ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತುಕತೆ ಮೂಲಕವೇ ಚೀನಾ ಗಡಿ ವಿವಾದ ಇತ್ಯರ್ಥ: ಭಾರತ ಸ್ಪಷ್ಟನೆ

ಚೀನಾ ಜತೆ ಬಿಕ್ಕಟ್ಟು: ಟ್ರಂಪ್‌ ಮಧ್ಯಸ್ಥಿಕೆ ತಿರಸ್ಕರಿಸಿದ ಭಾರತ
Last Updated 28 ಮೇ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಗಡಿ ವಿವಾದವನ್ನು ಶಾಂತಿಯುತವಾಗಿಇತ್ಯರ್ಥಗೊಳಿಸಲು ಚೀನಾ ಜತೆ ಮಾತುಕತೆ ನಡೆಯುತ್ತಿದೆ ಎಂದು ಭಾರತ ಸ್ಪಷ್ಟವಾಗಿ ತಿಳಿಸಿದೆ. ‌

ಈ ಮೂಲಕ ಉಭಯ ದೇಶಗಳ ನಡುವೆ ಉಂಟಾಗಿರುವ ಬಿಕ್ಕಟ್ಟು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಸ್ತಾವವನ್ನು ಭಾರತ ನಯವಾಗಿಯೇ ತಿರಸ್ಕರಿಸಿದೆ.‌

‘ಗಡಿ ವಿಷಯವನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸಲು ಚೀನಾ ಜತೆ ಮಾತುಕತೆ ನಡೆಸುತ್ತಿದ್ದೇವೆ. ಗಡಿ ಪ್ರದೇಶದಲ್ಲಿ ಶಾಂತಿ ಕಾಪಾಡಲು ಬದ್ಧರಾಗಿದ್ದೇವೆ. ಈ ವಿಷಯದಲ್ಲಿ ಉಭಯ ದೇಶಗಳ ನಾಯಕರು ಕೈಗೊಳ್ಳುವ ಒಮ್ಮತದ ನಿರ್ಧಾರವನ್ನು ಎರಡೂ ಸೇನಾ ಪಡೆಗಳು ಅನುಷ್ಠಾನಗೊಳಿಸುತ್ತವೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್‌ ಶ್ರೀವಾಸ್ತವ್‌ ಗುರುವಾರ ಆನ್‌ಲೈನ್‌ ಮೂಲಕ ನಡೆದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿದರು.

ಮಧ್ಯಸ್ಥಿಕೆ ವಹಿಸುವ ಕುರಿತು ಭಾರತವನ್ನು ಅಮೆರಿಕ ಸಂಪರ್ಕಿಸಿದೆಯೇ?, ಭಾರತವು ಈ ಬಗ್ಗೆ ಅಮೆರಿಕಕ್ಕೆ ಉತ್ತರ ನೀಡಿದೆಯೇ?, ಲಡಾಕ್‌ನಲ್ಲಿನ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಅಮೆರಿಕಕ್ಕೆ ವಿವರಿಸಲಾಗಿದೆಯೇ ಎನ್ನುವ ಪ್ರಶ್ನೆಗಳಿಗೆ ಅವರು ಉತ್ತರಿಸಲಿಲ್ಲ.‌

‘ಭಾರತದ ಸಾರ್ವಭೌಮತ್ವ ಮತ್ತು ರಾಷ್ಟ್ರೀಯ ಭದ್ರತೆ ಕಾಪಾಡಲು ಸರ್ಕಾರ ಬದ್ಧವಾಗಿದೆ’ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

‘ಗಡಿ ವಿಷಯದಲ್ಲಿ ಭಾರತೀಯ ಪಡೆಗಳು ಜವಾಬ್ದಾರಿಯಿಂದ ವರ್ತಿಸುತ್ತಿವೆ. ಚೀನಾ ಜತೆಗಿನ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಶಿಷ್ಟಾಚಾರಗಳ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪಾಲಿಸುತ್ತಿವೆ‌’ ಎಂದು ತಿಳಿಸಿದರು.

‘ಗಡಿ ಪ್ರದೇಶದಲ್ಲಿ ಉದ್ಭವವಾಗುವ ಬಿಕ್ಕಟ್ಟುಬಗೆಹರಿಸಿಕೊಳ್ಳಲು ಉಭಯ ದೇಶಗಳು ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸಲು ತಮ್ಮದೇ ಆದ ವ್ಯವಸ್ಥೆಯನ್ನು ರೂಪಿಸಿಕೊಂಡಿವೆ. ಈ ವ್ಯವಸ್ಥೆಯ ಮೂಲಕವೇ ಮಾತುಕತೆಗಳು ನಡೆಯುತ್ತವೆ’ ಎಂದು ತಿಳಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT