ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಲ್ವನ್ ಕಣಿವೆಯ ಸಾರ್ವಭೌಮತೆ: ಚೀನಾ ಪ್ರತಿಪಾದನೆ ತಿರಸ್ಕರಿಸಿದ ಭಾರತ

Last Updated 20 ಜೂನ್ 2020, 15:23 IST
ಅಕ್ಷರ ಗಾತ್ರ

ನವದೆಹಲಿ: ಲಡಾಖ್‌ನ ಗಾಲ್ವನ್ ಕಣಿವೆಯ ಸಾರ್ವಭೌಮತೆಗೆ ಸಂಬಂಧಿಸಿ ಚೀನಾ ಮಾಡಿರುವ ಪ್ರತಿಪಾದನೆಯನ್ನು ಭಾರತ ಪ್ರಬಲವಾಗಿ ತಳ್ಳಿಹಾಕಿದೆ. ಚೀನಾದ ಹೇಳಿಕೆ ಉತ್ಪ್ರೇಕ್ಷೆಯಿಂದ ಕೂಡಿದ್ದು ಮತ್ತು ಅದನ್ನು ಒಪ್ಪಲಾಗದು ಎಂದು ಹೇಳಿದೆ.

’ಚೀನಾದ ಪ್ರತಿಪಾದನೆಯನ್ನು ಒಪ್ಪಲಾಗದು. ಆ ದೇಶವು ತನ್ನದೇ ಆದ ಹಿಂದಿನ ನಿಲುವಿಗೇ ಬದ್ಧವಾಗಿಲ್ಲ. ಚೀನಾ ಕಡೆಯಿಂದಾದ ಪ್ರಚೋದನೆಗೆ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ’ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.

‘ಗಾಲ್ವನ್ ಕಣಿವೆಗೆ ಸಂಬಂಧಿಸಿದ ಚಿತ್ರಣ ಐತಿಹಾಸಿಕವಾಗಿಯೂ ಸ್ಪಷ್ಟವಾಗಿದೆ. ವಾಸ್ತವ ಗಡಿ ರೇಖೆಗೆ (ಎಲ್‌ಎಸಿ) ಸಂಬಂಧಿಸಿ ಚೀನಾದ ಉತ್ಪ್ರೇಕ್ಷೆಯಿಂದ ಕೂಡಿದ ಮಾತುಗಳು ಮತ್ತು ಭೂಪ್ರದೇಶದ ಮೇಲಿನ ಹಕ್ಕುಮಂಡನೆಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಶ್ರೀವಾಸ್ತವ ಹೇಳಿದ್ದಾರೆ.

ಚೀನಾ ಹೇಳಿಕೆಗೆ ಸಂಬಂಧಿಸಿ ಕೇಳಲಾದ ಪ್ರಶ್ನೆಯೊಂದಕ್ಕೆ ಅವರು ಈ ರೀತಿ ಉತ್ತರಿಸಿದ್ದಾರೆ.

ಗಾಲ್ವನ್ ಕಣಿವೆ ಪ್ರದೇಶದಲ್ಲಿ ಸೋಮವಾರ ರಾತ್ರಿ ಭಾರತ–ಚೀನಾ ಸೇನಾಪಡೆಗಳ ನಡುವೆ ನಡೆದಿದ್ದ ಸಂಘರ್ಷದಲ್ಲಿ ಭಾರತದ ಒಬ್ಬ ಸೇನಾಧಿಕಾರಿ ಸೇರಿ 20 ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಗಾಲ್ವನ್ ಕಣಿವೆ ಮೇಲಿನ ಸಾರ್ವಭೌಮತೆಯನ್ನು ಚೀನಾ ಪ್ರತಿಪಾದಿಸಿತ್ತು. ಗಾಲ್ವನ್ ಕಣಿವೆ ವಿಷಯವಾಗಿ ನಾವು ಸೇನೆ ಹಾಗೂ ರಾಜತಾಂತ್ರಿಕ ಮಾರ್ಗದಲ್ಲಿ ಮಾತುಕತೆ ನಡೆಸುತ್ತಿದ್ದೇವೆ. ಘಟನೆ ನಡೆದಿರುವುದು ಚೀನಾಕ್ಕೆ ಸೇರಿದ ಜಾಗದಲ್ಲಿ. ಇದಕ್ಕಾಗಿ ಚೀನಾವನ್ನು ದೂಷಿಸಬೇಕಾಗಿಲ್ಲ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೊ ಲಿಜಿಯಾನ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT