ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೆ ಉಗ್ರರಾಷ್ಟ್ರದ ವಕಾಲತ್ತು ಬೇಕಿಲ್ಲ

ವಿಶ್ವಸಂಸ್ಥೆ: ಕಾಶ್ಮೀರ ಜನರ ಪರ ಜಾಗತಿಕ ಸಮುದಾಯ ಮಾತನಾಡಲಿ ಎಂದ ಪಾಕಿಸ್ತಾನಕ್ಕೆ ಭಾರತದ ತಿರುಗೇಟು
Last Updated 28 ಸೆಪ್ಟೆಂಬರ್ 2019, 19:41 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ, ರಾಯಿಟರ್ಸ್‌, ಎಎಫ್‌ಪಿ):‘ಕಾಶ್ಮೀರದ ವಿಚಾರವು ಸಂಪೂರ್ಣವಾಗಿ ಭಾರತದ ಆಂತರಿಕ ವ್ಯವಹಾರವಾಗಿದೆ. ಬೇರೆ ದೇಶದವರು, ಅದರಲ್ಲೂ ಉಗ್ರರ ಕೈಗಾರಿಕೆಗಳನ್ನು ನಿರ್ಮಿಸಿರುವ ದೇಶವು, ನಮ್ಮ ಪರ ವಕಾಲತ್ತು ವಹಿಸಬೇಕಾಗಿಲ್ಲ’ ಎಂದು ಭಾರತ ಹೇಳಿದೆ.

‘ಕಾಶ್ಮೀರದ ವಿಚಾರದಲ್ಲಿ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು’ ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಅವರು ಮಾಡಿದ ಆಗ್ರಹಕ್ಕೆ ಭಾರತವು ನೀಡಿದ ಪ್ರತಿಕ್ರಿಯೆ ಇದು.

ಇಮ್ರಾನ್‌ ಖಾನ್ ಅವರ ಭಾಷಣದ ನಂತರ, ಅದಕ್ಕೆ ಪ್ರತಿಕ್ರಿಯೆ ನೀಡಲು ದೊರೆತ ಅವಕಾಶವನ್ನು ಭಾರತವು ಬಳಸಿಕೊಂಡಿತು. ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಮಿಷನ್‌ನ ಪ್ರಥಮ ಕಾರ್ಯದರ್ಶಿಯಾಗಿರುವ ವಿದಿಶಾ ಮೈತ್ರಾ ಅವರು ಈ ಪ್ರತಿಕ್ರಿಯೆ ನೀಡಿದರು.

‘ಈ ಮಹೋನ್ನತ ಅಧಿವೇಶನದ ವೇದಿಕೆಯಲ್ಲಿ ಆಡುವ ಪ್ರತಿ ಪದವೂ ಇತಿಹಾಸವಾಗುತ್ತದೆ ಮತ್ತು ಅದಕ್ಕೆ ಅಷ್ಟೇ ಮಹತ್ವವಿದೆ. ಆದರೆ ಇಮ್ರಾನ್ ಖಾನ್‌ ಅವರ ಮಾತುಗಳು ಜಗತ್ತನ್ನು ವಿಭಜಿಸಿದಾಗ ರೂಪುಗೊಳ್ಳುವ ಚಿತ್ರವನ್ನು ಕಟ್ಟಿಕೊಟ್ಟಿವೆ. ನಾವು– ಅವರು, ಸಿರಿವಂತರು– ಬಡವರು, ಉತ್ತರ– ದಕ್ಷಿಣ, ಅಭಿವೃದ್ಧಿ ಹೊಂದಿದ– ಅಭಿವೃದ್ಧಿಶೀಲ, ಮುಸ್ಲಿಮರು– ಇತರರು ಎಂದು ಜಗತ್ತನ್ನು ವಿಭಜಿಸಿ ನೋಡುವಂತಹ ಮಾತುಗಳನ್ನು ಅವರು ವಿಶ್ವಸಂಸ್ಥೆಯ ಈ ವೇದಿಕೆಯಲ್ಲಿ ಆಡಿದ್ದಾರೆ. ಭಿನ್ನತೆಯನ್ನು ಹೆಚ್ಚಿಸುವ ಮತ್ತು ದ್ವೇಷವನ್ನು ಉದ್ದೀಪಿ ಸುವ ಪ್ರಯತ್ನವಿದು. ಇದೆಲ್ಲವನ್ನೂ ನೋಡಿದರೆ, ಇಮ್ರಾನ್‌ ಖಾನ್‌ರದ್ದು ದ್ವೇಷಪೂರಿತ ಭಾಷಣ’ ಎಂದು ವಿದಿಶಾ ಅವರು ತೀಕ್ಷ್ಣವಾಗಿ ಹೇಳಿದರು.

‘ವಿಶ್ವಸಂಸ್ಥೆಯಲ್ಲಿ ಮಾತನಾಡಲು ದೊರೆತ ಅವಕಾಶದ ದುರ್ಬಳಕೆ ಇದು’ ಎಂದು ಅವರು ಟೀಕಿಸಿದರು.

‘ರಾಜತಂತ್ರದಲ್ಲಿ ಪದಬಳಕೆಗೆ ಬಹಳ ಮಹತ್ವವಿದೆ. ‘ನರಮೇಧ’, ‘ರಕ್ತದೋಕುಳಿ’, ‘ಬಂದೂಕನ್ನು ಕೈಗೆತ್ತಿ ಕೊಳ್ಳಿ’, ‘ಜನಾಂಗೀಯ ಮೇಲರಿಮೆ’ ಮತ್ತು ‘ಸಾಯುವವರೆಗೂ ಹೋರಾಡು’ ಎಂಬ ಮಾತುಗಳು ಮಧ್ಯಯುಗದ ಮನಸ್ಥಿತಿಯನ್ನು ಬಿಂಬಿಸುತ್ತವೆಯೇ ಹೊರತು, 21ನೇ ಶತಮಾನದ ಧ್ಯೇಯಗಳನ್ನಲ್ಲ’ ಎಂದು ಅವರು ಹೇಳಿದರು.

‘ಕೊನೆವರೆಗೆ ಹೋರಾಟ’
ಕಾಶ್ಮೀರದ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಬೇಕು ಎಂದು ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರತಿಪಾದಿಸಿದರು.

‘ಕಾಶ್ಮೀರದಲ್ಲಿ ಭಾರತವು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ಅಲ್ಲಿ ನರಮೇಧ ನಡೆಯಲಿದೆ.ಅಲ್ಲಿ ಸೈನಿಕರು ಮನೆಗಳಿಗೆ ನುಗ್ಗಿ, ಅತ್ಯಾಚಾರ ಎಸಗುತ್ತಿದ್ದಾರೆ. ಇವನ್ನೆಲ್ಲಾ ನೋಡಿಕೊಂಡು ಕೂರಲು ಸಾಧ್ಯವೇ? ಬಂದೂಕನ್ನು ಕೈಗೆತ್ತಿಕೊಳ್ಳಲು ಜನರನ್ನು ನೀವೇ ಪ್ರಚೋದಿಸುತ್ತಿದ್ದೀರಿ’ ಎಂದು ಅವರು ಭಾರತದ ವಿರುದ್ಧ ಆರೋಪಿಸಿದರು.

‘ಭಾರತದ ಎದುರು ಶರಣಾಗುವುದಕ್ಕಿಂತ, ಸಾಯುವವರೆಗೆ ಹೋರಾಡುವುದನ್ನೇ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ಅವರು ಹೇಳಿದರು.

ಪಾಕ್‌ ಉತ್ತರಿಸಲಿದೆಯೇ?
ಭಯೋತ್ಪಾದನೆ ಮತ್ತು ದ್ವೇಷವನ್ನು ಉಸಿರಾಡುತ್ತಿರುವ ಪಾಕಿಸ್ತಾನವು ಈಗ ಮಾನವ ಹಕ್ಕುಗಳು ಎಂಬ ದಾಳವನ್ನು ಉರುಳಿಬಿಡುತ್ತಿದೆ. ತಮ್ಮ ನೆಲದಲ್ಲಿ ಭಯೋತ್ಪಾದನೆ ಇಲ್ಲವೇ ಇಲ್ಲ ಎನ್ನುತ್ತಿರುವ ಈ ಪ್ರಶ್ನೆಗಳಿಗೆ ಪಾಕಿಸ್ತಾನವು ಉತ್ತರಿಸಲಿ ಎಂದು ವಿದಿಶಾ ಆಗ್ರಹಿಸಿದರು

*ಉಗ್ರ ಒಸಾಮಾ ಬಿನ್ ಲಾಡೆನ್ ತಮ್ಮ ನೆಲದಲ್ಲಿ ಇರಲಿಲ್ಲ ಎಂದು ಇಮ್ರಾನ್ ಖಾನ್ ಅವರು ನ್ಯೂಯಾರ್ಕ್‌ ಜನತೆ ಎದುರು ಹೇಳುತ್ತಾರೆಯೇ?

*ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯು ಹೆಸರಿಸಿರುವ 130 ಉಗ್ರರು ಮತ್ತು 23 ಭಯೋತ್ಪಾದಕ ಸಂಘಟನೆಗಳು ತಮ್ಮ ನೆಲದಲ್ಲಿವೆ ಎಂಬುದನ್ನು ಪಾಕಿಸ್ತಾನವು ಒಪ್ಪಿಕೊಳ್ಳುತ್ತದೆಯೇ?

*ಪಾಕಿಸ್ತಾನವು, ಉಗ್ರರ ಪಟ್ಟಿಯಲ್ಲಿರುವ ಪ್ರತಿ ವ್ಯಕ್ತಿಗೂ ಪಿಂಚಣಿ ನೀಡುತ್ತಿರುವ ವಿಶ್ವದ ಏಕೈಕ ರಾಷ್ಟ್ರ ಎಂಬುದನ್ನು ನೀವು ಒಪ್ಪಿಕೊಳ್ಳುತ್ತೀರಾ?

*ಪಾಕಿಸ್ತಾನದ ಅತ್ಯುನ್ನತ ಹಣಕಾಸು ಸಂಸ್ಥೆ, ಹಬೀಬ್‌ ಬ್ಯಾಂಕ್‌ನ ನ್ಯೂಯಾರ್ಕ್‌ ಶಾಖೆಯು ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಲಕ್ಷಾಂತರ ಡಾಲರ್ ಮೌಲ್ಯದ ದಂಡ ತೆರಬೇಕಾಯಿತು. ನಂತರ ಬಾಗಿಲು ಮುಚ್ಚಿತು. ಇದೆಲ್ಲಾ ಆಗಿದ್ದು ಏಕೆ?

*ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಪ್ರಮಾಣವು ಶೇ 23ರಿಂದ (1947ರಲ್ಲಿ) ಶೇ 3ಕ್ಕೆ ಕುಸಿದಿದೆ. ಒತ್ತಾಯದ ಮತಾಂತರದ ಮೂಲಕ ಹೀಗೆ ಮಾಡಲಾಗಿದೆ. ಇದಕ್ಕೆಲ್ಲಾ ಪಾಕಿಸ್ತಾನ ವಿವರಣೆ ನೀಡುತ್ತದೆಯೇ?

*ಪಾಕಿಸ್ತಾನವು ಉಗ್ರರನ್ನು ಫೋಷಿಸುವ ಮೂಲಕ ಅಂತರರಾಷ್ಟ್ರೀಯ ಕರಾರುಗಳನ್ನು ಉಲ್ಲಂಘಿಸಿದ್ದಕ್ಕೇ ಅಲ್ಲವೇ,TAFT (ಫೈನಾನ್ಷಿಯಲ್ ಟಾಸ್ಕ್ ಫೋರ್ಸ್) ಪಾಕಿಸ್ತಾನಕ್ಕೆ ಎಚ್ಚರಿಕೆಯ ಸುತ್ತೋಲೆ ಕಳುಹಿಸಿದ್ದು?

‘ಕಾಶ್ಮೀರದಲ್ಲಿನ ಯಥಾಸ್ಥಿತಿಯನ್ನು ಬದಲಿಸುವಂತಹ ಯಾವುದೇ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳಬಾರದು. ಕಾಶ್ಮೀರದ ಸಮಸ್ಯೆ ಬಹಳ ದೀರ್ಘಕಾಲದಿಂದ ಇದೆ. ಭಾರತ ಮತ್ತು ಪಾಕಿಸ್ತಾನಗಳೆರಡೂ ನಮಗೆ ನೆರೆಯ ದೇಶಗಳಾಗಿವೆ. ಈ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ’ ಎಂದು ಚೀನಾ ಹೇಳಿದೆ.


*
ನಮ್ಮಲ್ಲಿನ ಶಾಂತಿಕದಡಲು ನಮ್ಮ ನೆರೆ ರಾಷ್ಟ್ರ ಪ್ರಯತ್ನಿಸುತ್ತಿದೆ. ಅಂತಹ ಸಂದರ್ಭ ಬಂದರೆ, ಕಠಿಣ ನಿರ್ಧಾರ ತೆಗೆದುಕೊಳ್ಳಲೂ ನಾವು ಹೆದರುವುದಿಲ್ಲ
-ರಾಜನಾಥ್ ಸಿಂಗ್, ಭಾರತದ ರಕ್ಷಣಾ ಸಚಿವ

*
ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ಜತೆಗಿನ ನಮ್ಮ ಬಿಕ್ಕಟ್ಟು ಅಣ್ವಸ್ತ್ರ ಯುದ್ಧಕ್ಕೆ ದಾರಿಮಾಡಿಕೊಡಲಿದೆ. ಇಡೀ ಜಗತ್ತು ಇದರ ಪರಿಣಾಮ ಎದುರಿಸಬೇಕಾಗುತ್ತದೆ.
-ಇಮ್ರಾನ್ ಖಾನ್, ಪಾಕಿಸ್ತಾನ ಪ್ರಧಾನಿ

*
ಅಣ್ವಸ್ತ್ರ ದಾಳಿಯ ಬೆದರಿಕೆಯು ಯುದ್ಧಭೂಮಿಯಿಂದ ಓಡಿಹೋಗುವ ಮನಸ್ಥಿತಿಯನ್ನು ತೋರಿಸುತ್ತದೆಯೇ ಹೊರತು, ಅದು ಉತ್ತಮ ಆಡಳಿತಗಾರನ ಲಕ್ಷಣವಲ್ಲ
-ವಿದಿಶಾ ಮೈತ್ರಾ, ಭಾರತದ ಕಾರ್ಯದರ್ಶಿ

*
ಅಣ್ವಸ್ತ್ರ ದಾಳಿಯ ಬೆದರಿಕೆಯು ಯುದ್ಧಭೂಮಿಯಿಂದ ಓಡಿಹೋಗುವ ಮನಸ್ಥಿತಿಯನ್ನು ತೋರಿಸುತ್ತದೆಯೇ ಹೊರತು, ಅದು ಉತ್ತಮ ಆಡಳಿತಗಾರನ ಲಕ್ಷಣವಲ್ಲ
-ವಿದಿಶಾ ಮೈತ್ರಾ, ಭಾರತದ ಕಾರ್ಯದರ್ಶಿ

*
ಕಾಶ್ಮೀರದ ಬಿಕ್ಕಟ್ಟು, ಯುದ್ಧಕ್ಕೆ ದಾರಿಯಾಗುತ್ತದೆಯೋ ಎಂಬುದರ ಬಗ್ಗೆ ನಮಗೆ ಕಳವಳವಿದೆ. ಇದನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕು
-ಸ್ಟೀಫನ್ ಡ್ಯುಜಾರಿಕ್, ವಿಶ್ವಸಂಸ್ಥೆ ವಕ್ತಾರ

*
ಕಾಶ್ಮೀರದ ಸಮಸ್ಯೆಯನ್ನು ಭದ್ರತಾ ಮಂಡಳಿಯ ಮಾರ್ಗಸೂಚಿಯ ಅನ್ವಯ, ದ್ವಿಪಕ್ಷೀಯ ಒಪ್ಪಂದದ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು.
-ವಾಂಗ್‌ ಯಿ, ಚೀನಾ ವಿದೇಶಾಂಗ ಸಚಿವ

*
ಭಾರತದ ಸಾರ್ವಭೌಮತೆ ಗೌರವಿಸಿ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಅಕ್ರಮವಾಗಿ ನಿರ್ಮಿಸುತ್ತಿರುವ ಆರ್ಥಿಕ ಕಾರಿಡಾರ್ ಅನ್ನು ಚೀನಾ ನಿಲ್ಲಿಸಲಿ
-ರವೀಶ್‌ ಕುಮಾರ್, ಭಾರತದ ವಿದೇಶಾಂಗ ಸಚಿವಾಲಯ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT