ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಯಥಾಸ್ಥಿತಿ ಬದಲಾಯಿಸಲು ಯತ್ನಿಸಬೇಡಿ: ಚೀನಾಕ್ಕೆ ಭಾರತ ಎಚ್ಚರಿಕೆ

Last Updated 27 ಜೂನ್ 2020, 5:48 IST
ಅಕ್ಷರ ಗಾತ್ರ

ನವದೆಹಲಿ: ನೈಜ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಯಥಾಸ್ಥಿತಿ ಬದಲಾಯಿಸಲು ಯತ್ನಿಸಬಾರದು. ಇಂಥ ನಡೆಗಳಿಂದ ಗಡಿಯಲ್ಲಿ ಶಾಂತಿಗೆ ಭಂಗವಾಗುವುದರ ಜತೆಗೆ ದ್ವಿಪಕ್ಷೀಯ ಬಾಂಧವ್ಯದ ಮೇಲೂ ಪರಿಣಾಮವಾಗುತ್ತದೆ ಎಂದು ಭಾರತವು ಚೀನಾಕ್ಕೆ ಎಚ್ಚರಿಕೆ ನೀಡಿದೆ. ಪೂರ್ವ ಲಡಾಖ್‌ ಪ್ರದೇಶದಲ್ಲಿ ಸೇನಾ ಚಟುವಟಿಕೆ ನಿಲ್ಲಿಸುವಂತೆಯೂ ಚೀನಾವನ್ನು ಆಗ್ರಹಿಸಿದೆ.

‘ಬಲವಂತದ ಮೂಲಕ ಎಲ್‌ಎಸಿಯಲ್ಲಿ ಯಥಾಸ್ಥಿತಿಯನ್ನು ಮಾರ್ಪಾಡುಗೊಳಿಸಲು ಯತ್ನಿಸುವುದು ಸರಿಯಾದ ಹಾದಿಯಲ್ಲ. ಇದನ್ನು ಚೀನಾ ಅರ್ಥ ಮಾಡಿಕೊಳ್ಳುವುದೊಂದೇ ಪೂರ್ವ ಲಡಾಖ್‌ನ ಗಡಿಯಲ್ಲಿನ ಮುಖಾಮುಖಿ ಪರಿಹರಿಸಲು ಇರುವ ಮಾರ್ಗ’ ಎಂದು ಚೀನಾಗೆ ಭಾರತದ ರಾಯಭಾರಿಯಾಗಿರುವ ವಿಕ್ರಂ ಮಿಸ್ರಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಚೀನಾ ಪಡೆಗಳು ಗಡಿಯಲ್ಲಿ ನಡೆಸಿದ ಕೃತ್ಯ ದ್ವಿಪಕ್ಷೀಯ ಬಾಂಧವ್ಯದ ಮೇಲಿನ ನಂಬಿಕೆಗೆ ಘಾಸಿ ಮಾಡಿದೆ. ದ್ವಿಪಕ್ಷೀಯ ಸಂಬಂಧವನ್ನು ಜತನದಿಂದ ಕಾಪಾಡಿಕೊಳ್ಳುವುದು ಮತ್ತು ಅದು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ನೋಡಿಕೊಳ್ಳಬೇಕಾದ್ದು ಚೀನಾದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಗಡಿಯಲ್ಲಿ ಶಾಂತಿ ಕಾಪಾಡುವುದು ಭಾರತ–ಚೀನಾ ನಡುವಣ ಇತರ ದ್ವಿಪಪಕ್ಷೀಯ ಬಾಂಧವ್ಯದ ಪ್ರಗತಿಗೆ ಮುಖ್ಯ. ಈ ಸಮಸ್ಯೆಯ ಪರಿಹಾರವು ನೇರವಾಗಿರಬೇಕು. ಗಡಿ ಪ್ರದೇಶದಲ್ಲಿ ಭಾರತೀಯ ಸೇನೆಯ ಸಾಮಾನ್ಯ ಗಸ್ತು ಕಾರ್ಯಾಚರಣೆಗೆ ಅಡೆತಡೆಯೊಡ್ಡುವುದನ್ನು ಚೀನಾ ಪಡೆಗಳು ನಿಲ್ಲಿಸಬೇಕು ಎಂದೂ ಅವರು ಹೇಳಿದ್ದಾರೆ.

ಚೀನಾವು ಗಾಲ್ವನ್ ಕಣಿವೆಯ ಸಾರ್ವಭೌಮತ್ವ ಪ್ರತಿಪಾದಿಸಿದ್ದನ್ನು ವಿಕ್ರಂ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಚೀನಾದ ಇಂತಹ ಉತ್ಪ್ರೇಕ್ಷೆಯಿಂದ ಕೂಡಿದ ಪ್ರತಿಪಾದನೆಗಳು ಪರಿಸ್ಥಿತಿ ನಿಭಾಯಿಸಲು ಪೂರಕವಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಾವು ನಡೆಸುವ ಯಾವುದೇ ಚಟುವಟಿಕೆಗಳಿದ್ದರೂ ಅದು ಎಲ್‌ಎಸಿಯ ನಮ್ಮ ಭೂಪ್ರದೇಶದಲ್ಲಿ ಮಾತ್ರವೇ ಇರುತ್ತವೆ. ಹೀಗಾಗಿ ಚೀನಾ ಪಡೆಗಳು ಯಥಾಸ್ಥಿತಿ ಬದಲಾಯಿಸುವ ಪ್ರಯತ್ನ ಕೈಬಿಡಬೇಕು. ಗಾಲ್ವನ್ ಕಣಿವೆಯ ಎಲ್‌ಎಸಿ ಬಗ್ಗೆ ಭಾರತಕ್ಕೆ ಸ್ಪಷ್ಟವಾದ ಅರಿವು ಇದೆ. ಈ ಪ್ರದೇಶಗಳಲ್ಲಿ ನಮ್ಮ ಸೇನಾ ಪಡೆಗಳು ಯಾವುದೇ ತೊಂದರೆಗಳಿಲ್ಲದೆ ಸುದೀರ್ಘ ಅವಧಿಯಿಂದ ಗಸ್ತು ಕಾರ್ಯಾಚರಣೆ ನಡೆಸುತ್ತಿವೆ’ ಎಂದೂ ಅವರು ಹೇಳಿದ್ದಾರೆ.

ಜೂನ್ 15ರಂದು ರಾತ್ರಿ ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ನಡೆದಿದ್ದ ಸೇನಾ ಸಂಘರ್ಷದಲ್ಲಿ ಭಾರತೀಯ ಸೇನೆಯ ಕರ್ನಲ್ ಶ್ರೇಣಿ ಅಧಿಕಾರಿ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲೂ 40ಕ್ಕೂ ಹೆಚ್ಚು ಸಾವು–ನೋವು ಸಂಭವಿಸಿದೆ ಎಂದು ವರದಿಯಾಗಿತ್ತು. ಬಳಿಕ, ಗಾಲ್ವನ್ ಕಣಿವೆ ತನ್ನದೆಂದು ಚೀನಾ ಪ್ರತಿಪಾದಿಸಿತ್ತು. ಈ ವಾದವನ್ನು ಭಾರತ ತಿರಸ್ಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT