ಉಪ್ಪಿನಲ್ಲಿ ಮೈಕ್ರೊಪ್ಲಾಸ್ಟಿಕ್‌ ಅಂಶ ಪತ್ತೆ!

7
ಐಐಟಿ ಬಾಂಬೆ ಪರಿಸರ ವಿಜ್ಞಾನ ಕೇಂದ್ರ ತಂಡದ ಅಧ್ಯಯನದಲ್ಲಿ ಉಲ್ಲೇಖ

ಉಪ್ಪಿನಲ್ಲಿ ಮೈಕ್ರೊಪ್ಲಾಸ್ಟಿಕ್‌ ಅಂಶ ಪತ್ತೆ!

Published:
Updated:
Deccan Herald

ಮುಂಬೈ: ದೇಶದಲ್ಲಿ ಬಳಸುತ್ತಿರುವ ಉಪ್ಪಿನ ಹಲವಾರು ಬ್ರ್ಯಾಂಡ್‌ಗಳಲ್ಲಿ ಮೈಕ್ರೊಪ್ಲಾಸ್ಟಿಕ್‌ ಅಂಶ ಇರುವುದು ಪತ್ತೆಯಾಗಿದೆ. 

ಐಐಟಿ ಬಾಂಬೆಯ ‍ಪರಿಸರ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕೇಂದ್ರದ ಇಬ್ಬರ ತಂಡ ನಡೆಸಿದ ಅಧ್ಯಯನದಿಂದ ಈ ವಿಷಯ ತಿಳಿದುಬಂದಿದೆ. 

‘ಸಮುದ್ರಕ್ಕೆ ಸಾಕಷ್ಟು ರೀತಿಯ ತ್ಯಾಜ್ಯಗಳು ಸೇರುತ್ತವೆ. ಆದರೆ ಈ ಕುರಿತು ಯಾರೂ ನಿಗಾ ವಹಿಸುವುದಿಲ್ಲ. ಪರಿಸರದಲ್ಲಿ, ನಿರ್ದಿಷ್ಟವಾಗಿ ಸಮುದ್ರದಲ್ಲಿ ಕ್ರಮೇಣ ಕೊಳೆಯುವ ವಸ್ತುಗಳಿಂದ ಮೈಕ್ರೊಪ್ಲಾಸ್ಟಿಕ್ ಉತ್ಪತ್ತಿಯಾಗುತ್ತದೆ. ಇದರ ಅತಿ ಸಣ್ಣ ತುಣುಕುಗಳು 5 ಮಿ.ಮೀ.ಗಿಂತ ಕಡಿಮೆ ಗಾತ್ರದಲ್ಲಿರುತ್ತವೆ’ ಎಂದು ಪ್ರಾಧ್ಯಾಪಕರಾದ ಅಮೃತಾಂಶು ಶ್ರೀವಾಸ್ತವ್ ಹಾಗೂ ಚಂದನ್ ಕೃಷ್ಣ ಸೇಠ್ ಅವರ ತಂಡ ತಿಳಿಸಿದೆ.

ಅಂತರರಾಷ್ಟ್ರೀಯ ಮಟ್ಟದ ‘ಎನ್ವಿರಾನ್ಮೆಂಟಲ್ ಸೈನ್ಸ್ ಮತ್ತು ಪೊಲ್ಯೂಷನ್ ರಿಸರ್ಚ್‌ ಜರ್ನಲ್‌’ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

‘ಮೈಕ್ರೊಪ್ಲಾಸ್ಟಿಕ್ ಅಂಶ ಆಹಾರ ಪದಾರ್ಥ ಮೂಲಕ ದೇಹ ಸೇರಿದರೆ ಅದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು ಎಂದು ತೋರಿಸುವ ಯಾವುದೇ ಅಧ್ಯಯನ ಈ ತನಕ ನಡೆದಿಲ್ಲ’ ಎಂದು ಬಾಂಬೆ ಐಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಚರ್ಚೆಗೆ ದಾರಿ
‘ಗೃಹಬಳಕೆ ಹಾಗೂ ಕೈಗಾರಿಕಾ ಬಳಕೆಗಾಗಿ ಉಪ್ಪು ಉತ್ಪಾದಿಸುವ ಮೊದಲ ಮೂರು ರಾಷ್ಟ್ರಗಳಲ್ಲಿ ಭಾರತ ಸಹ ಸೇರಿದೆ. ಆದ್ದರಿಂದ ನಮ್ಮ ಆಹಾರದಲ್ಲಿರುವ ಉಪ್ಪಿನ ಕುರಿತು ಅಧ್ಯಯನವೊಂದು ಅವಶ್ಯವಾಗಿತ್ತು. ಇದೀಗ ಈ ಅಧ್ಯಯನ, ಆಹಾರದಲ್ಲಿ ಮೈಕ್ರೊಪ್ಲಾಸ್ಟಿಕ್ ಅಂಶ ಹೆಚ್ಚುತ್ತಿರುವ ಕುರಿತ ಜಾಗತಿಕ ಚರ್ಚೆಗೆ ಎಡೆಮಾಡಿಕೊಟ್ಟಿದೆ’ ಎಂದು ಶ್ರೀವಾಸ್ತವ್ ತಿಳಿಸಿದ್ದಾರೆ. 

ಉಪ್ಪು ತಯಾರಿಕೆ ವೇಳೆ ಸರಳವಾದ ಮರಳು ಶೋಧನೆ ತಂತ್ರ ಬಳಸುವುದರಿಂದ ಶೇ 85ರಷ್ಟು ಪ್ರಮಾಣದ ಮೈಕ್ರೊಪ್ಲಾಸ್ಟಿಕ್‌ ಅನ್ನು ಸಮುದ್ರದ ನೀರಿನಿಂದ ಬೇರ್ಪಡಿಸಬಹುದು ಎಂದು ಅವರು ಹೇಳಿದ್ದಾರೆ. 

ಅಂಕಿ ಅಂಶ
* 626 –ಅಧ್ಯಯನಕ್ಕೆ ಒಳಪಡಿಸಿದ ಉಪ್ಪಿನ ಮಾದರಿ
* ಶೇ 63  –ಸಣ್ಣ ತುಣುಕುಗಳ ರೂಪದ ಮೈಕ್ರೊಪ್ಲಾಸ್ಟಿಕ್ 
* ಶೇ 37–ನಾರಿನ ರೂಪದ ಮೈಕ್ರೊಪ್ಲಾಸ್ಟಿಕ್
* 63.76 ಮೈಕ್ರೊಗ್ರಾಂ –ಪ್ರತಿ ಕಿಲೊ ಉಪ್ಪಿನಲ್ಲಿ ಪತ್ತೆಯಾದ ಮೈಕ್ರೊಪ್ಲಾಸ್ಟಿಕ್ ಅಂಶ
* 5 ಗ್ರಾಂ –ಪ್ರತಿ ಭಾರತೀಯ ದಿನಕ್ಕೆ ಸೇವಿಸುವ ಸರಾಸರಿ ಉಪ್ಪಿನ ಪ್ರಮಾಣ
* 117 ಮೈಕ್ರೊಗ್ರಾಂ– ವಾರ್ಷಿಕವಾಗಿ ವ್ಯಕ್ತಿಯ ದೇಹ ಸೇರುವ ಮೈಕ್ರೊಪ್ಲಾಸ್ಟಿಕ್ ಪ್ರಮಾಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !