ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಹಣ ಹಿಂತೆಗೆತದ ಹೊಣೆ ಬ್ಯಾಂಕುಗಳದ್ದೇ: ಕೇರಳ ಹೈಕೋರ್ಟ್‌

Last Updated 6 ಫೆಬ್ರುವರಿ 2019, 18:41 IST
ಅಕ್ಷರ ಗಾತ್ರ

ಕೊಚ್ಚಿ: ಗ್ರಾಹಕರ ಖಾತೆಯಿಂದ ಅನಧಿಕೃತವಾಗಿ ಹಣ ತೆಗೆದರೆ ಅದರ ಹೊಣೆಗಾರಿಕೆ ತನಗೆ ಇಲ್ಲ ಎಂದು ಬ್ಯಾಂಕುಗಳು ಹೇಳುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ.

ಎಸ್‌ಎಂಎಸ್‌ ಮೂಲಕ ಕಳುಹಿಸಿದ ಸಂದೇಶಕ್ಕೆ ಗ್ರಾಹಕರು ಪ್ರತಿಕ್ರಿಯೆ ನೀಡದೆ ಇದ್ದರೂ ಅನಧಿಕೃತ ಹಣ ಹಿಂತೆಗೆತದ ಜವಾಬ್ದಾರಿ ಬ್ಯಾಂಕುಗಳದ್ದೇ ಆಗಿದೆ ಎಂದು ನ್ಯಾಯಮೂರ್ತಿ ಪಿ.ಬಿ. ಸುರೇಶ್‌ ಕುಮಾರ್‌ ಹೇಳಿದ್ದಾರೆ.

ನಿಯಮಿತವಾಗಿ ಎಸ್‌ಎಂಎಸ್‌ ಪರಿಶೀಲಿಸುವ ಅಭ್ಯಾಸ ಇಲ್ಲದಿರುವ ಗ್ರಾಹಕರು ಇರುತ್ತಾರೆ. ಹಾಗಾಗಿ ಎಸ್‌ಎಂಎಸ್‌ ಕಳುಹಿಸಿದ ಕಾರಣಕ್ಕೆ ಹೊಣೆಗಾರಿಕೆಯನ್ನು ಗ್ರಾಹಕರ ಮೇಲೆ ಹಾಕುವುದಕ್ಕೆ ಬರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಹಕರೊಬ್ಬರ ಖಾತೆಯಿಂದ ಅನಧಿಕೃತವಾಗಿ ₹2.4 ಲಕ್ಷ ಹಣ ಹಿಂಪಡೆಯಲಾಗಿತ್ತು. ಈ ಮೊತ್ತವನ್ನು ಗ್ರಾಹಕರಿಗೆ ಬ್ಯಾಂಕ್‌ ನೀಡಬೇಕು ಎಂದು ಕೆಳಹಂತದ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಭಾರತೀಯ ಸ್ಟೇಟ್‌ ಬ್ಯಾಂಕ್‌, ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ಹೈಕೋರ್ಟ್‌ ವಜಾ ಮಾಡಿದೆ.

ಈ ಹಣ ಹಿಂಪಡೆಯುವಿಕೆಯ ಮನವಿ ಬಂದಾಗ ಅದರ ಬಗ್ಗೆ ಗ್ರಾಹಕರಿಗೆ ಎಸ್‌ಎಂಎಸ್ ಕಳುಹಿಸಲಾಗಿತ್ತು. ಅದು ಅನಧಿಕೃತ ಆಗಿದ್ದರೆ ತಕ್ಷಣವೇ ಅವರು ಬ್ಯಾಂಕ್‌ಗೆ ಮಾಹಿತಿ ನೀಡಿ ಅದನ್ನು ಸ್ಥಗಿತ ಮಾಡಬಹುದಿತ್ತು ಎಂದು ಬ್ಯಾಂಕ್‌ ವಾದಿಸಿತ್ತು.

ಸೇವೆ ಒದಗಿಸುವಾಗ ಗ್ರಾಹಕರ ಹಿತಾಸಕ್ತಿಯ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುವುದು ಅಗತ್ಯ.ಸುರಕ್ಷಿತವಾದ ಡಿಜಿಟಲ್‌ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಿಕೊಳ್ಳುವುದು ಬ್ಯಾಂಕುಗಳ ಹೊಣೆಗಾರಿಕೆ ಎಂದು ನ್ಯಾಯಾಲಯ ಹೇಳಿತು.

ಅನಧಿಕೃತ ವಹಿವಾಟನ್ನು ಬ್ಯಾಂಕಿನ ಗಮನಕ್ಕೆ ತಂದು, ಈ ವಹಿವಾಟನ್ನು ಸ್ಥಗಿತಗೊಳಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಸುತ್ತೋಲೆ ಹೇಳುತ್ತದೆ. ಇದು ಬ್ಯಾಂಕುಗಳಿಗೆ ಹೊಸ ಹಕ್ಕನ್ನು ನೀಡುವುದಿಲ್ಲ, ಬದಲಿಗೆ, ಬ್ಯಾಂಕುಗಳ ಹೊಣೆಗಾರಿಕೆಯನ್ನು ನೆನಪಿಸುತ್ತದೆ ಎಂದು ವ್ಯಾಖ್ಯಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT