ಯಾವ ಕೈಚಳಕಕ್ಕೂ ನ್ಯಾಯಾಂಗ ಬಾಗದು: ದೀಪಕ್‌ ಮಿಶ್ರಾ

7
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಇಂದು ನಿವೃತ್ತಿ

ಯಾವ ಕೈಚಳಕಕ್ಕೂ ನ್ಯಾಯಾಂಗ ಬಾಗದು: ದೀಪಕ್‌ ಮಿಶ್ರಾ

Published:
Updated:
Deccan Herald

ನವದೆಹಲಿ: ಭಾರತದ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಶಕ್ತಿಯನ್ನು ಯಾವುದೇ ಕೈಚಳಕದ ಮೂಲಕ ಅಪಹರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ. 

‘ಜಗತ್ತಿನಲ್ಲಿಯೇ ಅತ್ಯಂತ ಪ್ರಬಲವಾದ ನ್ಯಾಯಾಂಗ ವ್ಯವಸ್ಥೆಯನ್ನು ನಾವು ಹೊಂದಿದ್ದೇವೆ. ಅಪಾರ ಪ್ರಮಾಣದ ಪ್ರಕರಣಗಳನ್ನು ನಿರ್ವಹಿಸುವ ಶಕ್ತಿ ಈ ವ್ಯವಸ್ಥೆಗೆ ಇದೆ. ನ್ಯಾಯಕ್ಕೆ ಮಾನವೀಯ ಮುಖವೊಂದು ಇರಲೇಬೇಕು’ ಎಂದು ಮಿಶ್ರಾ ಹೇಳಿದ್ದಾರೆ. 

ಸುಪ್ರೀಂ ಕೋರ್ಟ್‌ ಆವರಣದಲ್ಲಿ ಏರ್ಪಡಿಸಿದ್ದ ವಿದಾಯ ಕೂಟದಲ್ಲಿ ಅವರು ಮಾತನಾಡಿದರು. ಮಂಗಳವಾರ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾಲಿದ್ದಾರೆ. 

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ 13 ತಿಂಗಳು ಅವರು ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಹಿಂದೆಂದೂ ಕಂಡರಿಯದಂತಹ ವಿವಾದಗಳಿಗೂ ಸುಪ್ರೀಂ ಕೋರ್ಟ್ ತುತ್ತಾಗಿತ್ತು. ನಾಲ್ವರು ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಜನವರಿ 12ರಂದು ಮಾಧ್ಯಮಗೋಷ್ಠಿ ನಡೆಸುವ ಮೂಲಕ ಬಂಡಾಯ ಸಾರಿದ್ದರು. 

ತಮ್ಮ ಅವಧಿಯ ಕೊನೆಯ ದಿನಗಳಲ್ಲಿ ಅವರು ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ಆಧಾರ್‌ನ ಸಾಂವಿಧಾನಿಕ ಮಾನ್ಯತೆ, ಶಬರಿಮಲೆಗೆ ಮಹಿಳೆಯರಿಗೆ ಮುಕ್ತಪ್ರವೇಶ, ಸಲಿಂಕಾಮ ಅಪರಾಧ ಮುಕ್ತ, ನ್ಯಾಯಾಂಗ ಕಲಾಪದ ನೇರ ಪ್ರಸಾರಕ್ಕೆ ಅವಕಾಶದಂತಹ ತೀರ್ಪುಗಳ ಬಗ್ಗೆ ದೇಶದಾದ್ಯಂತ ಭಾರಿ ಚರ್ಚೆ ನಡೆದಿದೆ. 

‘ಇತಿಹಾಸವು ಕೆಲವೊಮ್ಮೆ ದಯಾಮಯವಾದರೆ ಕೆಲವೊಮ್ಮೆ ನಿಷ್ಠುರವಾಗಿರುತ್ತದೆ. ಹಾಗಾಗಿ, ಜನರನ್ನು ಅವರ ಹಿನ್ನೆಲೆ ನೋಡಿ ಅಳೆಯುವುದಿಲ್ಲ, ಬದಲಿಗೆ ಅವರ ಚಟುವಟಿಕೆಗಳು ಮತ್ತು ದೃಷ್ಟಿಕೋನವೇ ನನಗೆ ಮಾನದಂಡ’ ಎಂದು ಮಿಶ್ರಾ ಹೇಳಿದರು. 

ನಿಯೋಜಿತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ಮಿಶ್ರಾ ಅವರ ಕೊಡುಗೆಯನ್ನು ಕೊಂಡಾಡಿದರು. ನಾಗರಿಕ ಸ್ವಾತಂತ್ರ್ಯಕ್ಕೆ ಮಿಶ್ರಾ ಅವರ ಕೊಡುಗೆ ಅನುಪಮವಾದುದು ಎಂದು ಹೇಳಿದರು. ಅವರು ನೀಡಿದ ಕೆಲವು ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿದರು. 

ದೀಪಕ್‌ ಮಿಶ್ರಾ ಅವರೊಬ್ಬ ಅಸಾಧಾರಣ ನ್ಯಾಯಮೂರ್ತಿ ಎಂದೂ ಗೊಗೊಯಿ ಹೊಗಳಿದರು. 

‘ನಮ್ಮ ಚಟುವಟಿಕೆಳಲ್ಲಿ ನಾವು ಸಂವಿಧಾನದ ಸಿದ್ಧಾಂತಗಳಿಗೆ ಬದ್ಧರಾಗಿ ಇರದಿದ್ದರೆ ಪರಸ್ಪರನ್ನು ಕೊಲ್ಲುವುದು ಮತ್ತು ಪರಸ್ಪರರನ್ನು ದ್ವೇಷಿಸುವುದು ಮುಂದುರಿಯುತ್ತದೆ’ ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳೂ ಸಂವಿಧಾನಕ್ಕೆ ಬದ್ಧರಾಗಿದ್ದಾರೆ ಮತ್ತು ಹಾಗೆಯೇ ಉಳಿಯಲಿದ್ದಾರೆ ಎಂದೂ ಅವರು ಭರವಸೆ ನೀಡಿದರು. 

ಕೊನೆಯ ಕಲಾಪದಲ್ಲಿ ಭಾವುಕ: ಮಿಶ್ರಾ ಅವರು ತಮ್ಮ ವೃತ್ತಿಜೀವನದ ಕೊನೆಯ ಕಲಾಪವನ್ನು ಸೋಮವಾರ ನಡೆಸಿದರು. ಜತೆಗೆ ಗೊಗೊಯಿ ಅವರೂ ಇದ್ದರು. ಮಿಶ್ರಾ ಅವರು ಸ್ವಲ್ಪ ಭಾವುಕರಾದಂತೆ ಕಂಡರು. ಸುಮಾರು 25 ನಿಮಿಷ ಅವರು ಕಲಾಪದಲ್ಲಿ ಪಾಲ್ಗೊಂಡರು. 

ಕಲಾಪದ ಕೊನೆಯ ಹೊತ್ತಿಗೆ ವಕೀಲರೊಬ್ಬರು ಮಿಶ್ರಾ ಅವರಿಗೆ ಶುಭ ಹಾರೈಸುವುದಕ್ಕಾಗಿ ಹಿಂದಿ ಹಾಡೊಂದನ್ನು ಹಾಡಲು ಮುಂದಾದರು. ‘ತುಮ್‌ ಜಿಯೊ ಹಜಾರೋಂ ಸಾಲ್‌...’ ಎಂದು ಅವರು ಹಾಡಲು ಆರಂಭಿಸುತ್ತಿದ್ದಂತೆಯೇ ಮಿಶ್ರಾ ಅವರು ತಮ್ಮ ಎಂದಿನ ಚುರುಕು ಶೈಲಿಯಲ್ಲಿ ಆ ವಕೀಲರನ್ನು ತಡೆದರು. ‘ಈಗ ನಾನು ಹೃದಯದ ಮೂಲಕ ಸ್ಪಂದಿಸುತ್ತಿದ್ದೇನೆ, ಸಂಜೆಯ ಕಾರ್ಯಕ್ರಮದಲ್ಲಿ ಮಿದುಳಿನ ಮೂಲಕ ಸ್ಪಂದಿಸಲಿದ್ದೇನೆ’ ಎಂದರು. 

ಮಿಶ್ರಾ ನೇತೃತ್ವದ ಆ ಪೀಠದಲ್ಲಿ ನ್ಯಾಯಮೂರ್ತಿಗಳಾದ ಗೊಗೊಯಿ ಮತ್ತು ಎ.ಎಂ. ಖಾನ್ವಿಲ್ಕರ್‌ ಇದ್ದರು. ತುರ್ತು ವಿಚಾರಣೆಯ ಯಾವುದೇ ಅರ್ಜಿಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು. ಇಂತಹ ವಿಚಾರಗಳನ್ನು ಹೊಸ ಮುಖ್ಯ ನ್ಯಾಯಮೂರ್ತಿಯ ನೇತೃತ್ವದ ಪೀಠವು ಬುಧವಾರ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದರು. 

ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಮತ್ತು ವಕೀಲ ಪ್ರಶಾಂತ್‌ ಭೂಷಣ್‌ ಅವರು ಮಿಶ್ರಾ ವಿರುದ್ಧ ಪೋಸ್ಟ್‌ ಮಾಡಿದ್ದ ವಿವಾದಾತ್ಮಕ ಎಂದು ಹೇಳಲಾದ ಎರಡು ಟ್ವೀಟ್‌ಗಳ ಬಗ್ಗೆ ವಕೀಲ ಆರ್‌.ಪಿ. ಲೂತ್ರಾ ಅವರು ಪೀಠದ ಗಮನ ಸೆಳೆದರು. ಐವರು ಹೋರಾಟಗಾರರ ಬಂಧನ ಪ್ರಕರಣದಲ್ಲಿ ಮಿಶ್ರಾ ನೇತೃತ್ವದ ಪೀಠದ ತೀರ್ಪನ್ನು ಟೀಕಿಸಿ ಅವರು ಈ ಟ್ವೀಟ್‌ ಮಾಡಿದ್ದರು. 

ಲೂತ್ರಾ ಅವರ ವಿನಂತಿಯ ಮೇರೆಗೆ ಪೀಠವು ಟ್ವೀಟ್‌ಗಳನ್ನು ಪರಿಶೀಲಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. 

ನ್ಯಾಯಮೂರ್ತಿ ದೀಪಕ್‌ ಮಿಶ್ರಾ‌

* 1996 ಜನವರಿ 17: ಒರಿಸ್ಸಾ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ

* 1997 ಡಿಸೆಂಬರ್‌ 19: ಮಧ್ಯಪ್ರದೇಶ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿ

* 2009 ಡಿಸೆಂಬರ್‌ 23: ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ

* 2010 ಮೇ 24: ದೆಹಲಿಯ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ವರ್ಗ

* 2011 ಅಕ್ಟೋಬರ್‌ 10: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ

* 2017 ಆಗಸ್ಟ್‌ 28: ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಬಡ್ತಿ

* 2018 ಅಕ್ಟೋಬರ್‌ 2: ನಿವೃತ್ತಿ

*

ನ್ಯಾಯಮೂರ್ತಿಯಾಗಿ ನನ್ನ ಇಡೀ ವೃತ್ತಿಜೀವನದಲ್ಲಿ ಸಮಾನತೆಯ ದೇವತೆಯಿಂದ ಯಾವತ್ತೂ ದೂರ ಸರಿದದ್ದೇ ಇಲ್ಲ. ಪೂರ್ಣ ತೃಪ್ತಿಯಿಂದ ಇಲ್ಲಿಂದ ಹೋಗುತ್ತಿದ್ದೇನೆ
- ದೀಪಕ್‌ ಮಿಶ್ರಾ, ಮುಖ್ಯ ನ್ಯಾಯಮೂರ್ತಿ

*

ನಾವೇನು ತಿನ್ನಬೇಕು, ಏನು ಧರಿಸಬೇಕು ಎಂಬುದೆಲ್ಲ ವೈಯಕ್ತಿಕವಾದ ಸಣ್ಣ ವಿಚಾರಗಳಾಗಿ ಉಳಿದಿಲ್ಲದ ಕಾಲದಲ್ಲಿ ನಾವು ಬದುಕುತ್ತಿದ್ದೇವೆ
- ರಂಜನ್‌ ಗೊಗೊಯಿ, ನಿಯೋಜಿತ ಮುಖ್ಯ ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !