ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಬದಲಾವಣೆಯತ್ತ ಒಲವು: ಹೊಸ ಪಕ್ಷ ಸ್ಥಾಪನೆ ಮಾಹಿತಿ ಬಿಚ್ಚಿಡದ ರಜನಿ

ಮುಖ್ಯಮಂತ್ರಿ ಹುದ್ದೆ ಬೇಡ ಎಂದ ಸೂಪರ್‌ಸ್ಟಾರ್
Last Updated 12 ಮಾರ್ಚ್ 2020, 19:40 IST
ಅಕ್ಷರ ಗಾತ್ರ

ಚೆನ್ನೈ:ತಮಿಳು ಸಿನಿಮಾರಂಗದ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ತಮ್ಮ ರಾಜಕೀಯ ಪಕ್ಷಕ್ಕೆ ಯಾವಾಗ ಚಾಲನೆ ದೊರೆಯಲಿದೆ ಎಂಬುದನ್ನು ಇನ್ನೂ ನಿಗೂಢವಾಗಿಯೇ ಇರಿಸಿಕೊಂಡಿದ್ದಾರೆ. ಮಾಧ್ಯಮದ ಜತೆ ಗುರುವಾರ ಮಾತನಾಡುವುದಾಗಿ ಅವರು ಮೊದಲೇ ಪ್ರಕಟಿಸಿದ್ದರು. ಈ ಮಾಧ್ಯಮಗೋಷ್ಠಿಯಲ್ಲಿ ಅವರು ರಾಜಕೀಯ ಪಕ್ಷ ಆರಂಭಿಸುವುದಕ್ಕೆ ಸಂಬಂಧಿಸಿದ ಮಾಹಿತಿ ನೀಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಗುರುವಾರದ ಕಾರ್ಯಕ್ರಮದಲ್ಲಿಯೂ ಯಾವುದೇ ಪ್ರಕಟಣೆ ಹೊರಬೀಳಲಿಲ್ಲ.

ತಮಿಳುನಾಡಿನ ಮುಖ್ಯಮಂತ್ರಿಯಾಗುವ ಯಾವುದೇ ಆಕಾಂಕ್ಷೆ ಇಲ್ಲ ಎಂದು ರಜನಿಕಾಂತ್ ಹೇಳಿದರು. ಆದರೆ, ತಾವು ರಾಜಕೀಯ ಪ್ರವೇಶಿಸುವುದಕ್ಕಾಗಿ ಜನರೇ ರಾಜಕೀಯ ಬದಲಾವಣೆಗೆ ಕಾರಣರಾಗಬೇಕು ಎಂದು ಕರೆಕೊಟ್ಟರು.

‘ಮುಖ್ಯಮಂತ್ರಿಯಾಗಲು ನಾನು ಎಂದೂ ಹಂಬಲಿಸಿಲ್ಲ, ಅದು ನನ್ನ ಗುಣವೂ ಅಲ್ಲ. ಆದರೆ ರಾಜಕೀಯ ಪಕ್ಷವೊಂದರ ಮುಂದಾಳು ಆಗಿ, ಸರ್ಕಾರದ ಕಾರ್ಯವೈಖರಿಯಲ್ಲಿ ಹಸ್ತಕ್ಷೇಪ ಮಾಡದೇ, ಮೇಲ್ವಿಚಾರಣೆ ಮಾಡುವುದನ್ನು ಬಯಸುತ್ತೇನೆ’ ಎಂದು ರಜನಿ ತಮ್ಮ ಮನದಿಂಗಿತ ವ್ಯಕ್ತಪಡಿಸಿದರು.

ಅರ್ಧಗಂಟೆಯ ತಮ್ಮ ಮಾಧ್ಯಮಗೋಷ್ಠಿಯಲ್ಲಿ ಮೊದಲೇ ಸಿದ್ಧಪಡಿಸಿ ಇರಿಸಿದ್ದ ಭಾಷಣವನ್ನು ಮಂಡಿಸಿದರು. ತಮ್ಮ ರಾಜಕೀಯ ಪ್ರವೇಶದ ಚೆಂಡನ್ನು ಜನಸಾಮಾನ್ಯರ ಅಂಗಳಕ್ಕೆ ಎಸೆದರು. ಮಾಧ್ಯಮದವರ ಪ್ರಶ್ನೆಗಳಿಗೆ ಅವರು ಉತ್ತರಿಸಲಿಲ್ಲ. ಪ್ರಶ್ನೆಗಳಿಗೆ ಉತ್ತರಿಸದೇ ತೆರಳುತ್ತಿರುವುದಕ್ಕೆ ಪತ್ರಕರ್ತರ ಕ್ಷಮೆ ಕೇಳಿದ ಅವರು, ಪ್ರಶ್ನೋತ್ತರಗಳು ಜನರ ದಾರಿ ತಪ್ಪಿಸಬಾರದು ಎಂಬ ಕಾರಣ ನೀಡಿದರು.

‘ವಿಧಾನಸಭೆಯಲ್ಲಿ ಕುಳಿತುಕೊಳ್ಳುವುದು, ಭಾಷಣ ಮಾಡುವುದು, ಭಾಷಣ ಕೇಳಿಸಿಕೊಳ್ಳುವುದು ನನ್ನಿಂದ ಆಗದು’ ಎಂದ ಅವರು, ‘ದಶಕದಿಂದ ತಮಿಳುನಾಡು ನಿರೀಕ್ಷಿಸುತ್ತಿರುವ ರಾಜಕೀಯ ಬದಲಾವಣೆಯಹಾದಿಯನ್ನು ಸುಗಮಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು.

2021ರ ಚುನಾವಣೆ ತಮ್ಮ ಮೊದಲ ಹಾಗೂ ಕೊನೆಯ ಚುನಾವಣೆ ಎಂದಿರುವ ಅವರು, ತಮ್ಮ ‘ನೀತಿ’ಗಳು ಹಾಗೂ ‘ಮುಖ್ಯಮಂತ್ರಿ ಆಗುವುದಿಲ್ಲ’ ಎಂಬ ನಿಲುವುಗಳನ್ನು ಚುನಾವಣೆಗೆ ಸಾಕಷ್ಟು ಸಮಯದ ಮೊದಲೇ ಹರಿಬಿಟ್ಟಿದ್ದಾರೆ. ‘ಜನರು ನನ್ನ ನಿಲುವುಗಳನ್ನು ಒಪ್ಪುಕೊಳ್ಳುವುದಿಲ್ಲ ಎಂದಾದರೆ, ಪಕ್ಷವನ್ನು ಆರಂಭಿಸಿದ ಮೇಲೆ ಅವರು ಅದನ್ನು ಹೇಗೆ ಸ್ವೀಕರಿಸುತ್ತಾರೆ’ ಎಂದು ಪ್ರಶ್ನಿಸಿದ್ದಾರೆ.

ದ್ರಾವಿಡ ಕಟ್ಟಾಳುಗಳಾದ ಎಂ. ಕರುಣಾನಿಧಿ ಹಾಗೂ ಜೆ. ಜಯಲಲಿತಾ ಅವರ ನಿಧನದ ಬಳಿಕ ರಾಜ್ಯ ರಾಜಕೀಯ
ದಲ್ಲಿ ಶೂನ್ಯ ಆವರಿಸಿದೆ. ಈ ಶೂನ್ಯ ತುಂಬಲು 2021ರ ಚುನಾವಣೆ ಬಹುದೊಡ್ಡ ಅವಕಾಶ ಎಂದು ಹೇಳಿದ್ದಾರೆ.

**

ಬದಲಾವಣೆಗಾಗಿ ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದೇನೆಯೇ ವಿನಾಃ ಮತ ವಿಭಜನೆ ಮಾಡುವುದು ನನ್ನ ಉದ್ದೇಶವಲ್ಲ.
-ರಜನಿಕಾಂತ್, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT