ಗ್ರೀಸ್‌ನಿಂದ ಮರಳಿದ ಭಾರತೀಯರು

ಸೋಮವಾರ, ಏಪ್ರಿಲ್ 22, 2019
29 °C

ಗ್ರೀಸ್‌ನಿಂದ ಮರಳಿದ ಭಾರತೀಯರು

Published:
Updated:

ಮುಂಬೈ: ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿರುವ ಆರೋಪದ ಮೇಲೆ ಗ್ರೀಸ್‌ ಜೈಲಿನಲ್ಲಿ 14 ತಿಂಗಳವರಿಗೆ ಇದ್ದ  ಭಾರತದ ಐವರು ಸರಕು ಹಡಗಿನ ಸಿಬ್ಬಂದಿ ಭಾನುವಾರ ಮುಂಬೈಗೆ ಬಂದರು. ಈ ಐವರಲ್ಲಿ ಬೆಂಗಳೂರಿನವರೊಬ್ಬರೂ ಸೇರಿದ್ದಾರೆ.

‘ಎಂವಿ ಆಂಡ್ರೋಮಿಡಾ’ ಎಂಬ ಹೆಸರಿನ ಸರಕು ಹಡಗಿನಲ್ಲಿ ತೆರಳುತ್ತಿದ್ದ ವೇಳೆ 2018ರ ಜನವರಿ 9 ರಂದು ಗ್ರೀಕ್‌ನ ಕರಾವಳಿ ಭದ್ರತಾ ಪಡೆ ಈ ಐವರನ್ನು ಬಂಧಿಸಿತ್ತು. 

ಟರ್ಕಿಯಿಂದ ಡಿಜಿಬೌಟಿ ಕಡೆಗೆ ಹೊರಟಿದ್ದ ಈ ಹಡಗಿನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ದುರಸ್ತಿಗಾಗಿ 2018ರ ಜನವರಿ 6 ರಂದು ಗ್ರೀಕ್‌ ಕರಾವಳಿಯತ್ತ ತೆರಳುತ್ತಿದ್ದಂತೆ ಅಲ್ಲಿನ ಭದ್ರತಾ ಸಿಬ್ಬಂದಿ ಇದನ್ನು ವಶಕ್ಕೆ ಪಡೆದಿದ್ದರು. ಈ ಹಡಗಿನಲ್ಲಿ ಪಟಾಕಿಗಳಿಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಸಾಗಿಸಲಾಗುತ್ತಿತ್ತು. 

ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿರುವ ಆರೋಪದ ಮೇಲೆ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಜೈಲಿಗೆ ಹಾಕಲಾಗಿತ್ತು. ಈಗ ಅವರನ್ನು ಮುಂಬೈಗೆ ಕಳುಹಿಸಲಾಗಿದೆ.

ಹಡಗಿನ ಸಿಬ್ಬಂದಿಯಾಗಿದ್ದ ಹಾಗೂ ಜೈಲಿಗೆ ಹೋಗಿದ್ದ ಬೆಂಗಳೂರಿನ ಗಗನ್‌ ದೀಪ್‌ ಅವರು ‘ಗ್ರೀಸ್‌ ಜೈಲನ್ನು 1953ರಲ್ಲಿ ನಿರ್ಮಿಸಲಾಗಿದೆ. ಈ ಜೈಲಿನಲ್ಲಿ ಇದ್ದ  ಮೊದಲ ಭಾರತೀಯರು ನಾವೇ ಎಂದು ಅಲ್ಲಿನ ಅಧಿಕಾರಿಗಳು ಹೇಳಿದರು. ಈ ಜೈಲಿನಲ್ಲಿದ್ದ ಪಾಕಿಸ್ತಾನದ ಕೈದಿಗಳು ನಮಗೆ ಭಾವನಾತ್ಮಕ ಬೆಂಬಲ ನೀಡಿದರು’ ಎಂದು ಹೇಳಿದರು.

‘ಕಳೆದ 23 ತಿಂಗಳಿನಿಂದ ನಮ್ಮ ಹಡಗು ಕಂಪನಿಯಿಂದ ವೇತನ ಸಹ ಬಂದಿಲ್ಲ’ ಎಂದೂ ತಿಳಿಸಿದರು. 

‘ನಮ್ಮ ಹಾಗೂ ಪಾಕಿಸ್ತಾನದ ನಡುವೆ ಎಷ್ಟೇ ದ್ವೇಷವಿದ್ದರೂ ಬೇರೆ ದೇಶದಲ್ಲಿ ಒಬ್ಬರನ್ನೊಬ್ಬರು ಪ್ರೀತಿ ಮತ್ತು ಗೌರವದಿಂದ ಕಾಣಲಾಗುತ್ತದೆ. ಜೈಲಿನಲ್ಲಿ ನಮಗೆ ಪಾಕಿಸ್ತಾನದ ಕೈದಿಗಳು ಬಹಳಷ್ಟು ಸಹಾಯ ಮಾಡಿದ್ದಾರೆ’ ಎಂದು ಹಡಗಿನ ಸಿಬ್ಬಂದಿ, ಪಂಜಾಬ್‌ನ ಗುರದಾಸಪುರದ ಭೂಪೇಂದ್ರ ಸಿಂಗ್‌ ಹೇಳಿದರು.

ಇವರೊಟ್ಟಿಗೆ ರೋಹ್ಟಸ್‌ ಕುಮಾರ್‌, ಜೈದೀಪ್‌ ಠಾಕೂರ್‌ ಮತ್ತು ಸತೀಶ್‌ ಪಾಟೀಲ್‌ ಎಂಬ ಸಿಬ್ಬಂದಿಯೂ ಇದ್ದರು.

ಬಿಡುಗಡೆಯಾಗಿರುವ ಸಿಬ್ಬಂದಿ ಸೋಮವಾರ ಕೇಂದ್ರದ ಬಂದರು ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !