ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಲ್ಲಿ `ಭಾರತೀಯ ಕೌಶಲ ಸಂಸ್ಥೆ' ಸ್ಥಾಪನೆಗೆ ಕ್ರಮ

Last Updated 15 ಆಗಸ್ಟ್ 2019, 11:26 IST
ಅಕ್ಷರ ಗಾತ್ರ

ಮುಂಬೈ: ಕೌಶಲ ತರಬೇತಿ ಮತ್ತು ಉದ್ಯಮಶೀಲತೆಗೆ ಹೆಚ್ಚಿನ ಉತ್ತೇಜನ ನೀಡುವ ಕ್ರಮವಾಗಿ ಕೇಂದ್ರ ಸರ್ಕಾರ ಮುಂಬೈನಲ್ಲಿ ಭಾರತೀಯ ಕೌಶಲ ಸಂಸ್ಥೆ (ಐಐಎಸ್‌) ಅನ್ನು ಸ್ಥಾಪಿಸಲಿದೆ.

ಜಾಗತಿಕ ಮಾನದಂಡಗಳಿಗೆ ಅನುಸಾರವಾಗಿ ಯುವಜನರು ವೃತ್ತಿ ಕೌಶಲ ಎಂಬ ಪ್ರಧಾನಿ ನರೇಂದ್ರ ಮೋದಿ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯತತ್ಪರವಾಗಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಡಾ.ಮಹೇಂದ್ರನಾಥ್‌ ಪಾಂಡೆ ಗುರುವಾರ ಹೇಳಿದರು.

ಐಐಎಸ್ ಸ್ಥಾಪ‍ನೆಗೆ ಕ್ರಮವಹಿಸಿದ್ದು, ಈ ಕುರಿತು ಚರ್ಚಿಸಲು ಡಾ.ಪಾಂಡೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಅವರನ್ನು ಭೇಟಿ ಮಾಡಿದ್ದರು. ಐಐಎಸ್ ಸ್ಥಾಪಿಸುವ ಚಿಂತನೆ ಪ್ರಧಾನಿಯು ಸಿಂಗಪುರದ ತಾಂತ್ರಿಕ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ್ದಾಗ ಮೊಳಕೆಯೊಡೆದಿತ್ತು ಎಂದು ತಿಳಿಸಿದರು.

ಇಲ್ಲಿನ ರಾಷ್ಟ್ರೀಯ ಕೌಸಲ ತರಬೇತಿ ಸಂಸ್ಥೆಗೆ (ಎನ್‌ಎಸ್‌ಟಿಐ) ಭೇಟಿ ನೀಡಿದ್ದ ಸಚಿವರು ಐಐಎಸ್‌ ಸ್ಥಾಪಿಸುವ ಯೋಜನೆ ಕುರಿತು ಚರ್ಚಿಸಿದರು. ಖಾಸಗಿ–ಸಾರ್ವಜನಿಕ ಸಹಭಾಗಿತ್ವದಲ್ಲಿ ಇದನ್ನು ಕಾರ್ಯಗತಗೊಳಿಸಲಿದ್ದು, ಟಾಟಾ ಶಿಕ್ಷಣ ಮತ್ತು ಅಭಿವೃದ್ಧಿ ಟ್ರಸ್ಟ್‌ (ಟಿಇಡಿಟಿ) ನಿರ್ಮಾಣ ಪ್ರಕ್ರಿಯೆ ಕೈಗೊಳ್ಳಲಿದೆ ಎಂದು ಹೇಳಿದರು.

‘ಯೋಜನೆಗಾಗಿ 4.5 ಎಕರೆ ಭೂಮಿಯನ್ನು ಸರ್ಕಾರ ಒದಗಿಸಲಿದೆ. ಟಾಟಾ ಸಮೂಹ ₹ 300 ಕೋಟಿ ಹೂಡಿಕೆ ಮಾಡಲಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ನಿರ್ಮಾಣ ಕಾರ್ಯ ಆರಂಭವಾಗುವ ನಿರೀಕ್ಷೆಯಿದೆ. ಪೂರ್ಣಗೊಂಡ ಬಳಿಕ ಏಕಕಾಲಲ್ಲಿ 10,000 ಜನರಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಲಿದೆ. ಸಾಂಪ್ರದಾಯಕ ಕ್ಷೇತ್ರಗಳೇ ಅಲ್ಲದೆ ಭದ್ರತೆ, ವೈಮಾನಿಕ, ಉಕ್ಕು ಕ್ಷೇತ್ರಗಳಿಗೂ ಅನ್ವಯಿಸಿ ತರಬೇತಿ ನೀಡಲಾಗುತ್ತದೆ. ಅಹಮದಾಬಾದ್‌, ಕಾನ್ಪುರದಲ್ಲಿಯೂ ತಲಾ ಒಂದು ಕೇಂದ್ರ ಸ್ಥಾಪನೆಯಾಗಲಿದೆ’ ಎಂದರು.

ಕೌಶಲ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಆರಂಭವಾಗಿರುವುದು ಈ ಕ್ಷೇತ್ರಕ್ಕೆ ಹೆಚ್ಚಿನ ಗಮನನೀಡಲು ನೆರವಾಗಿದೆ. ಜಾಗತಿಕ ಸ್ಪರ್ಧೆ ಎದುರಿಸಲು, ಯುವಶಕ್ತಿಯ ಪೂರ್ಣ ಬಳಕೆ ಹಾಗೂ ಅವರಿಗೆ ಕೌಶಲಾಭಿವೃದ್ಧಿ ಅಗತ್ಯ ಎಂಬ ಸಂದೇಶವು ಉದ್ಯಮಕ್ಕೆ ರವಾನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT