ವಿದ್ಯಾರ್ಥಿಗಳ ಬಂಧನಕ್ಕೆ ಭಾರತ ಆಕ್ಷೇಪ

7

ವಿದ್ಯಾರ್ಥಿಗಳ ಬಂಧನಕ್ಕೆ ಭಾರತ ಆಕ್ಷೇಪ

Published:
Updated:

ನವದೆಹಲಿ: ಅಮೆರಿಕದ ವಲಸೆ ಅಧಿಕಾರಿಗಳು ಭಾರತೀಯ ವಿದ್ಯಾರ್ಥಿಗಳನ್ನು ಬಂಧಿಸಿರುವುದಕ್ಕೆ ಭಾರತ ಕಳವಳ ವ್ಯಕ್ತಪಡಿಸಿದೆ.

ಅಲ್ಲದೆ, ಬಂಧಿತ ವಿದ್ಯಾರ್ಥಿಗಳಿಗೆ ತಕ್ಷಣ ರಾಜತಾಂತ್ರಿಕ ನೆರವು ಒದಗಿಸಲು ಅವಕಾಶ ನೀಡುವಂತೆಯೂ ಒತ್ತಾಯಿಸಿದೆ. ನಕಲಿ ವಿಶ್ವವಿದ್ಯಾಲಯದಲ್ಲಿ ಹೆಸರು ನೋಂದಾಯಿಸಿಕೊಂಡು ವಲಸೆ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ವಿದ್ಯಾರ್ಥಿಗಳ ಪ್ರಕರಣ ಸಂಬಂಧ ಭಾರತವು, ಅಮೆರಿಕದೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಶೀಘ್ರ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಬೇಕು ಮತ್ತು ಅವರ ಇಚ್ಛೆಗೆ ವಿರುದ್ಧವಾಗಿ ಗಡಿಪಾರು ಮಾಡಬಾರದೆಂದು ಒತ್ತಾಯಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ‘ವಿದ್ಯಾರ್ಥಿಗಳಿಗೆ ರಾಜತಾಂತ್ರಿಕ ನೆರವು ನೀಡಲು ಭಾರತದ ಕಾನ್ಸುಲೇಟ್‌ಗಳು ಅಮೆರಿಕದ ಹಲವು ಬಂಧನ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.

ಈವರೆಗೆ ಸುಮಾರು 30 ಭಾರತೀಯ ವಿದ್ಯಾರ್ಥಿಗಳನ್ನು ಅಧಿಕಾರಿಗಳು ಸಂಪರ್ಕಿಸಿದ್ದಾರೆ. ಉಳಿದವರನ್ನು ಸಂಪರ್ಕಿಸುವ ಪ್ರಯತ್ನ ಮುಂದುವರಿದಿವೆ’ ಎಂದು ಅದು ಹೇಳಿದೆ. ಬಂಧಿತ 130 ವಿದ್ಯಾರ್ಥಿಗಳ ಪೈಕಿ 129 ವಿದ್ಯಾರ್ಥಿಗಳು ಭಾರತೀಯರು. ಇವರು ದೇಶದಲ್ಲಿ ಅಕ್ರಮವಾಗಿ ನೆಲೆಸಲು ನಕಲಿ ವಿಶ್ವವಿದ್ಯಾಲಯವೊಂದರಲ್ಲಿ ನೋಂದಣಿ ಮಾಡಿಸಿದ್ದರು ಎನ್ನುವ ಆರೋಪ ಎದುರಿಸುತ್ತಿದ್ದಾರೆ.

ಸಹಾಯವಾಣಿ: ಬಂಧಿತ ವಿದ್ಯಾರ್ಥಿಗಳ ನೆರವಿಗಾಗಿ ದಿನದ 24 ಗಂಟೆಯ ಸಹಾಯವಾಣಿಯನ್ನು ವಾಷಿಂಗ್ಟನ್‌ನಲ್ಲಿನ ಭಾರತದ ರಾಯಭಾರ ಕಚೇರಿಯಲ್ಲಿ ತೆರೆಯಲಾಗಿದೆ ಎಂದು ಸಚಿವಾಲಯ ಹೇಳಿದೆ.

ಸಹಾಯವಾಣಿ +1-202-322-1190 ಮತ್ತು +1-202-340-2590, ಇಮೇಲ್‌ : cons3.washington@mea.gov.in

ವಿವಿಧ ಸಂಘಟನೆಗಳ ಆಕ್ರೋಶ
ವಾಷಿಂಗ್ಟನ್‌ (ಪಿಟಿಐ):
ಭಾರತೀಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಭಾರತೀಯ– ಅಮೆರಿಕನ್ನರು ಟೀಕಿಸಿದ್ದಾರೆ.

ಅಕ್ರಮವಾಗಿ ವಾಸಿಸುತ್ತಿರುವವರ ಜಾಲವನ್ನು ಪತ್ತೆ ಮಾಡಲು  ಫಾರ್ಮಿಂಗ್ಟನ್‌ ಹಿಲ್ಸ್‌ ಹೆಸರಿನಲ್ಲಿ ನಕಲಿ ವಿಶ್ವವಿದ್ಯಾಲಯವನ್ನು ಗೃಹ ಇಲಾಖೆಯ ತನಿಖಾ ಘಟಕವೇ ಸ್ಥಾಪಿಸಿತ್ತು ಎಂದು ಕೆಲವು ಸಂಘಟನೆಗಳು ಆರೋಪಿಸಿವೆ.

ಈ ವಿಶ್ವವಿದ್ಯಾಲಯದಲ್ಲಿ ತರಗತಿಗಳೇ ನಡೆಯುತ್ತಿರಲಿಲ್ಲ. ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆಯಲಾಗುತ್ತಿತ್ತು ಎಂದು ದೂರಲಾಗಿದೆ. ‘ಅಮಾಯಕ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಅಮೆರಿಕ ಸರ್ಕಾರವೇ ಈ ಸಂಚು ರೂಪಿಸಿದೆ.’ ಎಂದು ಉತ್ತರ ಅಮೆರಿಕದ ತೆಲುಗು ಸಂಘದ ಅಧ್ಯಕ್ಷ ಡಾ. ರಾಘವ್‌ ರೆಡ್ಡಿ ಘೋಷಾಲ್‌ ಆರೋಪಿಸಿದ್ದಾರೆ.  

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !