ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ವಿಚಾರಣೆ ಮುಂದೂಡಿಕೆ: ಬಿಜೆಪಿಯಲ್ಲಿ ತಳಮಳ

Last Updated 29 ಅಕ್ಟೋಬರ್ 2018, 11:25 IST
ಅಕ್ಷರ ಗಾತ್ರ

ನವದೆಹಲಿ:ಅಯೋಧ್ಯೆ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಜನವರಿಗೆ ಮುಂದೂಡಿದೆ. ಕೋರ್ಟ್‌ನ ಈ ಕ್ರಮದಿಂದ ಬಿಜೆಪಿಯ ಒಂದು ವರ್ಗದಲ್ಲಿ ಚಿಂತೆ ಮೂಡಿದೆ. ಆದರೆ ಮತ್ತೊಂದು ವರ್ಗ ಮಾತ್ರ, ‘ಚುನಾವಣೆ ಸಮೀಪದಲ್ಲಿದ್ದಾಗ ತೀರ್ಪು ಹೊರಬಂದರೆ ಪಕ್ಷಕ್ಕೆ ಅನುಕೂಲವಾಗಲಿದೆ’ ಎಂದು ವಿಶ್ಲೇಷಿಸುತ್ತಿದೆ.

ಬಿಜೆಪಿಯ ಪಾಲಿಗೆ ರಾಮಮಂದಿರ ವಿವಾದ ಅತಿ ನಾಜೂಕಿನದ್ದು.ರಾಜಕೀಯವಾಗಿ ಮತ್ತು ಚುನಾವಣೆ ದೃಷ್ಟಿಯಿಂದ ಬಿಜೆಪಿಯ ಮತದಾರರ ಮೇಲೆ ಇದು ವ್ಯಾಪಕ ಪರಿಣಾಮ ಬೀರುತ್ತದೆ.ವಿಚಾರಣೆಯನ್ನು ಮುಂದೂಡಿರುವ ಸುಪ್ರೀಂಕೋರ್ಟ್‌ನ ಕ್ರಮವು ಆಡಳಿತಾರೂಢ ಬಿಜೆಪಿಯ ಒಂದು ವಲಯದಲ್ಲಿ ಹಲವು ಲೆಕ್ಕಾಚಾರಗಳು ಗರಿಗೆದರುವಂತೆ ಮಾಡಿದೆ. ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಪ್ರಕರಣದ ವಿಚಾರಣೆ ನಡೆಯುವುದು ಅಥವಾ ಅಂತಿಮ ತೀರ್ಪು ಹೊರಬೀಳುವುದದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ. ಆದರೆ ಕೆಲವರು ಮಾತ್ರ ಕೋರ್ಟ್‌ ಮುಂದೂಡಿಕೆ ನಿರ್ಧಾರಪಕ್ಷದ ಮೇಲೆ ಒತ್ತಡ ಹೆಚ್ಚಿಸಿದೆ ಎನ್ನುತ್ತಿದ್ದಾರೆ.

ಚುನಾವಣೆ ಅಸ್ತ್ರ

1990ರಿಂದಲೂ ಬಿಜೆಪಿಗೆ ಅಯೋಧ್ಯೆ ವಿವಾದ ಚುನಾವಣೆಯ ವಿಷಯವಾಗಿದೆ. 90ರ ದಶಕದಲ್ಲಿ ಪಕ್ಷದ ಜನಪ್ರಿಯತೆ ಮತ್ತು ಪ್ರಭಾವ ಹೆಚ್ಚಾಗಲು ಅಯೋಧ್ಯೆ ಮುಖ್ಯಕಾರಣವಾಗಿತ್ತು. ಕೇಂದ್ರ ಮತ್ತು ಕೆಲ ರಾಜ್ಯಗಳಲ್ಲಿ ಬಿಜೆಪಿ ಈಗ ಅಧಿಕಾರ ವಿರೋಧಿ ಅಲೆ ಎದುರಿಸುತ್ತಿದೆ. ನವೆಂಬರ್ ಮತ್ತು ಡಿಸೆಂಬರ್‌ ತಿಂಗಳಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ತೀರ್ಪು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಸೋಮವಾರ ನ್ಯಾಯಾಲಯದ ತೀರ್ಪು ಹೊರಬಿದ್ದ ತಕ್ಷಣ ಟ್ವಿಟರ್‌ನಲ್ಲಿ#Ordinance4RamMandir (ರಾಮಮಂದಿರಕ್ಕಾಗಿ ಅಧಿಸೂಚನೆ) ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಇದೂ ಸಹ ಬಿಜೆಪಿಯ ಒಂದು ಯೋಜಿತ ಕಾರ್ಯತಂತ್ರ ಎಂಬ ಮಾತುಗಳು ಚಾಲ್ತಿಯಲ್ಲಿವೆ.

‘ನ್ಯಾಯಾಲಯದ ನಿರ್ಧಾರದಿಂದನಮ್ಮ ಕಾಯಂ ಮತದಾರರಿಗೆ ಅತೃಪ್ತಿ ಉಂಟಾಗಿದೆ. ಚುನಾವಣೆಯ ಹೊಸಿಲಲ್ಲಿ ಇದರಿಂದ ನಮಗೆ ಒಳ್ಳೆಯದಾಗದು’ ಎಂದು ಪಕ್ಷದ ಹೆಸರು ಹೇಳಲು ಇಚ್ಛಿಸದ ರಾಷ್ಟ್ರೀಯ ನಾಯಕರೊಬ್ಬರು ಅಭಿಪ್ರಾಯಪಟ್ಟರು.

‘ಬಿಜೆಪಿ ಸರ್ಕಾರದಿಂದ ಹೊಸ ಕಾನೂನು ಅಥವಾ ಅಧಿಸೂಚನೆ ಹೊರಬೀಳಬೇಕು ಎಂದು ಮತದಾರರು ಬಯಸುತ್ತಿದ್ದಾರೆ. ಅದನ್ನು ಮಾಡಲು ನಮಗೆ ಸಾಧ್ಯವಿಲ್ಲ. ಇದರಿಂದ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರಲ್ಲಿ ಹೆಚ್ಚಿನ ಅಸಮಾಧಾನ ಮೂಡುತ್ತದೆ. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ನಮ್ಮ ಬದ್ಧತೆಯನ್ನು ಅವರು ಪ್ರಶ್ನಿಸುವಂತಾಗುತ್ತದೆ. ನ್ಯಾಯಾಲಯ ಸೂಕ್ತ ಕಾಲದಲ್ಲಿ ತೀರ್ಪು ನೀಡಿದ್ದರೆ ನಮ್ಮ ಮೇಲಿದ್ದ ಒತ್ತಡ ಕಡಿಮೆಯಾಗುತ್ತಿತ್ತು’ ಎಂದು ಅವರು ನುಡಿದರು.

‘ವಿವಾದಿತ ಪ್ರದೇಶದಲ್ಲಿ ರಾಮಮಂದಿರ ಕಟ್ಟಲು ಸರ್ಕಾರ ಕಾನೂನು ಜಾರಿ ಮಾಡಬೇಕು’ ಎಂದು ಆರ್‌ಎಸ್‌ಎಸ್‌ ನಾಯಕ ಮೋಹನ್ ಭಾಗವತ್ ಈಚೆಗೆ ಕರೆ ನೀಡಿದ್ದನ್ನು ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT