ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಪಾಕ್‌ ನಡುವೆ ಅಣ್ವಸ್ತ್ರ ಯುದ್ಧ ನಡೆದರೆ ಜಗತ್ತಿಗೇ ಅಪಾಯ: 12 ಕೋಟಿ ಜನ ಬಲಿ

ಭಾರತ–ಪಾಕ್‌ ಅಣ್ವಸ್ತ್ರ ಯುದ್ಧವಾದರೆ ಏನಾದೀತು ಎಂಬುದನ್ನು ಬಿಚ್ಚಿಟ್ಟ ವರದಿ
Last Updated 5 ಅಕ್ಟೋಬರ್ 2019, 1:11 IST
ಅಕ್ಷರ ಗಾತ್ರ

ನವದೆಹಲಿ:ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಯುದ್ಧ ನಡೆದರೆ, ಎರಡೂ ದೇಶಗಳಲ್ಲಿ 12ಕೋಟಿಗೂ ಹೆಚ್ಚು ಜನ ಮೃತಪಡುತ್ತಾರೆ. ಆದರೆ, ಅದರ ಜತೆಯಲ್ಲೇ ಅಣ್ವಸ್ತ್ರಗಳ ಸ್ಫೋಟದ ದುಷ್ಪರಿಣಾಮಗಳನ್ನು ಇಡೀ ಜಗತ್ತು ಎದುರಿಸಬೇಕಾಗುತ್ತದೆ ಎಂಬ ಆತಂಕವನ್ನು ಅಧ್ಯಯನ ವರದಿಯೊಂದು ವ್ಯಕ್ತಪಡಿಸಿದೆ.

ಕಾಶ್ಮೀರದ ಬಿಕ್ಕಟ್ಟು ಭಾರತದ ಜತೆಗೆ ಅಣ್ವಸ್ತ್ರ ಯುದ್ಧಕ್ಕೆ ಕಾರಣವಾಗುತ್ತದೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬೆದರಿಕೆ ಹಾಕಿದ ಕೆಲವೇ ದಿನಗಳಲ್ಲಿ ಈ ಅಧ್ಯಯನ ವರದಿಯು ‘ಸೈನ್ಸ್‌ ಅಡ್ವಾನ್ಸಸ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಅಮೆರಿಕದ ಐದು ವಿಶ್ವವಿದ್ಯಾಲಯಗಳು ಮತ್ತು ಎರಡು ಖಾಸಗಿ ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಈ ಅಧ್ಯಯನ ನಡೆಸಿವೆ. ಭಾರತ ಮತ್ತು ಪಾಕಿಸ್ತಾನದ ಬಳಿ ಇರುವ ಅಣ್ವಸ್ತ್ರಗಳು, ಅವುಗಳ ಸಾಮರ್ಥ್ಯ ಮತ್ತು ಅವುಗಳ ಬಳಕೆಯ ದುಷ್ಪರಿಣಾಮಗಳೇ ಈ ಅಧ್ಯಯನದ ಕೇಂದ್ರವಸ್ತು.

ಭಾರತ ಮತ್ತು ಪಾಕಿಸ್ತಾನ ತಲಾ 140–150 ಅಣ್ವಸ್ತ್ರಗಳನ್ನು ಹೊಂದಿವೆ. 2025ರಷ್ಟರಲ್ಲಿ ಈ ಸಂಖ್ಯೆ 200–250ರಷ್ಟಕ್ಕೆ ಹೆಚ್ಚಳವಾಗಬಹುದು. ಭಾರತದಲ್ಲಿ ಐದು ಸ್ಥಳಗಳಲ್ಲಿ ಮತ್ತು ಪಾಕಿಸ್ತಾನದಲ್ಲಿ 9 ಸ್ಥಳಗಳಲ್ಲಿ ಅಣ್ವಸ್ತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ. ಉಪಗ್ರಹ ಆಧಾರಿತ ಚಿತ್ರಗಳು ಮತ್ತು ನಕ್ಷೆಗಳಿಂದ ಇವುಗಳನ್ನು ದೃಢಪಡಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತವು ಈವರೆಗೆ,‘ಅಣ್ವಸ್ತ್ರವನ್ನು ಮೊದಲು ಬಳಸುವುದಿಲ್ಲ’ ಎಂಬ ನಿಲುವಿಗೆ ಬದ್ಧವಾಗಿತ್ತು. ಆದರೆ ಆಡಳಿತಾರೂಢ ಬಿಜೆಪಿಯ ಕೆಲವು ನಾಯಕರು ಅಣ್ವಸ್ತ್ರಗಳ ಬಳಕೆಗೆ ಉತ್ಸುಕತೆ ತೋರುತ್ತಿದ್ದಾರೆ. ಭಾರತದ ಈ ನೀತಿಯನ್ನು ಬದಲಿಸುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಸೂಚ್ಯವಾಗಿ ಮಾತನಾಡಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಮತ್ತೆ ಮರಳಲಿದೆ ಹಿಮಯುಗ

ದೇಶಗಳಲ್ಲಿ ಇರುವ ಅಣ್ವಸ್ತ್ರಗಳನ್ನು ಯುದ್ಧದಲ್ಲಿ ಬಳಸಿದರೆ, ಅವುಗಳಿಂದ ಸುಮಾರು 3.6 ಕೋಟಿ ಟನ್‌ಗಳಷ್ಟು ಹೊಗೆ ವಾತಾವರಣಕ್ಕೆ ಬಿಡುಗಡೆಯಾಗಲಿದೆ

ಈ ಹೊಗೆಯು ವಾತಾವರಣದ ಮೇಲ್ಭಾಗದಲ್ಲಿ ಸಂಗ್ರಹವಾಗಲಿದ್ದು, ಕೆಲವೇ ವಾರಗಳಲ್ಲಿ ಇಡೀ ಭೂಮಿಯ ಸುತ್ತ ವ್ಯಾಪಿಸಲಿದೆ. ಸೂರ್ಯನ ಶಾಖಕ್ಕೆ ಹೊಗೆಯ ಪ್ರಮಾಣ ಅಧಿಕವಾಗಲಿದೆ.

ವಾತಾವರಣದಲ್ಲಿ ಹೊಗೆ ಆವರಿಸುವ ಕಾರಣ, ಭೂಮಿಗೆ ಸೂರ್ಯನ ಕಿರಣಗಳು ತಲುಪುವ ಪ್ರಮಾಣ ಕಡಿಮೆಯಾಗುತ್ತದೆ. ಇದರ ಪರಿಣಾವಾಗಿ ಭೂಮಿಯ ಮೇಲಿನ ಉಷ್ಣತೆಯಲ್ಲಿ ಭಾರಿ ಇಳಿಕೆಯಾಗಲಿದೆ

ಹಿಮಯುಗದ ನಂತರ ಭೂಮಿ ಈವರೆಗೆ ಎದುರಿಸದೇ ಇರುವಷ್ಟು ಕಡಿಮೆ ಉಷ್ಣತೆಯ ದಿನಗಳನ್ನು ಈ ಹೊಗೆಯ ಪರಿಣಾಮವಾಗಿ ಈಗ ಎದುರಿಸಬೇಕಾಗುತ್ತದೆ

*ಅಣ್ವಸ್ತ್ರಗಳ ಸಂಗ್ರಹ ಇದ್ದರೆ, ಅವುಗಳ ಬಳಕೆಯ ಅಪಾಯ ಇದ್ದೇ ಇರುತ್ತದೆ. ಅವುಗಳನ್ನು ನಾಶ ಮಾಡುವುದರಿಂದ ಮಾತ್ರ ಈ ಆತಂಕವನ್ನು ದೂರ ಮಾಡಬಹುದು

- ಅಲನ್ ರೊಬೊಕ್, ಅಧ್ಯಯನ ತಂಡದ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT