ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ- ಚೀನಾ ಗಡಿ: ಮುಗಿದಿಲ್ಲ ಗಡಿಬಿಡಿ

ಗಾಲ್ವನ್‌ ಕಣಿವೆಯ ದೆಪ್ಸಾಂಗ್‌ ಪ್ರದೇಶದಲ್ಲಿ ಚೀನಾದ ಸೈನಿಕರ ಜಮಾವಣೆ
Last Updated 25 ಜೂನ್ 2020, 1:37 IST
ಅಕ್ಷರ ಗಾತ್ರ

ನವದೆಹಲಿ: ಗಡಿಯಲ್ಲಿ ಚೀನಾದ ಉಪಟಳ ಸದ್ಯಕ್ಕೆ ಮುಗಿಯುವಂತೆ ಕಾಣಿಸುತ್ತಿಲ್ಲ. ಗಾಲ್ವನ್‌ ಕಣಿವೆಯ ಉತ್ತರಕ್ಕಿರುವ ದೆಪ್ಸಾಂಗ್‌ ಪ್ರದೇಶದಲ್ಲಿ ಚೀನಾವು ಸೈನಿಕರ ಜಮಾವಣೆಯನ್ನು ಹೆಚ್ಚಿಸಿದೆ. ಗಾಲ್ವನ್‌ ಕಣಿವೆ ಮತ್ತು ಪಾಂಗಾಂಗ್ ಸರೋವರದ ದಂಡೆಯಲ್ಲಿಯೂ ಚೀನಾದ ಸೈನಿಕರು ಭಾರಿ ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ.

ಜೂನ್‌ 15ರಂದು ಸಂಘರ್ಷ ನಡೆದ ಪ್ರದೇಶದಿಂದ ಸೈನಿಕರ ವಾಪಸಾತಿಗೆ ಎರಡೂ ದೇಶಗಳು ಒಪ್ಪಿಕೊಂಡಿವೆ. ಆದರೆ, ಈಗಿನ ಬೆಳವಣಿಗೆಯಿಂದಾಗಿ ಗಡಿಯಲ್ಲಿ ಅತೀವ ಎಚ್ಚರಿಕೆಯಿಂದಲೇ ಭಾರತ ಇರಬೇಕಾಗುತ್ತದೆ.

ಗಾಲ್ವನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರು ಮತ್ತು ಸೇನಾ ಸಲಕರಣೆಗಳು ಇರುವ ಉಪಗ್ರಹ ಚಿತ್ರಗಳು ಪ್ರಕಟವಾಗಿವೆ. ಚೀನಾದ ಕಡೆಯಲ್ಲಿ ಸೈನಿಕರು ಮತ್ತು ಯುದ್ಧೋಪಕರಣಗಳ ಸಜ್ಜುಗೊಳಿಸುವಿಕೆ ನಿರಂತರವಾಗಿ ನಡೆಯುತ್ತಿದೆ.

ಗಾಲ್ವನ್‌ ಕಣಿವೆಯಲ್ಲಿ ಇದ್ದ ಚೀನಾದ ಸಣ್ಣದೊಂದು ವೀಕ್ಷಣಾ ಗೋಪುರವನ್ನು ಭಾರತೀಯ ಯೋಧರು ಜೂನ್‌ 15ರ ಸಂಘರ್ಷದಲ್ಲಿ ಧ್ವಂಸ ಮಾಡಿದ್ದರು. ಅದು ಈಗ ಮರಳಿ ತಲೆ ಎತ್ತಿದೆ.

ದೆಪ್ಸಾಂಗ್‌ ಪ್ರದೇಶದಲ್ಲಿ ಸಮಸ್ಯೆ ತೀವ್ರಗೊಳ್ಳಬಹುದು ಎಂಬ ಆತಂಕ ಎದುರಾಗಿದೆ. ಇದು ದೌಲತ್‌ ಬೇಗ್‌ ಓಲ್ಡಿ ವಿಮಾನ ನಿಲ್ದಾಣಕ್ಕೆ ಹತ್ತಿರದ ಪ್ರದೇಶ. ಗಡಿಯ ಆಚೆ ಭಾಗದಲ್ಲಿ ಚೀನಾದ ಸೇನೆಯ ಬಲ ದಿನ ದಿನಕ್ಕೂ ಹೆಚ್ಚುತ್ತಲೇ ಇದೆ. ಈ ಎಲ್ಲ ಪ್ರದೇಶಗಳಲ್ಲಿ ಭಾರತದ ಗಸ್ತು ನಿಯಮಿತವಾಗಿ ನಡೆಯುತ್ತಿತ್ತು. ಆದರೆ, ಈ ಮಾರ್ಗಗಳಲ್ಲಿ ಈಗ ಚೀನಾದ ಸೈನಿಕರು ತಡೆ ಒಡ್ಡಿದ್ದಾರೆ.

ಈಗ, ಸಂಘರ್ಷದ ಪ್ರದೇಶದಿಂದ ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವುದಾಗಿ ಹೇಳಿದ ಎರಡೇ ದಿನಕ್ಕೆ ಬೇರೊಂದು ಕಡೆ ಸೈನಿಕರನ್ನು ಜಮಾಯಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

‘ಚೀನಾದ ಈ ನಡೆಯು ಆಶ್ಚರ್ಯ ಏನೂ ಅಲ್ಲ. ಯಾಕೆಂದರೆ, ಗಡಿಯಲ್ಲಿನ ಯಥಾಸ್ಥಿತಿಯನ್ನು ಬದಲಿಸುವ ಯೋಜನೆಯೊಂದಿಗೆ ಅವರು ಬಂದಿದ್ದಾರೆ. ಈಗ, ನಮ್ಮ ನಡುವೆ ಅಪನಂಬಿಕೆ ಸೃಷ್ಟಿಯಾಗಿರುವುದು ಬಹಳ ಸ್ಪಷ್ಟ’ ಎಂದು ಸೇನೆಯ ಮಾಜಿ ಮುಖ್ಯಸ್ಥ ಜ. ದೀಪಕ್‌ ಕಪೂರ್‌ ಹೇಳಿದ್ದಾರೆ. ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಅಪನಂಬಿಕೆಯ ಭಾವ ಇದೆ ಎಂದು ಸೇನೆಯ ಮೂಲಗಳೂ ಹೇಳಿವೆ.

ಮುಂಚೂಣಿ ನೆಲೆಗೆ ನರವಣೆ ಭೇಟಿ

ಸೇನಾ ಮುಖ್ಯಸ್ಥ ಜ. ಎಂ.ಎಂ. ನರವಣೆ ಅವರು ಪೂರ್ವ ಲಡಾಖ್‌ನ ಮುಂಚೂಣಿ ನೆಲೆಗಳಿಗೆ ಬುಧವಾರ ಭೇಟಿ ನೀಡಿ ಸೇನೆಯ ಸನ್ನದ್ಧತೆಯನ್ನು ಪರಿಶೀಲಿಸಿದರು. ಲೇಹ್‌ಗೆ ಎರಡು ದಿನಗಳ ಭೇಟಿ ನೀಡಿರುವ ಅವರು, ಚೀನಾ ಜತೆಗಿನ ಮುಖಾಮುಖಿಯಲ್ಲಿ ದಿಟ್ಟವಾಗಿ ಹೋರಾಡಿದ ಯೋಧರಿಗೆ ಶ್ಲಾಘನಾ ಪತ್ರಗಳನ್ನು ನೀಡಿದರು.

ಸೇನೆಯಉತ್ತರ ವಿಭಾಗದ ಕಮಾಂಡರ್‌ ಲೆ. ಜ. ಯೋಗೇಶ್‌ ಕುಮಾರ್ ಜೋಷಿ, ಲಡಾಖ್‌ ಪ್ರದೇಶದಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಕಾವಲು ಹೊಣೆ ಇರುವ 14 ಕೋರ್‌ನ ಕಮಾಂಡರ್‌ ಲೆ. ಜ. ಹರಿಂದರ್ ಸಿಂಗ್‌ ಅವರು ನರವಣೆ ಜತೆಗಿದ್ದರು.

ರಾಜತಾಂತ್ರಿಕ ಮಾತುಕತೆ

ಪೂರ್ವ ಲಡಾಖ್‌ನ ಸಂಘರ್ಷದ ಸ್ಥಳಗಳಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕು. ಇದು ಗಡಿಯಲ್ಲಿ ಶಾಂತಿ ನೆಲೆಯಾಗಲು ಪೂರಕವಾಗಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಸಂಘರ್ಷದ ಸ್ಥಳಗಳಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ–ಚೀನಾ ಮಂಗಳವಾರ ಒಪ್ಪಿಗೆ ಸೂಚಿಸಿವೆ.

ಜೂನ್‌ 15ರಂದು ನಡೆದ ಹಿಂಸಾತ್ಮಕ ಬಡಿದಾಟದ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ಈ ಮುಖಾಮುಖಿಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾದ ಕಡೆಯಲ್ಲಿಯೂ ಸಾವು ನೋವು ಉಂಟಾಗಿದೆ.

ವಾಸ್ತವ ನಿಯಂತ್ರಣ ರೇಖೆಯಲ್ಲಿನ ಬಿಕ್ಕಟ್ಟು ಶಮನದ ಇನ್ನಷ್ಟು ಸಾಧ್ಯತೆಗಳ ಶೋಧಕ್ಕಾಗಿ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆ ಬುಧವಾರ ನಡೆದಿದೆ.

ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್‌ ಶ್ರೀವಾಸ್ತವ ಮತ್ತು ಚೀನಾ ವಿದೇಶಾಂಗ ವ್ಯವಹಾರಗಳ ಮಹಾ ನಿರ್ದೇಶಕ ವು ಜಿಯಾಂಗೊ ನಡುವೆ ವಿಡಿಯೊ ಕಾನ್ಫರೆನ್ಸ್‌ ನಡೆಯಿತು.

ಈಗ ಇರುವ ಬಿಕ್ಕಟ್ಟನ್ನು ಶಮನ ಮಾಡುವುದಕ್ಕೆ ಸೇನೆ ಮತ್ತು ರಾಜತಾಂತ್ರಿಕ ಮಟ್ಟದ ಸಂಪರ್ಕ ಮುಂದುವರಿಸಲು ಕೂಡ ಎರಡೂ ದೇಶಗಳು ಒಪ್ಪಿವೆ.

ಸೈನಿಕರ ಸಾವು: ಒಪ್ಪಿದ ಚೀನಾ

ಜೂನ್‌ 15ರ ಹೊಡೆದಾಟದಲ್ಲಿ ತಮ್ಮ ಕಡೆಯಲ್ಲಿಯೂ ಸಾವು ನೋವು ಆಗಿದೆ ಎಂಬುದನ್ನು ಚೀನಾ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಚೀನಾದ ಗಡಿ ಮತ್ತು ಜಲ ವ್ಯವಹಾರಗಳ ಉಪ ಮಹಾ ಕಾರ್ಯದರ್ಶಿ ಹಿ ಕ್ಸಿಯಾಂಗ್‌ಕ್ವಿ ಅವರು ಆಯ್ದ ರಾಜತಾಂತ್ರಿಕ ಅಧಿಕಾರಿಗಳ ಗುಂಪಿಗೆ ಈ ಮಾಹಿತಿ ನೀಡಿದ್ದಾರೆ.

ತಮ್ಮ ಕಡೆ ಆಗಿರುವ ಸಾವು ನೋವು ಭಾರಿ ಏನಲ್ಲ. ಸಂಖ್ಯೆಯನ್ನು ಬಹಿರಂಗಪಡಿಸುವುದಿಲ್ಲ. ಹಾಗೆ ಬಹಿರಂಗಪಡಿಸಿದರೆ ಅದು ಶತ್ರುತ್ವದ ಭಾವ ಬೆಳೆಯಲು ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT