ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅವರ ಸಾಧನೆ ಭಾರತದ ಹೆಮ್ಮೆ’ ಅಭಿಜಿತ್ ಬ್ಯಾನರ್ಜಿ ಭೇಟಿಯ ನಂತರ ಪ್ರಧಾನಿ ಟ್ವೀಟ್

Last Updated 22 ಅಕ್ಟೋಬರ್ 2019, 7:29 IST
ಅಕ್ಷರ ಗಾತ್ರ

ನವದೆಹಲಿ: ಅರ್ಥಶಾಸ್ತ್ರದ ಸಾಧನೆಗಾಗಿನೊಬೆಲ್ ಪುರಸ್ಕಾರ ಪಡೆದಅಭಿಜಿತ್ ಬ್ಯಾನರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭೇಟಿ ಮಾಡಿ, ಚರ್ಚೆ ನಡೆಸಿದರು. ಆ ಸಂದರ್ಭದ ಫೋಟೊವೊಂದನ್ನು ಪ್ರಧಾನಿ ಟ್ವೀಟ್ ಮಾಡಿ, ‘ಅಭಿಜಿತ್ ಸಾಧನೆಯಿಂದ ಭಾರತಕ್ಕೆ ಹೆಮ್ಮೆಯಾಗಿದೆ’ ಎಂದು ಹೊಗಳಿದ್ದಾರೆ.

ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ಅಭಿಜಿತ್ ಟೀಕಿಸಿದ್ದರು. ಈ ಟೀಕೆಗೆ ಕೇಂದ್ರ ಸಚಿವ ಪೀಯೂಷ್ ಗೋಯಲ್ ಸೇರಿದಂತೆ ಹಲ ಬಿಜೆಪಿ ನಾಯಕರು ಕಟು ಪ್ರತಿಕ್ರಿಯೆ ನೀಡಿದ್ದರು. ಈ ಟೀಕೆ–ಪ್ರತಿಟೀಕೆಗಳ ಗದ್ದಲದಲ್ಲಿ ಮೋದಿ–ಅಭಿಜಿತ್‌ ಭೇಟಿಯಾಗಿರುವುದು ಎಲ್ಲರ ಗಮನ ಸೆಳೆದಿದೆ.

‘ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರ ಭೇಟಿ ಅದ್ಭುತವಾಗಿತ್ತು. ಮಾನವ ಜನಾಂಗವನ್ನು ಸಶಕ್ತಗೊಳಿಸುವ ಅಭಿಜಿತ್ ಅವರ ತುಡಿತ ಅವರ ಮಾತಿನಲ್ಲಿಸ್ಪಷ್ಟವಾಗಿ ಕಾಣುತ್ತಿತ್ತು. ಹಲವು ವಿಷಯಗಳ ಬಗ್ಗೆ ಸುದೀರ್ಘ ಮತ್ತು ಆರೋಗ್ಯಕರ ಚರ್ಚೆ ನಡೆಸಿದೆವು. ಅವರ ಸಾಧನೆ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ. ಭವಿಷ್ಯದ ಸಾಹಸಗಳಿಗೆ ಶುಭವಾಗಲಿ ಎನ್ನುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಎನ್‌ಡಿಟಿವಿಗೆ ನೀಡಿದ್ದ ಸಂದರ್ಶನದಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರೊಡನೆ ಕೆಲಸ ಮಾಡಿದ್ದೆ. ಅದೊಂದು ಅದ್ಭುತ ಅನುಭವ ಎಂದುಅಭಿಜಿತ್ ಬ್ಯಾನರ್ಜಿ ನೆನಪಿಸಿಕೊಂಡಿದ್ದರು.

‘ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆನನ್ನದು ಒಮ್ಮುಖ ಚಿಂತನೆಯಲ್ಲ. ಈ ಹಿಂದೆಯೂ ನಾವು ಅನೇಕ ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಿದ್ದೇವೆ. ಅವುಗಳಲ್ಲಿ ಕೆಲವೆಡೆ ಬಿಜೆಪಿಯೇ ಅಧಿಕಾರದಲ್ಲಿತ್ತು. ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಕೆಲಸ ಮಾಡಿದ್ದೆ. ಅದು ಅದ್ಭುತ ಅನುಭವ ಕೊಟ್ಟಿತ್ತು’ ಎಂದು ಅಭಿಜಿತ್ ಬ್ಯಾನರ್ಜಿ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿನೆನಪಿಸಿಕೊಂಡಿದ್ದರು.

ಭಾರತದಲ್ಲಿ ಹುಟ್ಟಿ ಬೆಳೆದು ಈಗ ಅಮೆರಿಕ ಪ್ರಜೆಯಾಗಿರುವ ಅಭಿಜಿತ್‌ ಬ್ಯಾನರ್ಜಿ (58), ಅವರ ಹೆಂಡತಿ ಎಸ್ತರ್‌ ಡಫ್ಲೊ (46) ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಅವರು ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಇವರು ತೋರಿಸಿಕೊಟ್ಟ ಪ್ರಾಯೋಗಿಕ ಧೋರಣೆಗಾಗಿ ಪ್ರಶಸ್ತಿಯ ಗೌರವ ಸಂದಿದೆ. ಬ್ಯಾನರ್ಜಿ ಮತ್ತು ಡಫ್ಲೊ ಅವರಿಬ್ಬರೂ ಅಮೆರಿಕದ ಮೆಸ್ಸಾಚುಸೆಟ್ಸ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ (ಎಂಐಟಿ) ಪ್ರಾಧ್ಯಾಪಕರು.

ಕೋಲ್ಕತ್ತದಲ್ಲಿ ಜನಿಸಿದ ಅಭಿಜಿತ್‌ ಅವರು ಅಲ್ಲಿನ ವಿಶ್ವವಿದ್ಯಾಲಯ ಅಲ್ಲದೆ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದವರು. 1998ರಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT