ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ | ಹಾಟ್‌ಸ್ಪಾಟ್‌ ಸಂಖ್ಯೆ ಇಳಿಮುಖ; ಕರ್ನಾಟಕದ ಯಾವ ಜಿಲ್ಲೆಯೂ ಇದರಲ್ಲಿಲ್ಲ

9 ರಾಜ್ಯಗಳ 15 ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಅತಿ ಹೆಚ್ಚು l
Last Updated 29 ಏಪ್ರಿಲ್ 2020, 21:01 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಎರಡು ವಾರಗಳ ಬಳಿಕ ದೇಶದಲ್ಲಿ ಕೋವಿಡ್‌ ಹಾಟ್‌ಸ್ಪಾಟ್‌ ಜಿಲ್ಲೆಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 15 ದಿನಗಳ ಹಿಂದೆ 170 ಜಿಲ್ಲೆಗಳನ್ನು ಕೋವಿಡ್‌ ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿತ್ತು. ಬುಧವಾರದ ಹೊತ್ತಿಗೆ ಅವುಗಳ ಸಂಖ್ಯೆ 129ಕ್ಕೆ ಇಳಿದಿದೆ. ಕೋವಿಡ್‌ ಪ್ರಮಾಣ ಕಡಿಮೆ ಇರುವ ಕಿತ್ತಳೆ ಜಿಲ್ಲೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 207ರಿಂದ 297ಕ್ಕೆ ಹೆಚ್ಚಾಗಿದೆ.

ಹಸಿರು ವಲಯಗಳ ಸಂಖ್ಯೆ 325ರಿಂದ 307ಕ್ಕೆ ಇಳಿದಿದೆ.

ಜಿಲ್ಲೆಗಳನ್ನು ಮೂರು ವರ್ಗಗಳಾಗಿ ಕೇಂದ್ರ ಸರ್ಕಾರವು ಏಪ್ರಿಲ್‌ 15ರಂದು ವರ್ಗೀಕರಿಸಿತ್ತು. ಕೋವಿಡ್‌–19 ಪ್ರಕರಣಗಳು ಹೆಚ್ಚು ಇರುವ ಮತ್ತು ಸೋಂಕು ಪಸರಿಸುವಿಕೆಯ ಪ್ರಮಾಣ ಹೆಚ್ಚಾಗಿರುವ ಜಿಲ್ಲೆಗಳನ್ನು ಹಾಟ್‌ಸ್ಪಾಟ್‌ ಅಥವಾ ಕೆಂಪು ವಲಯ ಎಂದು ಗುರುತಿಸಲಾಗಿತ್ತು. ಪ್ರಕರಣಗಳು ಕಡಿಮೆ ಇರುವ ಜಿಲ್ಲೆಗಳನ್ನು ಕಿತ್ತಳೆ, ಪ್ರಕರಣಗಳು ಇಲ್ಲದ ಜಿಲ್ಲೆಗಳನ್ನು ಹಸಿರು ವಲಯ ಎಂದು ವಿಂಗಡಿಸಲಾಗಿತ್ತು.

ಕೆಂಪು ವಲಯದಲ್ಲಿ 28 ದಿನಗಳಲ್ಲಿ ಮತ್ತು ಕಿತ್ತಳೆ ವಲಯದಲ್ಲಿ 14 ದಿನಗಳಲ್ಲಿ ಕೋವಿಡ್‌ನ ಹೊಸ ಪ್ರಕರಣ ವರದಿಯಾಗದೇ ಇದ್ದರೆ ಈ ಜಿಲ್ಲೆಗಳನ್ನು ಹಸಿರು ವಲಯ ಎಂದು ಗುರುತಿಸಲಾಗುತ್ತದೆ. ಒಂಬತ್ತು ರಾಜ್ಯಗಳ 15ಜಿಲ್ಲೆಗಳನ್ನು ಅತಿ ಹೆಚ್ಚು ಪ್ರಕರಣಗಳಿರುವ ಪ್ರದೇಶ ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಜಿಲ್ಲೆ ಇಲ್ಲ. ದೆಹಲಿ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯ
ಪ್ರದೇಶ, ತೆಲಂಗಾಣ, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು ಮತ್ತು ಗುಜರಾತ್‌ನ ಜಿಲ್ಲೆಗಳು ಈ ಪಟ್ಟಿಯಲ್ಲಿ ಸೇರಿವೆ.

ವಲಸಿಗರ ಸಂಚಾರಕ್ಕೆ ಅನುಮತಿ
ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರು ತಮ್ಮ ಮನೆಗಳಿಗೆ ಮರಳಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.ವ್ಯಕ್ತಿ ಅಥವಾ ಕುಟುಂಬಗಳು ಖಾಸಗಿ ವಾಹನದಲ್ಲಿ ಪ್ರಯಾಣಿಸಲು ಅವಕಾಶ ಇಲ್ಲ. ರಾಜ್ಯ ಸರ್ಕಾರಗಳು ಮಾತ್ರ ವಲಸಿಗರ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಲಾಕ್‌ಡೌನ್‌ ಘೋಷಿಸಿದಾಗಲೇ ಜನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಸಾವಿರಾರು ಜನರು ನಡೆದೇ ತಮ್ಮ ಊರುಗಳಿಗೆ ಮರಳಿದ್ದರು. ಮಾರ್ಗ ಮಧ್ಯದಲ್ಲಿ ಹಲವರು ಮೃತಪಟ್ಟಿದ್ದರು. ಇದು ಗಂಭೀರ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಪರಿಣಾಮವಾಗಿ, ವಲಸಿಗರ ಸಂಚಾರಕ್ಕೆ ಅವಕಾಶ ಕೊಡಬಾರದು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಈ ಜನರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆ ಮಾಡುವಂತೆ ಸೂಚಿಸಿತ್ತು. ಇದರಿಂದ ಹತಾಶರಾಗಿದ್ದ ಕಾರ್ಮಿಕರು ಪ್ರತಿಭಟನೆಗಳನ್ನೂ ನಡೆಸಿದ್ದರು.

ಮನೆಗೆ ಮರಳಲು ಪ್ರಕ್ರಿಯೆಗಳೇನು?

*ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೋಡಲ್‌ ಅಧಿಕಾರಿ/ಸಂಸ್ಥೆಗಳನ್ನು ನೇಮಿಸಬೇಕು. ರಾಜ್ಯದಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಗಳನ್ನು ಈ ನೋಡಲ್‌ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಬೇಕು

*ಸಿಲುಕಿಕೊಂಡಿರುವವರನ್ನು ಕಳುಹಿಸಲು ಮತ್ತು ಬರಮಾಡಿಕೊಳ್ಳಲು ರಾಜ್ಯ ಸರ್ಕಾರಗಳುಮಾನದಂಡಗಳನ್ನು ರೂಪಿಸಬೇಕು

*ವ್ಯಕ್ತಿಗಳು ಬೇರೊಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಹೋಗಬೇಕಿದ್ದರೆ, ಕಳುಹಿಸುವ ಮತ್ತು ಬರಮಾಡಿಕೊಳ್ಳುವ ರಾಜ್ಯಗಳು ಪರಸ್ಪರ ಮಾತುಕತೆ ನಡೆಸಿ, ರಸ್ತೆ ಮೂಲಕ ಜನರನ್ನು ಕಳುಹಿಸುವ ಬಗ್ಗೆ ಒಮ್ಮತಕ್ಕೆ ಬರಬೇಕು

*ಈ ಜನರ ಪ್ರಯಾಣಕ್ಕೆ ಬಸ್‌ಗಳನ್ನು ಬಳಸಬಹುದು. ಆದರೆ, ಅಂತರ ಕಾಯ್ದುಕೊಳ್ಳುವಿಕೆ ನಿಯಮ ಪಾಲನೆ ಆಗಬೇಕು. ಬಸ್‌ಗಳನ್ನು ಸೋಂಕುನಿರೋಧಕ ಸಿಂಪಡಿಸಿ, ಸೋಂಕುಮುಕ್ತಗೊಳಿಸಬೇಕು

*ಊರಿಗೆ ಮರಳುವ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಬೇಕು. ಸೋಂಕಿನ ಲಕ್ಷಣ ಇಲ್ಲದವರಿಗೆ ಮಾತ್ರ ಪ್ರಯಾಣಿಸಲು ಅನುಮತಿ ಇದೆ

*ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವಾಗ ಬೇರೆ ರಾಜ್ಯಗಳನ್ನು ಹಾದು ಹೋಗಬೇಕಿದ್ದರೆ, ಆ ರಾಜ್ಯಗಳು ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು

*ತವರು ರಾಜ್ಯ ತಲುಪಿದ ಜನರನ್ನು ಸ್ಥಳೀಯ ಆರೋಗ್ಯ ಇಲಾಖೆಯು ತಪಾಸಣೆಗೆ ಒಳಪ‍ಡಿಸಬೇಕು. ಸಾಂಸ್ಥಿಕ ಕ್ವಾರಂಟೈನ್‌ ಅಗತ್ಯ ಇರುವವರನ್ನು ಬಿಟ್ಟು ಇತರರನ್ನು ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿ ಇರಿಸಬೇಕು

ಲಾಕ್‌ಡೌನ್‌ ವಿಸ್ತರಣೆ ಸಾಧ್ಯತೆ

ಲಾಕ್‌ಡೌನ್‌ನಿಂದಾಗಿ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ ಮೇ 3ರ ಬಳಿಕವೂ ಲಾಕ್‌ಡೌನ್‌ ಮುಂದುವರಿಸುವ ಸಾಧ್ಯತೆ ಇದೆ ಎಂಬ ಇಂಗಿತ ಗೃಹ ಸಚಿವಾಲಯದ ಟ್ವೀಟ್‌ ಮೂಲಕ ವ್ಯಕ್ತವಾಗಿದೆ. ಕೆಲವು ಜಿಲ್ಲೆಗಳಿಗೆ ಮೇ 4ರ ನಂತರ ಇನ್ನಷ್ಟು ವಿನಾಯಿತಿ ದೊರೆಯಲಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT