ಕೇರಳ ಪ್ರವಾಹ: ದೇಶದ ಆರ್ಥಿಕತೆಗೆ ಬಿದ್ದ ದೊಡ್ಡಪೆಟ್ಟು

7

ಕೇರಳ ಪ್ರವಾಹ: ದೇಶದ ಆರ್ಥಿಕತೆಗೆ ಬಿದ್ದ ದೊಡ್ಡಪೆಟ್ಟು

Published:
Updated:
Deccan Herald

ಕೇರಳದಲ್ಲಿನ ಪ್ರವಾಹ ಮತ್ತು ಅಲ್ಲಿನ ಜನರು ಎದುರಿಸುತ್ತಿರುವ ಸಂಕಷ್ಟ ಕೇವಲ ಅದೊಂದೇ ರಾಜ್ಯಕ್ಕೆ ಸೀಮಿತವಾದ ವಿದ್ಯಮಾನವಲ್ಲ. ದೇಶವ್ಯಾಪಿ ಈ ಬೆಳವಣಿಗೆ ಪರಿಣಾಮ ಬೀರಲಿದೆ. ಕೇರಳದ ಸಂಕಷ್ಟವನ್ನು ವಾಣಿಜ್ಯ ದೃಷ್ಟಿಯಿಂದ ನೋಡುವ ಪ್ರಯತ್ನ ಇಲ್ಲಿದೆ.

ವಿದೇಶಿ ವಿನಿಮಯಕ್ಕೆ ಹೊಡೆತ: ಪ್ರತಿವರ್ಷ ಸಾರ್ವತ್ರಿಕ ರಜಾ ದಿನಗಳಲ್ಲಿ ಕೇರಳವು ಪ್ರವಾಸಿಗರಿಂದ ತುಂಬಿತುಳುವುದು ವಾಡಿಕೆ. ಹಿನ್ನೀರು, ಹಸಿರು ಕಾಡು, ರಸ್ತೆ-ರೈಲು-ವಿಮಾನ ಸಂಪರ್ಕ, ಪ್ರಸಿದ್ಧ ಹೊಟೆಲ್, ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿರುವ ಕೇರಳಕ್ಕೆ ಪ್ರವಾಸೋದ್ಯಮ ಪ್ರಮುಖ ಆದಾಯ ಮೂಲವೂ ಹೌದು. ದೇಶದ ಪಾಲಿಗೆ ಅಮೂಲ್ಯ ವಿದೇಶಿ ವಿನಿಮಯವನ್ನೂ ಗಳಿಸಿಕೊಡುತ್ತದೆ.  2017ರ ಜನವರಿಯಿಂದ ಡಿಸೆಂಬರ್‌ವರೆಗಿನ 12 ತಿಂಗಳಲ್ಲಿ ಕೇರಳಕ್ಕೆ ಭೇಟಿ ನೀಡಿರುವ ಒಟ್ಟು ಪ್ರವಾಸಿಗರ ಸಂಖ್ಯೆ 1.43 ಕೋಟಿ. ಇದರಲ್ಲಿ 10.39 ಲಕ್ಷ ಮಂದಿ ವಿದೇಶಿಯರು. ಪ್ರವಾಸಿಗರು ರಾಜ್ಯಕ್ಕೆ ತಂದುಕೊಟ್ಟಿದ್ದ ಒಟ್ಟು ವರಮಾನ ₹ 33,500 ಕೋಟಿ. ಇದರಲ್ಲಿ ವಿದೇಶಿಯರು ತಂದುಕೊಟ್ಟ ಮೊತ್ತ ₹ 8,392 ಕೋಟಿ.

ಈಗ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಜರ್ಝರಿತವಾಗಿರುವ ಎರ್ನಾಕುಲಂ, ಇಡುಕ್ಕಿ, ಕಣ್ಣೂರು, ತ್ರಿಶೂರು, ವಯನಾಡ್, ತಿರುವನಂತಪುರಂ ಜಿಲ್ಲೆಗಳೇ ಪ್ರವಾಸಿಗರನ್ನು ಹೆಚ್ಚಾಗಿ ಸೆಳೆಯುವ ಹಲವು ಪ್ರಮುಖ ತಾಣಗಳನ್ನು ಹೊಂದಿವೆ. ಸತತ ಮಳೆಯಿಂದಾಗಿ ಕೇರಳದ ಪ್ರವಾಸಿ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ.

ಹಿಂದಿನ ವರ್ಷದ ಜುಲೈ ತಿಂಗಳಲ್ಲಿ 72 ಸಾವಿರ ವಿದೇಶಿಯರು ಮತ್ತು 10 ಲಕ್ಷ ಭಾರತೀಯರು ಕೇರಳದ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಆಗಸ್ಟ್ ತಿಂಗಳಲ್ಲಿ ಈ ಸಂಖ್ಯೆ ಕ್ರಮವಾಗಿ 73 ಸಾವಿರ, 11.5 ಲಕ್ಷಕ್ಕೆ ಏರಿಕೆಯಾಗಿತ್ತು ಎನ್ನುತ್ತದೆ ಕೇರಳ ಪ್ರವಾಸೋದ್ಯಮ ಇಲಾಖೆಯ ಜಾಲತಾಣ. ಆದರೆ, ಈ ವರ್ಷ ಕೇರಳದ ಜನರಿಗೆ ತಮ್ಮ ಜೀವ ಉಳಿಸಿಕೊಂಡರೆ ಸಾಕು ಎನ್ನುವ ಪರಿಸ್ಥಿತಿ ಬಂದಿದೆ. ಕೇರಳದ ಮಳೆ ವಿದ್ಯಮಾನ ಅರಿತವರು ಪ್ರವಾಸಕ್ಕೆ ಹೊರಡಲು ಧೈರ್ಯ ಹೇಗೆ ಮಾಡಿಯಾರು? ಮಳೆಯಿಂದ ಕಂಗೆಟ್ಟಿರುವ ಕೇರಳದ ಪ್ರವಾಸೋದ್ಯಮ ಚೇತರಿಸಿಕೊಳ್ಳಲು ಸಮಯಬೇಕು.

ಸೇವಾಕ್ಷೇತ್ರದ ಪಾಲು ದೊಡ್ಡದು: ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ– ಜಿಡಿಪಿ) ಕೇರಳದ ಕೊಡುಗೆ ಶೇ 4. ಕೇರಳದ ಆರ್ಥಿಕತೆಯಲ್ಲಿ 2017ರ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರದಿಂದ ಶೇ 13.36, ಕೈಗಾರಿಕಾ ಕ್ಷೇತ್ರದಿಂದ ಶೇ 23.47 ಮತ್ತು ಸೇವಾ ಕ್ಷೇತ್ರಗಳಿಂದ ಶೇ 63.18ರಷ್ಟು ಪಾಲು ಪಡೆದಿವೆ. ಕೇರಳದ ಜನರಿಗೆ ಮಳೆಯೇನೂ ಹೊಸದಲ್ಲ. ಆದರೆ, ಈ ಬಾರಿಯ ಭಾರಿ ಸತತ ಮಳೆ ಆರ್ಥಿಕ ಚಟುವಟಿಕೆಗಳಿಗೆ ಪೆಟ್ಟು ಕೊಟ್ಟಿದೆ. ಕೇರಳದ ಕಂಪನಿಗಳು ಮತ್ತು ಕೇರಳದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಹಲವು ಕಂಪನಿಗಳು ಷೇರುಪೇಟೆಯಲ್ಲಿ ಲಿಸ್ಟಿಂಗ್ ಆಗಿವೆ. ಈ ಕಂಪನಿಗಳಲ್ಲಿ ಹಣ ಹೂಡಿರುವವರು ಸತತ ಮಳೆ ಮತ್ತು ನಂತರದ ಬೆಳವಣಿಗೆಗಳನ್ನು ನೋಡುವ ದೃಷ್ಟಿಕೋನವೇ ಬೇರೆ.

ಸಾಲ ಕೊಟ್ಟವರು: ಪ್ರವಾಹದಿಂದಾಗಿ ರಸ್ತೆ–ರೈಲು ಸಂಪರ್ಕ ಸೇರಿದಂತೆ ಮೂಲ ಸೌಕರ್ಯಗಳೆಲ್ಲ ಹಾಳಾಗಿವೆ. ಇದರಿಂದಾಗಿ ಸಹಜವಾಗಿಯೇ ಕೆಲ ತಿಂಗಳುಗಳ ಕಾಲ ಕೇರಳದ ಆರ್ಥಿಕ ಚಟುವಟಿಕೆಗಳು ಹಿಂಜರಿಕೆ ಅನುಭವಿಸಲಿವೆ. ಈ ಬೆಳವಣಿಗೆಯ ಮೊದಲ ಹೊಡೆತ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆಗುತ್ತದೆ. ಸಂಕಷ್ಟ ಸ್ಥಿತಿಯಲ್ಲಿರುವ ರಾಜ್ಯದಲ್ಲಿ ಸರ್ಕಾರಗಳು ಸಾಲಮನ್ನಾ, ಬಡ್ಡಿಮನ್ನಾದಂತಹ ಘೋಷಣೆಗಳನ್ನು ಮಾಡುವುದು ವಾಡಿಕೆ. ಇದು ಸಾಲ ಮರುಪಾವತಿ ಮತ್ತು ಬ್ಯಾಂಕಿಂಗ್ ವಹಿವಾಟಿನ ಮೇಲೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ. ಕೇರಳದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿರುವ ಫೆಡರಲ್ ಬ್ಯಾಂಕ್ ಮತ್ತು ಸೌತ್ ಇಂಡಿಯನ್ ಬ್ಯಾಂಕ್‌ಗಳ ಮೇಲೆ ಈ ಬೆಳವಣಿಗೆಗಳು ಸಹಜವಾಗಿಯೇ ಪರಿಣಾಮ ಬೀರುತ್ತವೆ.

ಕೇರಳದ ತ್ರಿಶೂರ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೌತ್ ಇಂಡಿಯನ್ ಬ್ಯಾಂಕ್‌ (ಬಿಎಸ್‌ಇ ₹18.30) ಒಟ್ಟು 855 ಶಾಖೆಗಳನ್ನು ಹೊಂದಿದೆ. ಇದರಲ್ಲಿ ಶೇ 54ರಷ್ಟು ಅಂದರೆ 464 ಶಾಖೆಗಳು ಮತ್ತು ಬ್ಯಾಂಕ್‌ ಕೊಟ್ಟಿರುವ ಒಟ್ಟು ಸಾಲದ ಶೇ 40ರಷ್ಟು ಕೇರಳದಲ್ಲಿಯೇ ಇದೆ. ಬಂಡವಾಳ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಎಸ್‌ಐಬಿಗೆ ತನ್ನ ಗ್ರಾಹಕರು ಎದುರಿಸುತ್ತಿರುವ ಸಂಕಷ್ಟ ಹೊಸ ಸವಾಲನ್ನು ತಂದೊಡ್ಡಿದೆ.

ಕೇರಳದ ಅಳುವಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಫೆಡರಲ್ ಬ್ಯಾಂಕ್ (ಬಿಎಸ್‌ಇ ₹86.35) ಸಹ ಕೇರಳದಲ್ಲಿ ಬೃಹತ್ ಪ್ರಮಾಣದ ವಹಿವಾಟು ನಡೆಸುತ್ತದೆ. ದೇಶದಲ್ಲಿ ಒಟ್ಟು 1,252 ಶಾಖೆಗಳನ್ನು ಹೊಂದಿರುವ ಈ ಬ್ಯಾಂಕ್‌ನ ಅರ್ಧದಷ್ಟು ಶಾಖೆಗಳು ಕೇರಳದಲ್ಲಿಯೇ ಇವೆ. ಚಾಲ್ತಿ ಮತ್ತು ಉಳಿತಾಯ ಖಾತೆಯ ಶೇ 69ರಷ್ಟು ಪಾಲು ಕೇರಳದಿಂದಲೇ ಬರುತ್ತದೆ. ಸಾಲ ನೀಡಿಕೆಯಲ್ಲಿ ಶೇ 33ರಷ್ಟು ಮತ್ತು ಒಟ್ಟು ವಹಿವಾಟಿನ ಶೇ 45ರಷ್ಟು ಕೇರಳದ್ದೇ ಆಗಿದೆ.  ವಸೂಲಾಗದ ಸಾಲದ ಸಮಸ್ಯೆಯಿಂದ ಹೊರಬಂದು ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದ ಸಮಯದಲ್ಲಿ ಒದಗಿ ಬಂದಿರುವ ಈ ವಿಪತ್ತು, ಬ್ಯಾಂಕ್‌ನ ಭವಿಷ್ಯವನ್ನು ಹೇಗೆ ಪ್ರಭಾವಿಸಬಲ್ಲದು ಎಂದು ಆರ್ಥಿಕ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.

ಚಿನ್ನದ ಸಾಲ ಕೊಡುವ ದೇಶದ ಎರಡು ದೊಡ್ಡ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕೇರಳ ಮೂಲದವೇ ಆಗಿವೆ. ಕೆಲ ವರ್ಷಗಳಿಂದ ಈ ಕಂಪನಿಗಳು ದಕ್ಷಿಣ ಭಾರತದಿಂದಾಚೆಗೆ ವಹಿವಾಟು ವಿಸ್ತರಿಸಲು ಯತ್ನಿಸಿ, ತಕ್ಕಮಟ್ಟಿಗೆ ಯಶಸ್ವಿಯೂ ಆಗಿವೆ. ಕೇರಳದ ಒಟ್ಟು ಚಿನ್ನದ ಸಾಲ ಮಾರುಕಟ್ಟೆಯಲ್ಲಿ ಶೇ 7ರಷ್ಟು ಪಾಲು ಪಡೆದಿರುವ ಮಣಪ್ಪುರಂ ಫೈನಾನ್ಸ್ (ಬಿಎಸ್‌ಇ ₹101), ಕೇರಳದ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ವಹಿವಾಟಿನಲ್ಲಿ ಶೇ 15ರಷ್ಟು ಪಾಲು ಪಡೆದಿದೆ. ಪ್ರವಾಹದಿಂದ ಸಾಲ ವಸೂಲಾತಿ ವೆಚ್ಚ ಹೆಚ್ಚಾಗುವ ಮತ್ತು ವಸೂಲಾತಿ ಪ್ರಮಾಣ  ಕಡಿಮೆಯಾಗುವ ಅಪಾಯ ಎದುರಿಸುತ್ತದೆ.

ಮುತ್ತೂಟ್ ಗ್ರೂಪ್‌ನ ಮುಂಚೂಣಿ ಕಂಪನಿ ಮುತ್ತೂಟ್ ಫೈನಾನ್ಸ್ (ಬಿಎಸ್‌ಇ ₹406.65). ಇದು ದೇಶದ ಅತಿದೊಡ್ಡ ಚಿನ್ನದ ಸಾಲ ಕೊಡುವ ಕಂಪನಿಯೂ ಹೌದು. ಒಟ್ಟು 4,342 ಶಾಖೆಗಳ ಪೈಕಿ 642 ಶಾಖೆಗಳು ಕೇರಳದಲ್ಲಿವೆ. ಸಾಲಗಾರರು ಪ್ರವಾಹದಿಂದ ಸಂಕಷ್ಟ ಸ್ಥಿತಿ ಅನುಭವಿಸುತ್ತಿರುವುದರಿಂದ ಕಂಪನಿಯ ಆರ್ಥಿಕ ಆರೋಗ್ಯ ಅಪಾಯದಲ್ಲಿದೆ. ಕೇರಳದಲ್ಲಿ ಸಕ್ರಿಯವಾಗಿರುವ ಮೈಕ್ರೊಫೈನಾನ್ಸ್‌ ಕಂಪನಿಗಳಾದ ಬೆಲ್‌ಸ್ಟಾರ್ ಮತ್ತು ಆಶೀರ್ವಾದ್ ಮೈಕ್ರೊಫೈನಾನ್ಸ್‌ ಕಂಪನಿಗಳು ಕ್ರಮವಾಗಿ ಮುತ್ತೂಟ್ ಮತ್ತು ಮಣಪ್ಪುರಂ ಫೈನಾನ್ಸ್‌ಗಳ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿವೆ.

ಮುತ್ತೂಟ್ ಪಾಪಚಾನ್ ಗ್ರೂಪ್‌ನ ಅಂಗಸಂಸ್ಥೆ ಮುತ್ತೂಟ್ ಕ್ಯಾಪಿಟಲ್ ಸರ್ವಿಸಸ್ (ಬಿಎಸ್‌ಇ ₹1147.25) ಕೇರಳ ಮೂಲದ ಮತ್ತೊಂದು ಬ್ಯಾಂಕೇತರ ಹಣಕಾಸು ಸಂಸ್ಥೆ. ಮುತ್ತೂಟ್ ಕ್ಯಾಪಿಟಲ್‌, ದ್ವಿಚಕ್ರ ವಾಹನ ಖರೀದಿಗೆ ಸಾಲ ನೀಡುವುದನ್ನು ತನ್ನ ವಹಿವಾಟಿನ ಅಗ್ರಭಾಗವಾಗಿಸಿಕೊಂಡಿದೆ. ಸಾಲ ನೀಡಿಕೆಯ ಶೇ 90ರಷ್ಟು ಭಾಗವನ್ನು (₹ 2,238 ಕೋಟಿ) ದ್ವಿಚಕ್ರ ವಾಹನ ಖರೀದಿಗೆ ಸಾಲ ನೀಡಿದೆ. ಸಂಸ್ಥೆಯ ಶೇ 46ರಷ್ಟು ಸಾಲ ಕೇರಳದಲ್ಲಿಯೇ ನೀಡಲಾಗಿದೆ. ಕೆಲ ವರ್ಷಗಳಿಂದ ತೀವ್ರಗತಿಯಲ್ಲಿ ವಹಿವಾಟು ವಿಸ್ತರಿಸಿಕೊಳ್ಳುತ್ತಿದ್ದ ಕಂಪನಿಗೆ ರಾಜ್ಯದ ಪ್ರಸ್ತುತ ಸ್ಥಿತಿಯಿಂದ ಕಷ್ಟ ಒದಗಿದೆ. ಸಾಲ ಮರುಪಾವತಿಯ ಮೇಲೆಯೂ ಇದು ಪರಿಣಾಮ ಬೀರಬಲ್ಲದು.

ಟೈರ್ ಬೆಲೆ ಹೆಚ್ಚಾದೀತು: ನೈಸರ್ಗಿಕ್ ರಬ್ಬರ್ ಉತ್ಪಾದನೆಯಲ್ಲಿಯೂ ಕೇರಳ  ದೇಶದ ಅಗ್ರಗಣ್ಯ ರಾಜ್ಯ. ದೇಶದ ಒಟ್ಟು ರಬ್ಬರ್ ಉತ್ಪಾದನೆಯ ಶೇ 92ರಷ್ಟು ಕೇರಳದಿಂದ ಬರುತ್ತದೆ. ಬಹುತೇಕ ಟೈರ್ ತಯಾರಿಕಾ ಕಂಪನಿಗಳು ನೈಸರ್ಗಿಕ ರಬ್ಬರ್‌ಗಾಗಿ ಕೇರಳವನ್ನು ಆಧರಿಸಿವೆ. ಸತತ ಮಳೆಯಿಂದಾಗಿ ರಬ್ಬರ್‌ನ ಉತ್ಪಾದನೆ, ಸಾಗಣೆ ಮತ್ತು ಸಂಸ್ಕರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.

ರಬ್ಬರ್‌ನ ಉತ್ಪಾದನೆ ಕಡಿಮೆಯಾದರೆ ಸಹಜವಾಗಿಯೇ ಟೈರ್‌ ತಯಾರಿಕೆ ಕಂಪನಿಗಳು ವಿದೇಶಗಳಿಂದ ರಬ್ಬರ್ ಆಮದು ಮಾಡಿಕೊಳ್ಳಬೇಕಾಗುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯ ₹ 70ಕ್ಕೆ ಕುಸಿದಿರುವ ಕಾರಣ ಟೈರ್ ಕಂಪನಿಗಳ ತಯಾರಿಕಾ ವೆಚ್ಚವು ಹೆಚ್ಚಾಗಲಿದೆ. ಭವಿಷ್ಯದಲ್ಲಿ ಇದು ವಾಹನಗಳ ದರ, ಸರಕು ಸಾಗಣೆ ವೆಚ್ಚ ಸೇರಿದಂತೆ ಹಲವು ಆಯಾಮಗಳಲ್ಲಿ ದೀರ್ಘಕಾಲೀನ ಪರಿಣಾಮ ಬೀರಲಿದೆ.

ಇವುಗಳೂ ಕಷ್ಟದಲ್ಲಿವೆ: ಕೇರಳದಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿ-ಗಾರ್ಡ್ (ಬಿಎಸ್‌ಇ ₹215.10) ಈ ಮೊದಲು ದಕ್ಷಿಣ ಭಾರತದಲ್ಲಿ ಹೆಚ್ಚು ವಹಿವಾಟು ನಡೆಸುತ್ತಿತ್ತು. ಈಗಲೂ ಕಂಪನಿಯ ಶೇ 55ರಷ್ಟು ಆದಾಯ ದಕ್ಷಿಣ ಭಾರತದಿಂದಲೇ ಬರುತ್ತಿದೆ. ಆದರೆ, ದೇಶವ್ಯಾಪಿ ಕಾರ್ಯಾಚರಣೆ ವಿಸ್ತರಿಸಿರುವುದರಿಂದ ಕೇರಳದ ಪ್ರವಾಹದಿಂದ ಆದ ಪರಿಣಾಮವನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಿಕೊಳ್ಳುತ್ತದೆ. ಮಕ್ಕಳ ಉಡುಪುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಕಿಟೆಕ್ಸ್ ಗಾರ್ಮೆಂಟ್ಸ್‌ನ (ಬಿಎಸ್‌ಇ ₹121.60) ಕೊಚ್ಚಿ ಸಮೀಪದ ಕಿಝಕಂಬಳಂ ಘಟಕ ಸಂಕಷ್ಟಕ್ಕೆ ಸಿಲುಕಿದೆ. ಹೊಲಿಗೆ, ಕಸೂತಿ ಮತ್ತು ಬಣ್ಣ ಹಾಕುವ ಮುಖ್ಯ ಕಾರ್ಯಗಳನ್ನು ಈ ಘಟಕ ನಿರ್ವಹಿಸುತ್ತಿತ್ತು.

ಹಡಗು ನಿರ್ಮಾಣ, ನಿರ್ವಹಣೆ ಮತ್ತು ರಿಪೇರಿ ಕೆಲಸ ಮಾಡುವ ಕೊಚ್ಚಿನ್ ಶಿಪ್‌ಯಾರ್ಡ್‌ನ (ಬಿಎಸ್‌ಇ ₹443.35) ಕಾರ್ಯಚಟುವಟಿಕೆಗಳ ಮೇಲೆಯೂ ಸತತ ಮಳೆ ಪರಿಣಾಮ ಬೀರಲಿದೆ. ನಿರ್ಮಾಣವಾಗುತ್ತಿರುವ ಹಡಗುಗಳು ತಡವಾಗಬಹುದು. ರಿಪೇರಿ ಕೆಲಸದ ಮೇಲೆ ಬೀರುವ ಪರಿಣಾಮ ಸಂಸ್ಥೆಯ ಲಾಭವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ‘ಮನಿಕಂಟ್ರೋಲ್’ ಜಾಲತಾಣ ವರದಿ ಮಾಡಿದೆ.

ಸಿಮೆಂಟ್ ಕಂಪನಿಗಳ ಸ್ಥಿತಿಗತಿ: ಐದು ವರ್ಷಗಳಿಂದ ಆರಕ್ಕೇರದೆ, ಮೂರಕ್ಕಿಳಿಯದ ಸ್ಥಿತಿಯಲ್ಲಿತ್ತು ಸಿಮೆಂಟ್ ವಲಯ.  ಎರಡು ವರ್ಷಗಳಿಂದೀಚೆಗೆ ಅಲ್ಪ ಪ್ರಗತಿ ಸಾಧಿಸಿತ್ತು. ಆದರೆ ಸತತ ಮಳೆಯಿಂದ ಕೇರಳದಲ್ಲಿ ಆದಾಯಕ್ಕೆ ಹೊಡೆತ ಬಿದ್ದಿರುವುದರಿಂದ ಇದು ಮತ್ತೆ ಕಡಿಮೆಯಾಗುವ ಅಪಾಯ ಎದುರಿಸುತ್ತಿದೆ. ದಕ್ಷಿಣ ಭಾರತದ ಒಟ್ಟು ಸಿಮೆಂಟ್ ಮಾರುಕಟ್ಟೆಯಲ್ಲಿ ಕೇರಳದ ಪಾಲು ಶೇ 13ರಿಂದ 14.

ಕೇರಳ ಸರ್ಕಾರದ ಮಾಲೀಕತ್ವದಲ್ಲಿರುವ ಮಲಬಾರ್ ಸಿಮೆಂಟ್, ಕೇರಳದ ಅತಿದೊಡ್ಡ ಸಿಮೆಂಟ್ ತಯಾರಿಕಾ ಕಂಪನಿ. ಚೆನ್ನೈನ ರಾಮ್ಕೊ ಸಿಮೆಂಟ್‌ನ (ಬಿಎಸ್‌ಇ ₹680.20) ಬಹುಪಾಲು ಆದಾಯ ಕೇರಳ ಮತ್ತು ತಮಿಳುನಾಡಿನಿಂದ ಬರುತ್ತದೆ. ಜೆಕೆ ಸಿಮೆಂಟ್ ಕಂಪನಿ (ಬಿಎಸ್‌ಇ ₹788.95) ಕೇರಳದ ಸಿಮೆಂಟ್ ಮಾರುಕಟ್ಟೆಯಲ್ಲಿ ಶೇ 5ರಷ್ಟು ಪಾಲು ಹೊಂದಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ಕೇರಳದ ಸಿಮೆಂಟ್ ಬೇಡಿಕೆ ಕಡಿಮೆಯಾಗಬಹುದು. ಇದರಿಂದ ದಕ್ಷಿಣ ಭಾರತದಲ್ಲಿ ಗಮನಾರ್ಹ ವಹಿವಾಟು ನಡೆಸುವ ಶ್ರೀಸಿಮೆಂಟ್, ಇಂಡಿಯಾ ಸಿಮೆಂಟ್ಸ್, ಪೆನ್ನಾ ಸಿಮೆಂಟ್, ದಾಲ್ಮಿಯಾ ಭಾರತ್ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆ ಕಡಿತಗೊಳಿಸುವ ಸಾಧ್ಯತೆ ಇದೆ. ಆದರೆ ಒಮ್ಮೆ ಪುನರ್‌ ನಿರ್ಮಾಣ ಚಟುವಟಿಕೆ ಪೂರ್ಣಪ್ರಮಾಣದಲ್ಲಿ ಆರಂಭವಾದ ನಂತರ ಸಿಮೆಂಟ್ ಉದ್ಯಮಕ್ಕೆ ಬೇಡಿಕೆ ಕುದುರಲಿದೆ.

ಬರಹ ಇಷ್ಟವಾಯಿತೆ?

 • 27

  Happy
 • 3

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !