ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ– ಚೀನಾ ಕಮಾಂಡರ್‌ ಮಟ್ಟದ ಮಾತುಕತೆ ಫಲಪ್ರದ: ಸೈನಿಕರ ವಾಪಸ್‌ಗೆ ಒಪ್ಪಿಗೆ

Last Updated 23 ಜೂನ್ 2020, 21:18 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನ ಸಂಘರ್ಷದ ಪ್ರದೇಶಗಳಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಗೆ ಸೂಚಿಸಿವೆ. ಸುಮಾರು ಒಂದೂವರೆ ತಿಂಗಳಿಂದ ಎರಡೂ ದೇಶಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿರುವ ವಿವಾದಾತ್ಮಕ ಗಡಿಯಲ್ಲಿ ಶಾಂತಿ ನೆಲೆಸುವಂತೆ ಮಾಡಲು ಈ ಮೂಲಕ ಹೊಸ ಹೆಜ್ಜೆ ಇರಿಸಲಾಗಿದೆ.

ಲೇಹ್‌ನ 14 ಕೋರ್‌ನ ಕಮಾಂಡಿಂಗ್‌ ಅಧಿಕಾರಿ ಲೆ. ಜ. ಹರಿಂದರ್‌ ಸಿಂಗ್‌ ಮತ್ತು ದಕ್ಷಿಣ ಷಿನ್‌ಜಿಯಾಂಗ್‌ ಮಿಲಿಟರಿ ರೀಜನ್‌ನ ಕಮಾಂಡರ್‌ ಮೇ.ಜ. ಲಿಯು ಲಿನ್‌ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ 11.30ಕ್ಕೆ ಆರಂಭವಾದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಮಾತುಕತೆಯು ಸುಮಾರು 11 ತಾಸು ನಡೆದಿತ್ತು.

ಕಮಾಂಡರ್‌ ಮಟ್ಟದ ಮಾತುಕತೆಯಲ್ಲಿ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಚಾರದಲ್ಲಿ ಒಮ್ಮತಕ್ಕೆ ಬರಲಾಗಿದೆ. ಸೈನಿಕರನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆ ಬಗ್ಗೆ ಎರಡೂ ಕಡೆಯವರು ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಸೇನೆಯ ಮೂಲಗಳು ಮಂಗಳವಾರ ತಿಳಿಸಿವೆ.

ಗಾಲ್ವನ್‌ ಕಣಿವೆಯ ವಿವಾದಾತ್ಮಕ ಪ್ರದೇಶಗಳಾದ ಗಸ್ತು ಪಾಯಿಂಟ್‌ 14, 15 ಮತ್ತು 17ಎಯಿಂದ ಚೀನಾ ಸೈನಿಕರು ಸಂಪೂರ್ಣವಾಗಿ ಹಿಂದಕ್ಕೆ ಸರಿಯಬೇಕು; ಚೀನಾವು ಇತ್ತೀಚಗೆ ಭಾರಿ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸಿರುವ ಪಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬುದು ಆರಂಭದಿಂದಲೂ ಭಾರತದ ಬೇಡಿಕೆಯಾಗಿತ್ತು.

ಭದ್ರತಾ ಪರಿಸ್ಥಿತಿ ಪರಿಶೀಲನೆಗೆ ‌ಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅವರು ಲಡಾಖ್‌ಗೆ ಭೇಟಿ ನೀಡಿದ ದಿನವೇ, ಕಮಾಂಡರ್‌ ಮಟ್ಟದ ಮಾತುಕತೆಯು ಫಲಪ್ರದವಾಗಿದೆ. ಚೀನಾದ ಸೈನಿಕರ ಜತೆಗಿನ ಹಿಂಸಾತ್ಮಕ ಬಡಿದಾಟದಲ್ಲಿ ದಿಟ್ಟವಾಗಿ ಹೋರಾಡಿದ ಯೋಧರನ್ನು ನರವಣೆ ಅಭಿನಂದಿಸಿದರು.

ಚೀನಾ ಬಗ್ಗೆ ಅಪನಂಬಿಕೆ

ಸತತ ಮಾತುಕತೆಯ ಬಳಿಕ ಶಾಂತಿ ಸ್ಥಾಪನೆಗೆ ಎರಡೂ ದೇಶಗಳು ಸಹಮತ ಸೂಚಿಸಿವೆ. ಹಾಗಿದ್ದರೂ, ಚೀನಾ ಸೇನೆಯ ಚಾಳಿಯ ಅರಿವಿರುವ ಭಾರತದಲ್ಲಿ ಆ ದೇಶದ ಬಗ್ಗೆ ಅಪನಂಬಿಕೆ ಇದೆ.

ಕಮಾಂಡರ್‌ ಮಟ್ಟದ ಮೊದಲ ಮಾತುಕತೆ ಜೂನ್‌ 6ರಂದು ನಡೆದು, ಸೈನಿಕರ ವಾಪಸಾತಿಗೆ ಒಪ್ಪಿಗೆ ಸೂಚಿಸಲಾಗಿತ್ತು. ಆದರೆ, ಅದನ್ನು ಜಾರಿ ಮಾಡುವ ಹೊತ್ತಿಗೆ, ಚೀನಾ ಸೈನಿಕರು ಒಪ್ಪಂದವನ್ನು ಗಾಳಿಗೆ ತೂರಿ ಬಡಿದಾಟಕ್ಕೆ ಇಳಿದಿದ್ದರು. ಪರಸ್ಪರ ಒಪ್ಪಿತವಾದ ಯೋಜನೆಯಂತೆ ಸಂಘರ್ಷದ ಸ್ಥಳಕ್ಕೆ ಹೋಗಿದ್ದ ಭಾರತದ ಸೈನಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಇದು ಉಭಯ ದೇಶಗಳ ನಡುವೆ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿತ್ತು. ‘ಭಾರತಕ್ಕೆ ಶಾಂತಿ ಬೇಕಿದೆ. ಆದರೆ, ಕೆಣಕಿದರೆ ತಕ್ಕ ಉತ್ತರ ನೀಡುವ ಸಾಮರ್ಥ್ಯವೂ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಎಲ್‌ಎಸಿಯಲ್ಲಿ ಗಸ್ತು ಹೆಚ್ಚಳ

ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಶಾಂತಿ ಸ್ಥಾಪಿಸಲು ಒಪ್ಪಿಕೊಂಡ ತಕ್ಷಣವೇ ಗಸ್ತು ಹೆಚ್ಚಿಸಲು ಕೇಂದ್ರ ಸರ್ಕಾರವು ಕ್ರಮ ತೆಗೆದುಕೊಂಡಿದೆ.

ದೇಶದ ವಿವಿಧೆಡೆ ನಿಯೋಜನೆ ಮಾಡಲಾಗಿದ್ದ ಇಂಡೊ–ಟಿಬೆಟಿಯನ್ ಗಡಿ ಪೊಲೀಸ್ ಪಡೆಯ (ಐಟಿಬಿಪಿ) 40 ಕಂಪನಿಗಳನ್ನು ವಾಪಸ್ ಕರೆಸಿಕೊಂಡು, ಲಡಾಖ್‌ ಮತ್ತು ಅರುಣಾಚಲ ಪ್ರದೇಶದಲ್ಲಿ ಇರುವ ಎಲ್‌ಎಸಿಗೆ ನಿಯೋಜನೆ ಮಾಡಲಾಗಿದೆ.

ಈ 40 ಕಂಪನಿಗಳಲ್ಲಿ ಇರುವ 4,000 ಸಿಬ್ಬಂದಿಯು ಗುಡ್ಡಗಾಡು ಕಾದಾಟದಲ್ಲಿ ಪರಿಣತಿ ಹೊಂದಿದ್ದಾರೆ. ಅತ್ಯಾಧುನಿಕ ಎಸ್‌ಯುವಿಗಳು, ಸ್ನೋಸ್ಕೂಟರ್‌ಗಳು, ಆಲ್‌ಟೆರೇನ್‌ ವೆಹಿಕಲ್‌ಗಳು (ಎಟಿವಿ) ಮತ್ತು ವಿಶಿಷ್ಟ ಸಾಮರ್ಥ್ಯದ ಟ್ರಕ್‌ಗಳನ್ನು ಈ ಕಂಪನಿಗಳು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT