ಒಡೆಯಲು ಬಯಸಿದ್ದರೆ ಈಗ ಭಾರತವೇ ಇರುತ್ತಿರಲಿಲ್ಲ: ಫಾರೂಕ್‌

ಮಂಗಳವಾರ, ಏಪ್ರಿಲ್ 23, 2019
27 °C

ಒಡೆಯಲು ಬಯಸಿದ್ದರೆ ಈಗ ಭಾರತವೇ ಇರುತ್ತಿರಲಿಲ್ಲ: ಫಾರೂಕ್‌

Published:
Updated:

ಶ್ರೀನಗರ: ತಮ್ಮ ಕುಟುಂಬವು ಭಾರತವನ್ನು ಒಡೆಯಲು ಬಯಸಿದ್ದಿದ್ದರೆ ಈಗ ಭಾರತವೇ ಇರುತ್ತಿರಲಿಲ್ಲ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.

‘ಮೋದಿ ಅವರು ಎಷ್ಟೇ ಪ್ರಯತ್ನಿಸಿದರೂ ದೇಶವನ್ನು ಒಡೆಯಲು ಸಾಧ್ಯವಾಗದು. ಅಂತಹ ಪ್ರಯತ್ನ ಮಾಡಿದರೆ ನೀವು ಒಡೆದು ಹೋಗುತ್ತೀರಿ, ಭಾರತಕ್ಕೆ ಏನೂ ಆಗದು’ ಎಂದು ಲಾಲ್‌ಚೌಕದಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಫಾರೂಕ್‌ ಹೇಳಿದರು. 

ಅಬ್ದುಲ್ಲಾ ಮತ್ತು ಮುಫ್ತಿಗಳು ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಗೆ ಫಾರೂಕ್‌ ಈ ಪ್ರತಿಕ್ರಿಯೆ ನೀಡಿದ್ದಾರೆ. 

‘1996ರಲ್ಲಿ ಇಲ್ಲಿ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಯಾವುದೇ ಪಕ್ಷ ಸಿದ್ಧವಿರಲಿಲ್ಲ. ಆಗ ದೇಶದ ಧ್ವಜವನ್ನು ಎತ್ತಿಹಿಡಿದವನು ನಾನು ಎಂಬುದನ್ನು ಮೋದಿ ಮರೆಯಬಾರದು. ಆಗ ಇಲ್ಲಿ ಯಾರೂ ಇರಲಿಲ್ಲ, ಈಗ ಎಲ್ಲರೂ ಕಿರುಚುತ್ತಿದ್ದಾರೆ’
ಎಂದು ಅಬ್ದುಲ್ಲಾ ಹೇಳಿದ್ದಾರೆ. 

ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ನಂತೆ ಮೋದಿ ವರ್ತಿಸುತ್ತಿದ್ದಾರೆ ಎಂದು ಕೆಲ ದಿನಗಳ ಹಿಂದೆ ಅಬ್ದುಲ್ಲಾ ಆರೋಪಿಸಿದ್ದರು. 

ದೇಶದ್ರೋಹ ಕಾಯ್ದೆಯನ್ನು ಇನ್ನಷ್ಟು ಕಠಿಣ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನೀಡಿದ್ದ ಹೇಳಿಕೆಯ ವಿರುದ್ಧವೂ ಅಬ್ದುಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ. ‘ನೀವು ಏನು ಮಾಡುತ್ತೀರಿ ನೋಡುತ್ತೇವೆ. ಏನೇ ಮಾಡಿದರೂ ಕಾಶ್ಮೀರಿಗಳ ಹೃದಯ ಗೆಲ್ಲವುದು ಬಿಜೆಪಿ ಮತ್ತು ಮೋದಿಗೆ ಸಾಧ್ಯವಾಗದು’ ಎಂದು ಅವರು ಹೇಳಿದ್ದಾರೆ. 

‘ಒಂದೆಡೆ, ಕಾಶ್ಮೀರಿಗಳ ಹೃದಯ ಗೆಲ್ಲುವ ಬಗ್ಗೆ ಅವರು ಮಾತನಾಡುತ್ತಾರೆ. ಆದರೆ, ಅವರ ನಡವಳಿಕೆ ಮತ್ತು ಮಾತಿನ ಮಧ್ಯೆ ಬಹಳ ವ್ಯತ್ಯಾಸ ಇದೆ. ಹೆದ್ದಾರಿಗಳನ್ನು ನಿರ್ಭಂದಿಸುವ ಮೂಲಕ ಜನರ ಹೃದಯ ಗೆಲ್ಲಲು ಸಾಧ್ಯವೇ? ಇದು ಹೃದಯ ಗೆಲ್ಲುವ ರೀತಿಯೇ’ ಎಂದು ಅವರು ಪ್ರಶ್ನಿಸಿದ್ದಾರೆ. 

ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜತೆಯಾಗಿ ದೇಶವನ್ನು ನಾಶ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘ಜಲಿಯನ್‌ವಾಲಾಭಾಗ್‌ನಲ್ಲಿ ಜನರಲ್‌ ಡಯರ್‌ ಹತ್ಯಾಕಾಂಡ ನಡೆಸಿದಾಗ ಅವರ ವಿರುದ್ಧ ಹೋರಾಡಿದ್ದು ಸೈಫುದ್ದೀನ್‌ ಕಿಚ್ಲೂ ಎಂಬವರು. ಅವರು ಕಾಶ್ಮೀರದ ಬಾರಾಮುಲ್ಲಾದವರು. ಅಲ್ಲಿ ಸತ್ತವರಲ್ಲಿ ನೂರಾರು ಮಂದಿ ಕಾಶ್ಮೀರದವರು’ ಎಂದು ಅಬ್ದುಲ್ಲಾ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !