇ ಮಿಶ್ರಾ ಅವರನ್ನು ವರ್ಗಾಯಿಸಲಾಗಿದೆ.

ಮೋಹಿತ್‌ ಗುಪ್ತಾ ಅವರಿಗೆ ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿದ್ದು, ಸಿಬಿಐ ಹಲವು ಕಡೆಗಳಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಯಾವುದೇ ಕಾರಣ ಇಲ್ಲದೆ ಮಿಶ್ರಾ ಅವರು ವಿಳಂಬ ಮಾಡಿದ್ದರು ಎಂದು ಸಿಬಿಐ ಹೇಳಿದೆ.

‘ಐಸಿಐಸಿಐ ಪ್ರಕರಣದ ತನಿಖೆ ಯಾಕೆ ವಿಳಂಬವಾಗಿದೆ ಎಂಬ ಬಗ್ಗೆ ತನಿಖೆ ನಡೆಸಿದಾಗ ಮಿಶ್ರಾ ಅವರು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದು ಬೆಳಕಿಗೆ ಬಂತು. ಜತೆಗೆ, ಪ್ರಕರಣದ ಆರೋಪಿಗಳಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸುವ ಮಾಹಿತಿ ಸೋರಿಕೆ ಆಗಿರುವುದರಲ್ಲಿಯೂ ಮಿಶ್ರಾ ಅವರ ಪಾತ್ರ ಇರುವ ಬಗ್ಗೆ ಬಲವಾದ ಅನುಮಾನ ಮೂಡಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಸಿಐಸಿಐ ಪ್ರಕರಣದಲ್ಲಿ ಸಿಬಿಐ ಕೈಗೊಂಡ ಕ್ರಮಕ್ಕೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದ್ದರು. ‘ಇದು ತನಿಖೆಯ ಅತ್ಯುತ್ಸಾಹ ಮತ್ತು ಹುಚ್ಚುತನ’ ಎಂದು ಅವರು ಟ್ವೀಟ್‌ ಮಾಡಿ ಹರಿಹಾಯ್ದಿದ್ದರು.

‘ಬ್ಯಾಂಕಿಂಗ್‌ ಕ್ಷೇತ್ರದ ಪ್ರಮುಖರ ವಿರುದ್ಧ ಪುರಾವೆ ಇದ್ದು ಅಥವಾ ಇಲ್ಲದೆ ಪ್ರಕರಣ ದಾಖಲಿಸುತ್ತಾ ಹೋದರೆ ನಾವು ಏನನ್ನು ಸಾಧಿಸಿದಂತಾಗುತ್ತದೆ’ ಎಂದು ಜೇಟ್ಲಿ ಪ್ರಶ್ನಿಸಿದ್ದರು.

ಇದರಿಂದ ಅನಾಹುತವೇ ಹೆಚ್ಚು ಎಂದಿದ್ದರು.

ತನಿಖೆಯ ಅತ್ಯುತ್ಸಾಹ ಮತ್ತು ವೃತ್ತಿಪರ ತನಿಖೆಯ ನಡುವೆ ವ್ಯತ್ಯಾಸಗಳಿವೆ. ಅತ್ಯುತ್ಸಾಹದಿಂದ ಮಾಹಿತಿಗಳು ಮಾಧ್ಯಮಕ್ಕೆ ಸೋರಿಕೆಯಾಗುತ್ತವೆ. ಇದರಿಂದ ಕೆಲವರ ತೇಜೋವಧೆಯಾಗುತ್ತದೆ. ಕೊನೆಗೆ ಇದು ಖಂಡನೆಗೆ ಕಾರಣವಾಗತ್ತದೆಯೇ ಹೊರತು ಅಪರಾಧ ಸಾಬೀತು ಆಗುವುದಿಲ್ಲ ಎಂದು ಜೇಟ್ಲಿ ಹೇಳಿದ್ದರು.

ಜೇಟ್ಲಿ ವಿರುದ್ಧ ಹರಿಹಾಯ್ದ ಚಿದಂಬರಂ

ಬ್ಯಾಂಕರ್‌ಗಳು ಹಾಗೂ ಉದ್ಯಮಿಗಳಿಗೆ ಸಿಬಿಐ ಕಿರುಕುಳ ನೀಡುತ್ತಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿರುವುದಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ತಿರುಗೇಟು ನೀಡಿದ್ದಾರೆ. ‘ಐಎಎಸ್‌ ಅಧಿಕಾರಿಗಳನ್ನು ತನಿಖಾ ಸಂಸ್ಥೆ ಗುರಿಯಾಗಿಸಿದ್ದಾಗ ಅವರು ನಿದ್ದೆ ಮಾಡುತ್ತಿದ್ದರೇ’ ಎಂದು ಪ್ರಶ್ನಿಸಿದ್ದಾರೆ.

‘ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್‌ ಅಧಿಕಾರಿಗಳು ಹಾಗೂ ಇತರರನ್ನು ಸಿಬಿಐ ಗುರಿಯಾಗಿಸಿದ್ದ ಸಂದರ್ಭದಲ್ಲಿ ಸರ್ಕಾರ ಗಾಢವಾದ ನಿದ್ದೆಯಲ್ಲಿ ಇತ್ತು’ ಎಂದು ಅವರು ಟೀಕಿಸಿದ್ದಾರೆ.

‘ರಜೆಯಲ್ಲಿರುವ ಹಣಕಾಸು ಸಚಿವರಿಂದ ಸಿಬಿಐಗೆ ಪ್ರಮಾಣಪತ್ರ ಸಿಕ್ಕಿದೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT