ಭಾರತದೊಂದಿಗೆ ಮಾತುಕತೆಗೆ ಪಾಕ್‌ ಒಲವು

7

ಭಾರತದೊಂದಿಗೆ ಮಾತುಕತೆಗೆ ಪಾಕ್‌ ಒಲವು

Published:
Updated:

ಇಸ್ಲಾಮಾಬಾದ್‌: ‘ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಭಾರತದೊಂದಿಗೆ ಮಾತುಕತೆ ನಡೆಸಲು ಪಾಕಿಸ್ತಾನ ಉತ್ಸುಕವಾಗಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಡಾ.ಮುಹಮ್ಮದ್‌ ಫೈಸಲ್‌ ಗುರುವಾರ ಇಲ್ಲಿ ಹೇಳಿದ್ದಾರೆ.

‘ನಿಯೋಜಿತ ಪ್ರಧಾನಿ ಇಮ್ರಾನ್‌ಖಾನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಕರೆ ಮಾಡಿ, ಶುಭಾಶಯ ಕೋರಿರುವುದು ಸ್ವಾಗತಾರ್ಹ. 2015ರಿಂದ ಸ್ಥಗಿತಗೊಂಡಿರುವ ದ್ವಿಪಕ್ಷೀಯ ಮಾತುಕತೆಯನ್ನು ಪುನರಾರಂಭಿಸಲು ಪ್ರಧಾನಿ ಮೋದಿ ಅವರ ದೂರವಾಣಿ ಕರೆ ದಾರಿ ಮಾಡಿಕೊಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾರ್ಕ್‌ ಶೃಂಗಸಭೆ ಆತಿಥ್ಯ: ‘2016ರಲ್ಲಿ ಮುಂದೂಡಲಾಗಿದ್ದ ಸಾರ್ಕ್‌ ಶೃಂಗಸಭೆಯ ಆತಿಥ್ಯವನ್ನು ವಹಿಸಿಕೊಳ್ಳಲು ಪಾಕಿಸ್ತಾನ ಸಿದ್ಧವಿದೆ. ಇದರಿಂದ ಪ್ರಾದೇಶಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ’ ಎಂದೂ ಹೇಳಿದರು.

2016ರಲ್ಲಿ ಇಸ್ಲಾಮಾಬಾದ್‌ನಲ್ಲಿ ಸಾರ್ಕ್‌ ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಆದರೆ, ಅದೇ ವರ್ಷ ಸೆಪ್ಟೆಂಬರ್‌ 18ರಂದು ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿರುವ ಸೇನೆಯ ಶಿಬಿರದ ಮೇಲೆ ಉಗ್ರರಿಂದ ಪ್ರಬಲ ದಾಳಿ ನಡೆದ ಕಾರಣ ಸಾರ್ಕ್‌ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಭಾರತ, ಆ ಮೂಲಕ ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೆಚ್ಚಿಸಿತು.

ಭಾರತದ ಈ ನಿಲುವನ್ನು ಬೆಂಬಲಿಸಿದ ಬಾಂಗ್ಲಾದೇಶ, ಭೂತಾನ್‌ ಹಾಗೂ ಅಫ್ಗಾನಿಸ್ತಾನ ಸಹ ಸಾರ್ಕ್‌ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ.

ವಿದೇಶಿ ಗಣ್ಯರಿಗೆ ಆಹ್ವಾನ ಇಲ್ಲ

ಪಾಕಿಸ್ತಾನದ ಪ್ರಧಾನಿ ಹುದ್ದೆಗೇರಲಿರುವ ತೆಹ್ರೀಕ್‌–ಎ–ಇನ್ಸಾಫ್‌ (ಪಿಟಿಐ) ಮುಖಂಡ ಇಮ್ರಾನ್‌ಖಾನ್‌, ಪ್ರಮಾಣ ವಚನ ಸಮಾರಂಭಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸದಿರಲು ನಿರ್ಧರಿಸಿದ್ದಾರೆ.

‘ಪ್ರಮಾಣ ವಚನ ಸಮಾರಂಭವು ಸರಳವಾಗಿರಬೇಕು. ಮಿತವ್ಯಯದಿಂದ ಕೂಡಿರಬೇಕು ಎಂಬುದು ಪಕ್ಷದ ಮುಖ್ಯಸ್ಥರೂ ಆಗಿರುವ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ ಇಚ್ಛೆಯಾಗಿದೆ. ಹೀಗಾಗಿ ಕೆಲವೇ ಜನ ವಿದೇಶಿ ಸ್ನೇಹಿತರನ್ನು ಮಾತ್ರ ಸಮಾರಂಭಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದೆ’ ಎಂದು ಪಕ್ಷದ ವಕ್ತಾರ ಫವಾದ್‌ ಚೌಧರಿ ಹೇಳಿದ್ದಾಗಿ ಡಾನ್‌ ಪತ್ರಿಕೆ ವರದಿ ಮಾಡಿದೆ.

‘ಪ್ರಮಾಣ ವಚನ ಸಮಾರಂಭವು ಐವಾನ್‌–ಎ–ಸದ್ರ್‌ (ಅಧ್ಯಕ್ಷರ ನಿವಾಸ)ದಲ್ಲಿ ನಡೆಯಲಿದ್ದು, ಅಧ್ಯಕ್ಷ ಮಮ್ನೂನ್‌ ಹುಸೇನ್‌ ಪ್ರತಿಜ್ಞಾವಿಧಿ ಬೋಧಿಸುವರು’ ಎಂದೂ ಅವರು ತಿಳಿಸಿದ್ದಾರೆ.

ಪ್ರಮಾಣ ವಚನ ಆಹ್ವಾನ ಸ್ವೀಕರಿಸಿದ ಸಿಧು

ಚಂಡೀಗಡ(ಪಿಟಿಐ):‘ಇಮ್ರಾನ್‌ಖಾನ್‌ ಪಾಕಿಸ್ತಾನದ ಪ್ರಧಾನಿ ಆಗುತ್ತಿರುವುದರಿಂದ ಭಾರತ–ಪಾಕಿಸ್ತಾನ ನಡುವಿನ ಸಂಬಂಧ ಸುಧಾರಿಸಲಿದೆ’ ಎಂದು ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್‌ನ ಸ್ಥಳೀಯ ಸಂಸ್ಥೆಗಳ ಸಚಿವ ನವಜೋತ್‌ ಸಿಂಗ್‌ ಸಿಧು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಇಮ್ರಾನ್‌ಖಾನ್‌ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾನು ಉತ್ಸುಕನಾಗಿದ್ದೇನೆ. ಆದರೆ, ಕೇಂದ್ರ ಸರ್ಕಾರ ಅನುಮತಿ ನೀಡಿದ್ದೇ ಆದಲ್ಲಿ ಸಮಾರಂಭದಲ್ಲಿ ನಾನು ಖಂಡಿತ ಪಾಲ್ಗೊಳ್ಳುವೆ’ ಎಂದು ಹೇಳಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !