ವೈಯಕ್ತಿಕ ಕಾರಣ ಉರ್ಜಿತ್‌ ರಾಜೀನಾಮೆ

7

ವೈಯಕ್ತಿಕ ಕಾರಣ ಉರ್ಜಿತ್‌ ರಾಜೀನಾಮೆ

Published:
Updated:

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮಾಜಿ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ರಾಜೀನಾಮೆ ಕುರಿತು ಉರ್ಜಿತ್ ಪಟೇಲ್‌ ಅವರು ಆರೇಳು ತಿಂಗಳ ಮೊದಲೇ ನನ್ನ ಬಳಿ ಪ್ರಸ್ತಾಪ ಮಾಡಿದ್ದರು. ಆ ಕುರಿತು ಪತ್ರವನ್ನೂ ಬರೆದಿದ್ದರು’ ಎಂದು ಪ್ರಧಾನಿ ಮಂಗಳವಾರ ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಇದೇ ಮೊದಲ ಬಾರಿಗೆ ಅವರು ಉರ್ಜಿತ್‌ ಪಟೇಲ್‌ ರಾಜೀನಾಮೆ ಬಗ್ಗೆ ಮೌನ ಮುರಿದಿದ್ದಾರೆ. ಆರ್‌ಬಿಐ ಗವರ್ನರ್‌ ಹುದ್ದೆಯನ್ನು ಉರ್ಜಿತ್‌ ಸಮರ್ಥವಾಗಿ ನಿಭಾಯಿಸಿದ್ದಾರೆ. ಸರ್ಕಾರ ಅವರ ರಾಜೀನಾಮೆ ಕೇಳುವ ಪ್ರಶ್ನೆ ಉದ್ಭವಿಸಿರಲಿಲ್ಲ ಎಂದರು.

ನೋಟು ರದ್ದು: ನೋಟು ರದ್ದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಜನರಿಗೆ ನೀಡಿದ ಆಘಾತವೂ ಅಲ್ಲ. ಅದಕ್ಕೂ ಮೊದಲು ಜನರಿಗೆ ಈ ಬಗ್ಗೆ ಅನೇಕ ಬಾರಿ ಸೂಚನೆ ನೀಡಿದ್ದೆ ಎಂದು ಪ್ರಧಾನಿ ಹೇಳಿದ್ದಾರೆ.

ನಿರ್ದಿಷ್ಟ ದಾಳಿ: ಪಾಕಿಸ್ತಾನ ಗಡಿಯನ್ನು ದಾಟಿ ಭಾರತದ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಕಾರ್ಯಾಚರಣೆ ವೇಳೆ ತುಂಬಾ ಆತಂಕ ಎದುರಿಸಿದ್ದಾಗಿ ಮೋದಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘ನಿರ್ದಿಷ್ಟ ದಾಳಿ ಬಹುದೊಡ್ಡ ಅಪಾಯಕಾರಿ ಕಾರ್ಯಾಚರಣೆ ಎಂದು ಗೊತ್ತಿತ್ತು. ಹೀಗಾಗಿ ದಾಳಿ ಯಶಸ್ವಿಯಾಗಲಿ, ಆಗದೆ ಇರಲಿ ಸೂರ್ಯಾಸ್ತದ ಒಳಗಾಗಿ ಕಾರ್ಯಾಚರಣೆ ಮುಗಿಸಿ ಮರಳಿ ಬರುವಂತೆ ಸೇನೆಗೆ ನಾನು ಸ್ಪಷ್ಟ ಆದೇಶ ನೀಡಿದ್ದೆ’ ಎಂದು ಅವರು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ: ಮುಂಬರುವ ಲೋಕಸಭಾ ಚುನಾವಣೆ ಜನರು ಮತ್ತು ಮಹಾಮೈತ್ರಿ ನಡುವೆ ನಡೆಯಲಿದೆ. ಜನರ ಆಶೀರ್ವಾದ ಮತ್ತು ಪ್ರೀತಿಯ ಬೆಂಬಲದಿಂದ ಮೋದಿ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಹೀಗಾಗಿ ಇದು ವಿರೋಧ ಪಕ್ಷಗಳ ಮಹಾ ಮೈತ್ರಿಕೂಟ ಮತ್ತು ಜನರ ನಡುವಿನ ಹಣಾಹಣಿ ಆಗಲಿದೆ ಎಂದರು.

ಸಾಲಮನ್ನಾ:  ಕಾಂಗ್ರೆಸ್‌ ಘೋಷಿಸಿರುವ ರೈತರ ಸಾಲಮನ್ನಾ ಕೇವಲ ಸುಳ್ಳು. ರೈತರಿಗೆ ಕಾಂಗ್ರೆಸ್‌ ತೋರಿಸುತ್ತಿರುವ ‘ಲಾಲಿಪಾಪ್‌’ ಎಂದು ಟೀಕಿಸಿದರು.

ರಫೇಲ್‌: ರಫೇಲ್‌ ಯುದ್ಧ ವಿಮಾನದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸುಪ್ರೀಂ ಕೋರ್ಟ್‌ ಕೂಡ ಇದನ್ನು ಸ್ಪಷ್ಟಪಡಿಸಿದೆ ಎಂದರು.

ಆರೋಪಗಳಿಗೆ ಹೆದರುವುದಿಲ್ಲ. ನನ್ನ ದೇಶದ ಯೋಧರ ಪ್ರಾಣಗಳನ್ನು ಬಲಿ ಕೊಡಲುವುದಿಲ್ಲ ಎಂದು ಮೋದಿ ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !