ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತ್ತೀಯ ಹೊಣೆಗಾರಿಕೆ; ನಕಾರಾತ್ಮಕ ಮುನ್ನೋಟ

ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡೀಸ್‌ ಅಂದಾಜು
Last Updated 8 ನವೆಂಬರ್ 2019, 20:31 IST
ಅಕ್ಷರ ಗಾತ್ರ

ನವದೆಹಲಿ: ವಿತ್ತೀಯ ಹೊಣೆಗಾರಿಕೆ ನಿಭಾಯಿಸುವ ಭಾರತದ ಸ್ಥಾನಮಾನವು ಮುಂಬರುವ ದಿನಗಳಲ್ಲಿ ಸ್ಥಿರತೆಯಿಂದ ನಕಾರಾತ್ಮಕ ಮಟ್ಟದಲ್ಲಿ ಇರಲಿದೆ ಎಂದು ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸ್‌ ಅಂದಾಜಿಸಿದೆ.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತದ ಆರ್ಥಿಕ ವೃದ್ಧಿ ದರವು ಮುಂಬರುವ ದಿನಗಳಲ್ಲಿಯೂ ಕೆಳಮಟ್ಟದಲ್ಲಿಯೇ ಇರಲಿರುವುದರಿಂದ ಸ್ಥಾನಮಾನ ತಗ್ಗಿಸಲಾಗಿದೆ. ಆರ್ಥಿಕ ಮತ್ತು ಸಾಂಸ್ಥಿಕ ಸವಾಲುಗಳನ್ನು ದೀರ್ಘಾವಧಿಯಲ್ಲಿ ಎದುರಿಸುವಲ್ಲಿ ಸರ್ಕಾರದ ಧೋರಣೆಯ ಮತ್ತು ನೀತಿ ನಿರೂಪಣೆಯ ವೈಫಲ್ಯಗಳ ಫಲಶ್ರುತಿ ಇದಾಗಿದೆ. ಇದರಿಂದಾಗಿ ಈಗಾಗಲೇ ಗರಿಷ್ಠ ಮಟ್ಟದಲ್ಲಿ ಇರುವ ಸರ್ಕಾರಿ ಸಾಲದ ಹೊರೆಯು ಇನ್ನಷ್ಟು ಹೆಚ್ಚಲಿದೆ. ವಿದೇಶಿ ಬಾಂಡ್ ಮೂಲಕ ಸಾಲ ಸಂಗ್ರಹಿಸುವ ಕೇಂದ್ರ ಸರ್ಕಾರದ ಉದ್ದೇಶ ಕಾರ್ಯಗತಗೊಳ್ಳುವುದು ಕಠಿಣವಾಗಲಿದೆ.

ವಿತ್ತೀಯ ಕೊರತೆ ಹೆಚ್ಚಳ: ಪ್ರಸಕ್ತ ಸಾಲಿನ ವಿತ್ತೀಯ ಕೊರತೆಯು ಸರ್ಕಾರದ ಗುರಿಯಾಗಿರುವ ಜಿಡಿಪಿಯ ಶೇ 3.3ರ ಬದಲಿಗೆ ಶೇ 3.7ರಷ್ಟಕ್ಕೆ ಏರಿಕೆಯಾಗಲಿದೆ. ಆರ್ಥಿಕ ಬೆಳವಣಿಗೆಯಲ್ಲಿನ ತೀವ್ರ ಸ್ವರೂಪದ ನಿಧಾನಗತಿ ಮತ್ತು ಕಾರ್ಪೊರೇಟ್‌ ತೆರಿಗೆ ಕಡಿತವು ಸರ್ಕಾರದ ಹಣಕಾಸು ಪರಿಸ್ಥಿತಿಯನ್ನು ಬಿಗಡಾಯಿಸಲಿದೆ ಎಂದು ಮೂಡೀಸ್‌ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ಫೊಸಿಸ್‌, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಸ್ಥಾನಮಾನದ ಮುನ್ನೋಟವನ್ನೂ ಮೂಡೀಸ್‌ ‘ನಕಾರಾರಾತ್ಮಕ’ ಎಂದು ವರ್ಗೀಕರಿಸಿದೆ. ವಿದೇಶಿ ಕರೆನ್ಸಿ ಮತ್ತು ಸ್ಥಳೀಯ ಕರೆನ್ಸಿಯ ದೀರ್ಘಾವಧಿ ರೇಟಿಂಗ್‌ ‘ಬಿಎಎ2’ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಆರ್ಥಿಕ ಪ್ರಗತಿಯಲ್ಲಿನ ಮಂದಗತಿಯು ತೀವ್ರಗೊಳ್ಳುವುದನ್ನು ನಿರ್ಬಂಧಿಸಿವೆ. ಆದರೆ, ಗ್ರಾಮೀಣ ಕುಟುಂಬಗಳಲ್ಲಿನ ಹಣಕಾಸು ಸಂಕಷ್ಟ, ಹೊಸ ಉದ್ಯೋಗ ಸೃಷ್ಟಿ ನಿಧಾನಗೊಂಡಿರುವುದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ (ಎನ್‌ಬಿಎಫ್‌ಸಿ) ನಗದು ಬಿಕ್ಕಟ್ಟು, ಆರ್ಥಿಕತೆಯಲ್ಲಿನ ನಿಧಾನಗತಿಗೆ ಇನ್ನಷ್ಟು ವೇಗ ನೀಡಲಿವೆ. ‘ಎನ್‌ಬಿಎಫ್‌ಸಿ’ ಬಿಕ್ಕಟ್ಟು ಸದ್ಯದಲ್ಲೇ ದೂರವಾಗಲಿದೆ ಎಂದೇನೂ ಮೂಡೀಸ್‌ ಪರಿಗಣಿಸಿಲ್ಲ.

2017ರಲ್ಲಿ ಮೂಡೀಸ್‌, 14 ವರ್ಷಗಳ ಬಳಿಕ ಭಾರತದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯದ ಸ್ಥಾನಮಾನವನ್ನು ಮೇಲ್ದರ್ಜೆಗೇರಿಸಿತ್ತು. ಈಗ ದೇಶಿ ಆರ್ಥಿಕತೆಯ ಕಳಪೆ ಸಾಧನೆ ಪರಿಗಣಿಸಿ ಅದರ ಸ್ಥಾನಮಾನವನ್ನು ತಗ್ಗಿಸಿದೆ.

ಸೂಚ್ಯಂಕ; 330 ಅಂಶ ಕುಸಿತ
ಆರ್ಥಿಕ ವೃದ್ಧಿಗೆ ಸಂಬಂಧಿಸಿದ ಕಳವಳದಿಂದಾಗಿ ಭಾರತದ ಸಾಲ ಮರುಪಾವತಿ ಸಾಮರ್ಥ್ಯವನ್ನು ಮೂಡೀಸ್‌ ತಗ್ಗಿಸಿರುವುದರಿಂದ ಷೇರು‍ಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 330 ಅಂಶಗಳಷ್ಟು ಕುಸಿತ ಕಂಡಿದೆ.

ವರಮಾನ ವೃದ್ಧಿ ಕ್ರಮ ಅಗತ್ಯ: ಡಿಬಿಎಸ್‌
ವಿವೇಕತನದಿಂದ ವೆಚ್ಚ ಮಾಡಿ, ಖಾಸಗೀಕರಣದ ಹೂಡಿಕೆ ಮೂಲಕ ವರಮಾನ ಹೆಚ್ಚಿಸಿಕೊಂಡರೆಭಾರತದ ಆರ್ಥಿಕ ವೃದ್ಧಿ ಮುನ್ನೋಟಕ್ಕೆ ಸಂಬಂಧಿಸಿದ ಚಿಂತೆ ದೂರವಾಗಲಿದೆ ಎಂದು ಸಿಂಗಪುರದ ಡಿಬಿಎಸ್‌ ಬ್ಯಾಂಕ್‌ ಸಲಹೆ ನೀಡಿದೆ.

ಡಾಲರ್‌ ಎದುರು 31 ಪೈಸೆ ಕುಸಿದ
ಅಮೆರಿಕದ ಡಾಲರ್‌ ಎದುರು ರೂಪಾಯಿ ವಿನಿಮಯ ದರವು ಶುಕ್ರವಾರ 31 ಪೈಸೆ ಕುಸಿತ ಕಂಡು ₹ 71.28ಕ್ಕೆ ಇಳಿಯಿತು. ಇದು ಮೂರು ವಾರಗಳ ಹಿಂದಿನ ಮಟ್ಟವಾಗಿದೆ. ಅಕ್ಟೋಬರ್‌ 16ರ ನಂತರದ ಕನಿಷ್ಠ ಮಟ್ಟವೂ ಇದಾಗಿದೆ.

ಆರ್ಥಿಕತೆಯ ತಳಹದಿ ಸುಭದ್ರ
ಮೂಡೀಸ್‌ ರೇಟಿಂಗ್‌ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರವು, ದೇಶಿ ಆರ್ಥಿಕತೆಯ ತಳಹದಿ ಗಟ್ಟಿಯಾಗಿದೆ. ಇತ್ತೀಚೆಗೆ ಸರಣಿಯೋಪಾದಿಯಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳಿಂದ ಬಂಡವಾಳ ಹೂಡಿಕೆಗೆ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT