ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಹೈಕಮಿಷನ್ ಕಚೇರಿ ಜಮ್ಮು–ಕಾಶ್ಮೀರ ಯುವಕರಿಗೆ ವೀಸಾ ನೀಡೋದ್ಯಾಕೆ?

ಬಯಲಾದ ಪಾಕಿಸ್ತಾನದ ಕುತಂತ್ರ: ಭಾರತ ತಿರುಗೇಟು
ಅಕ್ಷರ ಗಾತ್ರ

ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯಿಂದ ವೀಸಾ ಪಡೆದು ಆ ದೇಶಕ್ಕೆ ತೆರಳಿದ್ದ, ಜಮ್ಮು-ಕಾಶ್ಮೀರದ ಕನಿಷ್ಠ 218 ಯುವಕರು ಈವರೆಗೂ ದೇಶಕ್ಕೆ ವಾಪಸಾದ ಮಾಹಿತಿ ಇಲ್ಲ. 2017ರಿಂದಲೂ ಇವರ ಜಾಡು ಪತ್ತೆ ಮಾಡುವುದು ಸಾಧ್ಯವಾಗಿಲ್ಲ. ಈ ಯುವಕರು ಭಯೋತ್ಪಾದಕ ಸಂಘಟನೆಗಳಿಗೆ ಸೇರಿಕೊಂಡಿರುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿಡೆಕ್ಕನ್ ಹೆರಾಲ್ಡ್ವರದಿ ಮಾಡಿದೆ.

ವೀಸಾ ಮೂಲಕ ಪಾಕಿಸ್ತಾನಕ್ಕೆ ತೆರಳುವ ಜಮ್ಮು-ಕಾಶ್ಮೀರದ ಯುವಕರು ಭಾರತಕ್ಕೆ ವಾಪಸ್ ಆಗದಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಇದರ ಬೆನ್ನಲ್ಲೇ ದೆಹಲಿಯಲ್ಲಿರುವ ಹೈಕಮಿಷನ್ ಕಚೇರಿಯ ಸಿಬ್ಬಂದಿಯನ್ನು ಅರ್ಧದಷ್ಟು ಕಡಿತ ಮಾಡುವಂತೆ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಸೂಚಿಸಿದೆ. ದೆಹಲಿಯಲ್ಲಿರುವ ತನ್ನ ಹೈಕಮಿಷನ್ ಕಚೇರಿಯನ್ನು ಪಾಕಿಸ್ತಾನವು ಬೇಹುಗಾರಿಕೆ ಜಾಲಗಳನ್ನು ನಿರ್ವಹಿಸಲು ಮಾತ್ರವಲ್ಲದೆ ಭಯೋತ್ಪಾದಕ ಸಂಘಟನೆಗಳಿಗೆ ಯುವಕರನ್ನು ನೇಮಕ ಮಾಡಿಕೊಳ್ಳಲೂ ಬಳಸಿಕೊಳ್ಳುತ್ತಿದೆ ಎಂಬುದು ಗುಪ್ತಚರ ಸಂಸ್ಥೆಗಳ ತನಿಖೆಯಿಂದ ತಿಳಿದುಬಂದಿದೆ ಎಂದೂ ಮೂಲಗಳು ತಿಳಿಸಿವೆ.

2017ರ ಬಳಿಕ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯು ಜಮ್ಮು-ಕಾಶ್ಮೀರದ 399 ಯುವಕರಿಗೆ ವೀಸಾ ನೀಡಿದೆ. ಹೀಗೆ ಪಾಕಿಸ್ತಾನಕ್ಕೆ ತೆರಳಿದವರ ಪೈಕಿ 218 ಮಂದಿ ಭಾರತಕ್ಕೆ ವಾಪಸ್ ಆಗಿಲ್ಲ. ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿಯೂ ಇಲ್ಲ ಎಂದು ಮೂಲಗಳು ತಿಳಿಸಿವೆ.

ಮಾರ್ಚ್ 31 ಮತ್ತು ಏಪ್ರಿಲ್ 1ರಂದು ರಾತ್ರಿ ಜಮ್ಮು-ಕಾಶ್ಮೀರದ ಕೇರನ್ ವಲಯದಲ್ಲಿ ಅಂತರರಾಷ್ಟ್ರೀಯ ಗಡಿ ನುಸುಳಿ ಭಾರತದೊಳಕ್ಕೆ ಪ್ರವೇಶಿಸಿದ್ದ ಮೂವರು ಲಷ್ಕರ್-ಎ-ತೊಯ್ಬಾ ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಈ ಉಗ್ರರ ಗುರುತು ಪತ್ತೆಯಾದಾಗ ಇವರು ಜಮ್ಮು-ಕಾಶ್ಮೀರ ನಿವಾಸಿಗಳು ಎಂಬುದು ತಿಳಿದು ಬಂದಿತ್ತು. ಆದಿಲ್ ಹುಸೇನ್ ಮಿರ್, ಉಮರ್ ನಾಸಿರ್ ಖಾನ್ ಮತ್ತು ಸಜ್ಜದ್ ಅಹ್ಮದ್ ಹುರಾ ಹೆಸರಿನ ಉಗ್ರರು 2018ರ ಏಪ್ರಿಲ್‌ನಲ್ಲಿ ಪಾಕ್ ಹೈಕಮಿಷನ್ ನೀಡಿದ ವೀಸಾದೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದರು.

ಮುಂದಿನ ಏಳು ದಿನಗಳೊಳಗಾಗಿ ಹೈಕಮಿಷನ್ ಕಚೇರಿ ಸಿಬ್ಬಂದಿಯನ್ನು ಅರ್ಧದಷ್ಟು ಕಡಿತ ಮಾಡುವಂತೆ ಮಂಗಳವಾರ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಸೂಚಿಸಿತ್ತು. ಭಾರತದ ವಿರುದ್ಧ ಬೇಹುಗಾರಿಕೆ ನಡೆಸುವುದು ಮತ್ತು ಭಯೋತ್ಪಾದಕ ಸಂಘಟನೆಗಳೊಂದಿಗೆ ಹೈಕಮಿಷನ್ ಕಚೇರಿ ಅಧಿಕಾರಿಗಳು ನಂಟು ಹೊಂದಿರುವುದು ಇದಕ್ಕೆ ಕಾರಣ ಎಂದು ಕೇಂದ್ರ ಹೇಳಿತ್ತು.

ಭಾರತದ ವಿರುದ್ಧ ‘ಪ್ರಾಕ್ಸಿ ವಾರ್ (ಛಾಯಾ ಸಮರ)’ ನಡೆಸಲು ಪಾಕಿಸ್ತಾನವು ಜಮ್ಮು-ಕಾಶ್ಮೀರದ ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ. ದೆಹಲಿಯಲ್ಲಿರುವ ಹೈಕಮಿಷನ್ ಕಚೇರಿ ಮೂಲಕ ವೀಸಾ ನೀಡಿ ಯುವಕರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ. ಅಲ್ಲಿ ತರಬೇತಿ ನೀಡಿ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಗೆ ಸೇರ್ಪಡೆಗೊಳಿಸಿ ಭಾರತದಲ್ಲಿ ದಾಳಿ ನಡೆಸಲು ವಾಪಸ್ ಕಳುಹಿಸಿಕೊಡಲಾಗಿದೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ.

ಭಾರತದ ವಿರುದ್ಧ ದಾಳಿ ನಡೆಸಲು ಪಾಕಿಸ್ತಾನವು ಜಮ್ಮು-ಕಾಶ್ಮೀರದ ಯುವಕರನ್ನೇ ಬಳಸಿಕೊಳ್ಳಲು ಬಯಸುತ್ತಿದೆ. ಒಂದು ವೇಳೆ ಅವರು ಸಿಕ್ಕಿಬಿದ್ದಲ್ಲಿ ಅಥವಾ ಹತ್ಯೆಯಾದಲ್ಲಿ ಗುರುತುಪತ್ತೆ ಮಾಡುವಾಗ ಅವರು ಜಮ್ಮು ಕಾಶ್ಮೀರದವರೆಂಬುದು ಸಾಬೀತಾಗುತ್ತದೆ. ಜಮ್ಮು-ಕಾಶ್ಮೀರದ ಯುವಕರೇ ದಾಳಿ ನಡೆಸುತ್ತಿರುವುದರಿಂದ ಭಾರತವು ಆ ಪ್ರದೇಶದ ಜನರಿಂದ ವಿರೋಧವನ್ನು ಎದುರಿಸುತ್ತಿದೆ ಎಂದು ಬಿಂಬಿಸುವುದು ಪಾಕಿಸ್ತಾನದ ಸಂಚು ಎಂದು ಮೂಲಗಳು ಹೇಳಿವೆ.

ಭಾರತದ ವಿರುದ್ಧ ಬೇಹುಗಾರಿಕೆ ನಡೆಸುವ ವೇಳೆ ಐಎಸ್‌ಐ ಏಜೆಂಟ್‌ಗಳಿಬ್ಬರು ದೆಹಲಿಯಲ್ಲಿ ಇತ್ತೀಚೆಗೆ ಸಿಕ್ಕಿಬಿದ್ದಿದ್ದರು. ಅವರು ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ರಾಜತಾಂತ್ರಿಕ ಅಧಿಕಾರಿಗಳಾಗಿರುವುದು ಬಳಿಕ ತಿಳಿದುಬಂದಿತ್ತು. ಅವರಿಬ್ಬರನ್ನು ತಕ್ಷಣವೇ ಕೇಂದ್ರ ಸರ್ಕಾರ ಉಚ್ಚಾಟನೆ ಮಾಡಿತ್ತು. ಅವರು ಜೂನ್ 1ರಂದು ಪಾಕಿಸ್ತಾನಕ್ಕೆ ಮರಳಿದ್ದರು.

ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಜೂನ್ 15ರಂದು ಅಲ್ಲಿ ಬಂಧಿಸಲಾಗಿತ್ತು. ರಸ್ತೆ ಅಪಘಾತದಲ್ಲಿ ಪಾದಚಾರಿಗಳಿಗೆ ನೋವುಂಟುಮಾಡಿದ್ದು ಮತ್ತು ನಕಲಿ ಕರೆನ್ಸಿ ಹೊಂದಿದ್ದ ಆರೋಪವನ್ನು ಅಧಿಕಾರಿಗಳ ಮೇಲೆ ಹೊರಿಸಲಾಗಿತ್ತು. ಸುಮಾರು 10 ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡು ನಂತರ ಅವರನ್ನು ಬಿಡುಗಡೆ ಮಾಡಲಾಗಿತ್ತು. ಈ ವಿಚಾರವಾಗಿ, ಪಾಕಿಸ್ತಾನವು 1961ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತ ಆರೋಪಿಸಿತ್ತು. ಬಳಿಕ ಆ ರಾಜತಾಂತ್ರಿಕ ಅಧಿಕಾರಿಗಳು ಭಾರತಕ್ಕೆ ವಾಪಸಾಗಿದ್ದಾರೆ.

ಈ ಘಟನೆಯ ಬಳಿಕ, ದೆಹಲಿಯಲ್ಲಿರುವ ಹೈಕಮಿಷನ್ ಕಚೇರಿ ಸಿಬ್ಬಂದಿಯನ್ನು ಅರ್ಧದಷ್ಟು ಕಡಿತ ಮಾಡುವಂತೆ ಪಾಕಿಸ್ತಾನಕ್ಕೆ ಸೂಚಿಸಿರುವ ಕೇಂದ್ರ ಸರ್ಕಾರ, ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯ ಸಿಬ್ಬಂದಿ ಸಂಖ್ಯೆಯನ್ನೂ ಇದೇ ಪ್ರಮಾಣದಲ್ಲಿ ಕಡಿತ ಮಾಡುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT