ಶುಕ್ರವಾರ, ನವೆಂಬರ್ 22, 2019
27 °C

ಭಾರತ– ಜರ್ಮನಿ ಸಹಕಾರ, ಒಪ್ಪಂದ

Published:
Updated:
Prajavani

ನವದೆಹಲಿ : ‘ಕೃಷಿ, ಸಾಗರ ತಂತ್ರಜ್ಞಾನ, ನಾಗರಿಕ ವಿಮಾನಯಾನ, ಶಿಕ್ಷಣ, ಆಯುರ್ವೇದ- ಯೋಗ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ವಿಚಾರವಾಗಿ ಸಹಕಾರ ನೀಡುವುದಕ್ಕೆ ಸಂಬಂಧಿಸಿ ಭಾರತ ಮತ್ತು ಜರ್ಮನಿ ನಡುವೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ತಿಳಿಸಿದೆ.

ಪರಸ್ಪರ ಕಾರ್ಯತಂತ್ರ ಸಹಕಾರಹಾಗೂ ವ್ಯಾಪಾರ ವೃದ್ಧಿಗೆ ಸಂಬಂಧಿಸಿದ ಹಲವು ಒಪ್ಪಂದಗಳಿಗೆ ಪ್ರಧಾನಿ ನರೇಂದ್ರ
ಮೋದಿ ಹಾಗೂ ಜರ್ಮನ್‌ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಸಹಿ ಮಾಡಿದರು. ಪರಿಸರಸ್ನೇಹಿ ಯೋಜನೆಗಳು, ಕೃತಕ ಬುದ್ಧಿಮತ್ತೆ ಕುರಿತು ಸಂಶೋಧನೆ ಮತ್ತು ಅಭಿವೃದ್ಧಿ, ಸಾಗರ ಮಾಲಿನ್ಯ ತಡೆಗಟ್ಟುವುದೂ ಸೇರಿದಂತೆ ಕೆಲವು ಪ್ರಮುಖ ವಿಚಾರಗಳಿಗೆ ಸಂಬಂಧಿಸಿದ ಐದು ಜಂಟಿ ಘೊಷಣೆಗಳಿಗೆ ಎರಡೂ ರಾಷ್ಟ್ರಗಳು ಸಹಿ ಮಾಡಿವೆ' ಎಂದು ಸಚಿವಾಲಯ ತಿಳಿಸಿದೆ.

ಮೋದಿ ಮತ್ತು ಮರ್ಕೆಲ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೌಶಲ ಅಭಿವೃದ್ಧಿ, ವೃತ್ತಿ ಶಿಕ್ಷಣ ತರಬೇತಿ ಹಾಗೂ ಎರಡು ದೇಶಗಳ ವಿದ್ಯಾರ್ಥಿಗಳ ವಿನಿಮಯ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಒಪ್ಪಂದ ಮಾಡಿಕೊಳ್ಳಲಾಗಿದೆ. ‘ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಸಹಕಾರ ನೀಡುವ ವಿಚಾರದಲ್ಲಿ ಮಾತುಕತೆ ನಡೆಸಿದ್ದೇವೆ. ಶಿಕ್ಷಕರ ವಿನಿಮಯ ಮಾಡಿಕೊಳ್ಳಲು ಸಹ ನಾವು ಬಯಸುತ್ತೇವೆ. ಇದರಿಂದ ಸರಿಯಾದ ಬೋಧನಾ ವಿಧಾನ ತಿಳಿದುಕೊಳ್ಳಲು ಸಾಧ್ಯವಾಗಲಿದೆ’ ಎಂದು ಮರ್ಕೆಲ್‌ ಹೇಳಿದ್ದಾರೆ.

ಎರಡೂ ರಾಷ್ಟ್ರಗಳ ಮುಖ್ಯಸ್ಥರ ಭೇಟಿಗೆ ಸಮಾನಾಂತರವಾಗಿ ಅಧಿಕಾರಿಗಳು ಮತ್ತು ಉದ್ಯಮಿಗಳ ನಿಯೋಗಗಳ ನಡುವೆಯೂ ಮಾತುಕತೆ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಹೊಂಜಿಗೆ ಅಂಜದ ಮರ್ಕೆಲ್‌: ಹೊಂಜಿನಿಂದಾಗಿ ದೆಹಲಿಯಲ್ಲಿ ಆರೋಗ್ಯ ತುರ್ತು ಸ್ಥಿತಿ ಘೋಷಿಸಲಾಗಿದ್ದರೂ, ಮರ್ಕೆಲ್‌ ಅವರು ಮುಖಗವಸು ಇಲ್ಲದೆಯೇ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಭಾರತ– ಜರ್ಮನಿ ಸಹಕಾರವು ಆಧುನಿಕ ತಂತ್ರಜ್ಞಾನಕ್ಕೂ ವಿಸ್ತರಿಸುತ್ತಿದೆ. ಭಾರತದ ಮೂಲಸೌಲಭ್ಯ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಉತ್ಸುಕವಾಗಿದ್ದೇವೆ ಏಂಜೆಲಾ ಮರ್ಕೆಲ್‌, -ಜರ್ಮನಿಯ ಚಾನ್ಸಲರ್‌

2022ರ ವೇಳೆಗೆ ನವ ಭಾರತ ನಿರ್ಮಿಸುವ ಘೋಷಣೆಯನ್ನು ನಾವು ಮಾಡಿದ್ದೇವೆ. ಇದನ್ನು ಸಾಕಾರಗೊಳಿಸಲು ಜರ್ಮನಿಯ ತಂತ್ರಜ್ಞಾನ ನೆರವಾಗಲಿದೆ
-ನರೇಂದ್ರ ಮೋದಿ, ಪ್ರಧಾನಿ

ಪ್ರತಿಕ್ರಿಯಿಸಿ (+)