ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಸುಳುಕೋರರಿಗೆ ತಕ್ಕ ಪ್ರತ್ಯುತ್ತರ: ರಾಜನಾಥ್ ಸಿಂಗ್

ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ಎಚ್ಚರಿಕೆ
Last Updated 21 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಲೇಹ್‌: ‘ಪಾಕಿಸ್ತಾನ ನಡೆ ಸುತ್ತಿರುವ ‘ಒಳನುಸುಳುವಿಕೆ’ಗೆ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. ಈ ಕೃತ್ಯವನ್ನು ಪಾಕಿಸ್ತಾನ ನಿಲ್ಲಿಸದಿದ್ದರೆ ಮುಂದೆಯೂ ತಕ್ಕ ಉತ್ತರವನ್ನು ಭಾರತೀಯ ಸೇನೆ ನೀಡಲಿದೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೋಮವಾರ ಹೇಳಿದರು.

ಇಲ್ಲಿನ ದುರ್ಬುಕ್‌– ದೌಲತ್‌ಬೇಗ್‌ ಓಲ್ಡಿ ಮಧ್ಯೆ ಬಾರ್ಡರ್‌ ರೋಡ್‌ ಆರ್ಗನೈಜೇಶನ್‌ನವರು (ಬಿಆರ್‌ಒ) ನಿರ್ಮಿಸಿರುವ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಾವೇ ಮೊದಲಾಗಿ ಯಾವತ್ತೂ ಪಾಕಿಸ್ತಾನದ ಮೇಲೆ ದಾಳಿ ಮಾಡಿಲ್ಲ. ಆದರೆ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾ ಭಾರತವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ನಮ್ಮ ನೆರೆರಾಷ್ಟ್ರ ಮಾಡುತ್ತಲೇ ಇದೆ. ಇಂಥ ಪ್ರಯತ್ನಗಳಿಗೆ ನಮ್ಮ ಸಶಸ್ತ್ರ ಸೇನೆ ತಕ್ಕ ಉತ್ತರ ನೀಡುತ್ತಿದೆ’ ಎಂದರು.

ಗ್ರಹಿಕೆಯ ಭಿನ್ನಾಭಿಪ್ರಾಯ: ‘ಭಾರತ– ಚೀನಾ ನಡುವೆ ಒಳ್ಳೆಯ ಬಾಂಧವ್ಯ ಇದೆ. ಗಡಿ ವಿಚಾರದಲ್ಲಿ ಎರಡು ರಾಷ್ಟ್ರಗಳ ಮಧ್ಯೆ ಗ್ರಹಿಕೆಯ ಭಿನ್ನಾಭಿಪ್ರಾಯಗಳಿದ್ದು, ಇದನ್ನು ಅತ್ಯಂತ ಪ್ರಬುದ್ಧವಾಗಿ ನಿರ್ವ ಹಿಸಲಾಗುತ್ತಿದೆ. ಈ ಕುರಿತ ಭಿನ್ನಾ ಭಿಪ್ರಾಯ ಉಲ್ಬಣಗೊಳ್ಳದಂತೆ ಮತ್ತು ಕೈಮೀರಿ ಹೋಗದಂತೆ ಎರಡೂ ರಾಷ್ಟ್ರ ಗಳು ನೋಡಿಕೊಂಡಿವೆ’ ಎಂದರು.

‘ಪಾಕ್‌ನೊಳಕ್ಕೆ ನುಗ್ಗಲು ಹಿಂಜರಿಕೆ ಇಲ್ಲ’

ಶ್ರೀನಗರ: ‘ಭಾರತವನ್ನು ಗುರಿಯಾಗಿಟ್ಟು ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದನ್ನು ಪಾಕಿಸ್ತಾನವು ನಿಲ್ಲಿಸದಿದ್ದರೆ ಸೇನೆಯು ಆ ದೇಶದೊಳಕ್ಕೆ ನುಗ್ಗಿ ಉಗ್ರರ ಶಿಬಿರಗಳನ್ನು ನಾಶಪಡಿಸಲಿದೆ’ ಎಂದು ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಸೋಮವಾರ ಹೇಳಿದರು.

ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪಾಕಿಸ್ತಾನವು ಉಗ್ರರ ಶಿಬಿರಗಳನ್ನು ಮುಚ್ಚದಿದ್ದರೆ ನಾವು ಒಳ ನುಗ್ಗಿ ಅವುಗಳನ್ನು ನಾಶಪಡಿಸುವುದು ಅನಿವಾರ್ಯವಾಗುತ್ತದೆ’ ಎಂದರು.

ಕಾಶ್ಮೀರದೊಳಗಿರುವ ಕಿಡಿಗೇಡಿಗಳಿಗೂ ಎಚ್ಚರಿಕೆ ನೀಡಿದ ಮಲಿಕ್‌, ‘ಕೆಲವು ಯುವಕರು ಜಮ್ಮು–ಕಾಶ್ಮೀರವು ಸಹಜ ಸ್ಥಿತಿಗೆ ಬರುವುದನ್ನು ತಡೆಯುತ್ತಿದ್ದಾರೆ. ಇಂಥ ಚಟುವಟಿಕೆಗಳಿಂದ ಅವರಿಗೇನೂ ಲಾಭವಾಗದು. ನವೆಂಬರ್‌ 1ರಿಂದ ಹೊಸ ಕಾಶ್ಮೀರದ ಉದಯವಾಗಲಿದೆ. ಇಲ್ಲಿನ ಜನರು ತಮ್ಮ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕು’ ಎಂದರು.

ಜಮ್ಮು–ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ರುವ ಕೇಂದ್ರ ಸರ್ಕಾರದ ಕ್ರಮವು ಅಕ್ಟೋಬರ್‌ 31ರಿಂದ ಜಾರಿಗೆ ಬರಲಿದೆ.

ಅಂಚೆ ಸೇವೆ ಸ್ಥಗಿತಕ್ಕೆ ಆಕ್ಷೇಪ

ಭಾರತ– ಪಾಕಿಸ್ತಾನ ನಡುವಿನ ಅಂಚೆ ಸೇವಾ ವ್ಯವಸ್ಥೆಯನ್ನು ಏಕಪಕ್ಷೀಯವಾಗಿ ರದ್ದು ಮಾಡಿದ ಪಾಕಿಸ್ತಾನದ ಕ್ರಮವನ್ನು ಕೇಂದ್ರದ ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಸೋಮವಾರ ಖಂಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು,‘ಪಾಕಿಸ್ತಾನವು ಯಾವುದೇ ಸೂಚನೆ ನೀಡದೆ, ಭಾರತಕ್ಕೆ ಅಂಚೆ ಸೇವೆಯನ್ನು ಸ್ಥಗಿತಗೊಳಿಸಿದೆ. ಇದು ಅಂಚೆಸೇವೆಯನ್ನು ಕುರಿತ ಅಂತರರಾಷ್ಟ್ರೀಯ ನಿಯಮಗಳಿಗೆ ವಿರುದ್ಧ’ ಎಂದಿದ್ದಾರೆ.

ಸಿಯಾಚಿನ್‌ ‘ಸವಿಯಲು’ ಪ್ರವಾಸಿಗರಿಗೆ ಅವಕಾಶ

ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ‘ಸಿಯಾಚಿನ್‌’ ಅನ್ನು ಪ್ರವಾಸಿಗರಿಗೆ ಮುಕ್ತಗೊಳಿಸುವುದಾಗಿ ಸರ್ಕಾರ ಘೋಷಿಸಿದೆ.

‘ಸಿಯಾಚಿನ್‌ ತಳ ಶಿಬಿರದಿಂದ ಕುಮಾರ್‌ಪೋಸ್ಟ್‌ ವರೆಗಿನ ಇಡೀ ಪ್ರದೇಶವನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಇಂಥ ಕಠಿಣ, ಪ್ರತಿಕೂಲ ಹವಾಮಾನದ ಪ್ರದೇಶದಲ್ಲೂ ನಮ್ಮ ಯೋಧರು ಮತ್ತು ಎಂಜಿನಿಯರ್‌ಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಸರ್ಕಾರ ಈ ತೀರ್ಮಾನ ಕೈಗೊಂಡಿದೆ’ ಎಂದು ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಇಲ್ಲಿಗೆ ಭೇಟಿ ನೀಡಲು ಬಯಸುವವರು ಸೇನೆಯ ಪರವಾನಗಿ ಪಡೆಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT