ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕತ್ತಲೆಯಲ್ಲಿ ಗುದ್ದಾಡಿದಂತಾಗಿದೆ’– ಮೋದಿ ಹೆಲಿಕಾಪ್ಟರ್‌ ಪರಿಶೀಲಿಸಿದ್ದ ಅಧಿಕಾರಿ

Last Updated 27 ಏಪ್ರಿಲ್ 2019, 4:25 IST
ಅಕ್ಷರ ಗಾತ್ರ

ಬೆಂಗಳೂರು:‘ನಾನು ಕರ್ತವ್ಯದಲ್ಲಿ ಮಗ್ನನಾಗಿದ್ದೆ. ದಿಢೀರನೆ ನನ್ನನ್ನು ಅಮಾನತು ಮಾಡಲಾಯಿತು. ನಾನು ಮಾಡಿದ್ದಾದರೂ ಏನು? ಈ ಬಗ್ಗೆ ಒಂದು ಸಣ್ಣ ವರದಿಯೂ ನನಗೆ ತಲುಪಿಲ್ಲ. ನಾನು ಕತ್ತಲೆಯಲ್ಲಿ ಹೋರಾಟ ನಡೆಸಿದಂತಾಗಿದೆ’ – ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ ಪರಿಶೀಲನೆ ನಡೆಸಿದ್ದ ಐಎಎಸ್‌ ಅಧಿಕಾರಿ ಮೊಹಮ್ಮದ್‌ ಮೊಹಿಸಿನ್‌ ಅವರ ಮಾತಿದು.

ಚುನಾವಣಾ ಕರ್ತವ್ಯಲೋಪಕ್ಕಾಗಿ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿರುವ ಕೇಂದ್ರ ಚುನಾವಣಾ ಆಯೋಗದ ಕ್ರಮದ ವಿರುದ್ಧ ಕಾನೂನು ಹೋರಾಟ ನಡೆಸಲು ಐಎಎಸ್‌ ಅಧಿಕಾರಿ ಮೊಹಮ್ಮದ್‌ ಮೊಹಿಸಿನ್‌ ನಿರ್ಧರಿಸಿದ್ದಾರೆ. ಚುನಾವಣಾ ಕಾರ್ಯದಿಂದ ಅಮಾನತುಗೊಳಿಸಿದ ಆದೇಶಕ್ಕೆ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಗುರುವಾರ ಮಧ್ಯಂತರ ತಡೆ ನೀಡಿತ್ತು. ಶುಕ್ರವಾರ ಮೊಹಿಸಿನ್‌ ಅವರು ಹಿಂದುಳಿದ ಕಲ್ಯಾಣಗಳ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ಮರಳಿದ್ದಾರೆ.

ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ಚುನಾವಣಾ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 1996ರ ಕರ್ನಾಟಕ ಬ್ಯಾಚ್‌ನ ಐಎಎಸ್‌ ಅಧಿಕಾರಿ ಮೊಹಮದ್‌ ಮೊಹಿಸಿನ್‌, ಫೆ.16ರಂದುಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ ತಪಾಸಣೆ ಮಾಡಿದ್ದರು. ವಿಡಿಯೊ ಮಾಡುವಂತೆ ಸೂಚಿಸಿದ್ದರು. ವರದಿಗಳ ಪ್ರಕಾರ, ಈ ಪರಿಶೀಲನೆಯಿಂದಾಗಿ ಪ್ರಧಾನಿ ಅವರಿಗೆ ನಿಗದಿತ ಸಮಯಕ್ಕಿಂತಲೂ 15 ನಿಮಿಷ ತಡವಾಗಿತ್ತು.

‘ಕರ್ತವ್ಯದಲ್ಲಿ ನಿರತನಾಗಿದ್ದ ನನ್ನನ್ನು ಅಮಾನತುಗೊಳಿಸಲಾಯಿತು. ನಾನು ಮಾಡಿದ್ದಾದರು ಏನು? ಎಂಬುದರ ಬಗ್ಗೆ ಯಾವುದೇ ವರದಿಯೂ ನನಗೆ ತಲುಪಿಲ್ಲ. ನಾನು ಈಗ ಕತ್ತಲೆಯಲ್ಲಿ ಗುದ್ದಾಟ ನಡೆಸಿದಂತೆ ಆಗಿದೆ. ನನ್ನ ಚೌಕಟ್ಟಿನಲ್ಲಿ ಹಾಗೂ ನಿಯಮಗಳ ಅನುಸಾರ ಕರ್ತವ್ಯ ನಡೆಸಿದ್ದೇನೆ, ಅದನ್ನು ಮುಂದುವರಿಸುತ್ತೇನೆ.’ ಎಂದು ಮೊಹಿಸಿನ್‌ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

‘ಚುನಾವಣಾ ಆಯೋಗದ ಮಾರ್ಗಸೂಚಿಯ ಅನುಸಾರ ವಿಡಿಯೊ ಮಾಡುವಂತೆ ಸೂಚನೆ ನೀಡಿದೆ. ತಪ್ಪು ಮಾಡಿರಬಹುದಾದ ವ್ಯಕ್ತಿಗೆ ಶಿಕ್ಷೆಯಾಗಿಲ್ಲ, ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ. ನನ್ನ ಕರ್ತವ್ಯವನ್ನು ನಾನು ನಿರ್ವಹಿಸಿರುವುದಕ್ಕೆ ನಾನೇಕೆ ಶಿಕ್ಷೆಗೆ ಗುರಿಯಾಗಬೇಕು? ಅಮಾನತು ಕಾನೂನು ಬಾಹಿರವಾದುದು, ಇದನ್ನು ನಾನು ನ್ಯಾಯಮಂಡಳಿಯಲ್ಲಿ ಎದುರಿಸುತ್ತೇನೆ’ ಎಂದು ಹೇಳಿದ್ದಾರೆ.

ಪ್ರಧಾನಿ ಹೆಲಿಕಾಪ್ಟರ್‌ ಪರಿಶೀಲನೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮೊಹಮ್ಮದ್‌ ಮೌಸಿನ್‌ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿತ್ತು. ‘ವಿಶೇಷ ರಕ್ಷಣಾ ಪಡೆಯ (ಎಸ್‌ಪಿಜಿ) ಭದ್ರತೆಯಲ್ಲಿ ಇರುವವರನ್ನು ಚುನಾವಣಾ ಸಂಚಾರಿ ತನಿಖಾ ದಳದ ಸಿಬ್ಬಂದಿ ಪರಿಶೀಲಿಸುವಂತಿಲ್ಲ. ಇದನ್ನು ಮೊಹಿಸಿನ್ ಉಲ್ಲಂಘಿಸಿದ್ದಾರೆ. ಎಸ್‌ಪಿಜಿ ಭದ್ರತೆ ಇರುವ ಪ್ರಧಾನಿಯವರ ಹೆಲಿಕಾಪ್ಟರ್‌ ಅನ್ನು ಮೊಹಿಸಿನ್ ಪರಿಶೀಲಿಸಿದ್ದಾರೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಚುನಾವಣಾ ಆಯೋಗ ತಿಳಿಸಿತ್ತು. ಅಮಾನತು ಆದೇಶ ಹಿಂಪಡೆದಿರುವ ಚುನಾವಣಾ ಆಯೋಗ, ಶಿಸ್ತುಕ್ರಮಕ್ಕೆ ಸೂಚಿಸಿದೆ.

‘ಚಿತ್ರೀಕರಣ ನಡೆಸಲು ಎಸ್‌ಪಿಜಿ ವಿರೋಧ ವ್ಯಕ್ತಪಡಿಸಲಿಲ್ಲ. ನಾನು ಎಸ್‌ಪಿಜಿ ಸಂಪರ್ಕಿಸಿಯೇ ಈ ಸೂಚನೆ ನೀಡಿದ್ದು, ನಾವು ಭದ್ರತೆ ನೀಡಿರುವ ವ್ಯಕ್ತಿಗಳಿಗೆ ಬೇರೆ ನಿಯಮಗಳು ಅನ್ವಯವಾಗುತ್ತವೆ–ಎಂದು ಅವರು ಏಕೆ ತಿಳಿಸಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

‘ನಾನು 22 ವರ್ಷಗಳಿಂದ ಆಡಳಿತ ಸೇವೆಯಲ್ಲಿದ್ದೇನೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ನಿಯಮಗಳ ಅನುಸಾರ ಕರ್ತವ್ಯ ಮುಂದುವರಿಯುತ್ತೇನೆ,..’ ಎಂದು ಮೊಹಿಸಿನ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT