ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಚೀನಾ ಅಪಸ್ವರಕ್ಕೆ ಭಾರತ ತಿರುಗೇಟು

ಅಕ್ಸಯ್‌ ಚಿನ್‌ ಮೇಲೆ ಹಕ್ಕು ಪ್ರತಿಪಾದನೆ: ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪಕ್ಕೆ ಆಕ್ಷೇಪ
Last Updated 31 ಅಕ್ಟೋಬರ್ 2019, 19:35 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಕೆಲವು ಭಾಗಗಳನ್ನು ಚೀನಾ ಅಕ್ರಮವಾಗಿ ತನ್ನ ವಶದಲ್ಲಿ ಇರಿಸಿಕೊಂಡಿದೆ. ಇದು ತನ್ನ ಭೂ ಪ್ರದೇಶ ಎಂದು ಭಾರತ ಗುರುವಾರ ಪುನರುಚ್ಚರಿಸಿದೆ. ಜಮ್ಮು–ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ್ದು ‘ಕಾನೂನುಬಾಹಿರ’ ಎಂದು ಚೀನಾ ನೀಡಿದ ಹೇಳಿಕೆಗೆ ಭಾರತ ಹೀಗೆ ತಿರುಗೇಟು ನೀಡಿದೆ.

ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಗುರುವಾರದಿಂದ ಅಸ್ತಿತ್ವಕ್ಕೆ ಬಂದಿವೆ. ಆದರೆ, ಈ ವಿಭಜನೆಯು ‘ಕಾನೂನುಬಾಹಿರ’ ಮತ್ತು ‘ಅಸಿಂಧು’ ಎಂದು ಚೀನಾ ಹೇಳಿದೆ.

ಇದಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಈ ಎರಡೂ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗ. ಭಾರತದ ಸಾರ್ವಭೌಮತೆಯನ್ನು ಇತರ ಎಲ್ಲ ದೇಶಗಳು ಗೌರವಿಸಬೇಕು. ಇಂತಹ ವಿಚಾರಗಳಲ್ಲಿ ಚೀನಾ ಸೇರಿ ಯಾವುದೇ ದೇಶ ಹಸ್ತಕ್ಷೇಪ ಮಾಡುವುದನ್ನು ಸಹಿಸುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.

‘ಜಮ್ಮು–ಕಾಶ್ಮೀರ ಮತ್ತು ಲಡಾಖ್‌ನ ದೊಡ್ಡ ಭೂಪ್ರದೇಶವನ್ನು (ಅಕ್ಸಯ್‌ ಚಿನ್‌) ಚೀನಾ ತನ್ನ ವಶದಲ್ಲಿ ಇರಿಸಿಕೊಂಡಿದೆ. ಹಾಗೆಯೇ, ಪಿಒಕೆಯ ದೊಡ್ಡ ಭಾಗವನ್ನು 1963ರ ಚೀನಾ–ಪಾಕಿಸ್ತಾನ ಗಡಿ ಒಪ್ಪಂದದ ಅಡಿಯಲ್ಲಿ ಅಕ್ರಮವಾಗಿ ತನ್ನ ವಶದಲ್ಲಿ ಇಟ್ಟಿದೆ. ಕಾಶ್ಮೀರ ವಿಭಜನೆಯು ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ನಡುವೆ ಎರಡನೇ ‘ಅನೌಪಚಾರಿಕ ಶೃಂಗಸಭೆ’ಯು ಅ. 11–12ರಂದು ಚೆನ್ನೈಯಲ್ಲಿ ನಡೆದಿತ್ತು. ಅದರ ಬೆನ್ನಿಗೇ ಎರಡೂ ದೇಶಗಳ ನಡುವೆ ವಾಕ್ಸಮರ ಉಂಟಾಗಿದೆ.

‘ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಕೇಂದ್ರಾಡಳಿತ ಪ್ರದೇಶ ಎಂದು ಭಾರತ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ತನ್ನ ಆಡಳಿತ ವ್ಯಾಪ್ತಿಗೆ ಚೀನಾದ ಕೆಲವು ಭಾಗಗಳನ್ನೂ ಸೇರಿಸಿಕೊಳ್ಳಲಾಗಿದೆ. ಈ ಬಗ್ಗೆ ವಿಷಾದವಿದೆ ಮತ್ತು ಇದನ್ನು ಚೀನಾ ವಿರೋಧಿಸುತ್ತದೆ’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್‌ ಶುವಾಂಗ್‌ ಹೇಳಿದ್ದಾರೆ.

‘ವಿದೇಶಿ ನಿಯೋಗಗಳಿಗೆ ಸ್ವಾಗತ’

ವಿದೇಶದ ಇನ್ನಷ್ಟು ನಿಯೋಗಗಳು ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ಕೊಡುವ ಸಾಧ್ಯತೆ ಇದೆ. ಆದರೆ, ಭೇಟಿ ನೀಡುವವರ ಉದ್ದೇಶ ಮತ್ತು ಜಮ್ಮು–ಕಾಶ್ಮೀರದ ಸ್ಥಿತಿಯ ಮೇಲೆ ಇದು ಅವಲಂಬಿತ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಐರೋಪ್ಯ ಒಕ್ಕೂಟದ 23 ಸಂಸದರ ನಿಯೋಗವು ಭೇಟಿ ಪೂರ್ಣಗೊಳಿಸಿದ ಮರುದಿನ (ಗುರುವಾರ) ಸಚಿವಾಲಯ ಈ ಹೇಳಿಕೆ ನೀಡಿದೆ.

ವಿದೇಶದ ಇತರ ನಿಯೋಗಗಳ ಭೇಟಿ ವಿನಂತಿಯನ್ನು ಪರಿಶೀಲಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.ಐರೋಪ್ಯ ಒಕ್ಕೂಟದ ಸಂಸದರ ನಿಯೋಗದ ಭೇಟಿಗೆ ಸರ್ಕಾರ ವ್ಯವಸ್ಥೆ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ನಿಯೋಗದಲ್ಲಿದ್ದ ಪ್ರತಿನಿಧಿಗಳಲ್ಲಿ ಹೆಚ್ಚಿನವರು ಬಲಪಂಥೀಯ ನಿಲುವು ಮತ್ತು ಕಾರ್ಯಸೂಚಿ ಹೊಂದಿದವರಾಗಿದ್ದಾರೆ. ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿಯ ಬಳಿಕ ಮೊದಲ ಬಾರಿ ವಿದೇಶಿ ನಿಯೋಗವೊಂದು ಇಲ್ಲಿಗೆ ಭೇಟಿ ನೀಡಿದೆ.

ಸರ್ಕಾರದ ನೆರವು ಪಡೆದುಕೊಳ್ಳಬೇಕಿದ್ದರೆ ನಿಯೋಗವು ಅಧಿಕೃತವಾಗಿಯೇ ಬರಬೇಕು ಎಂದೇನಿಲ್ಲ ಎಂದು ರವೀಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT