ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡ್ಸೆ ಸ್ವತಂತ್ರ ಭಾರತದ ಮೊದಲ ಹಿಂದೂ ಭಯೋತ್ಪಾದಕ: ಕಮಲ್‌ ಹಾಸನ್‌

ವಿವಾದ ಸೃಷ್ಟಿಸಿದ ಮಕ್ಕಳ ನೀದಿ ಮಯ್ಯಂ ಮುಖ್ಯಸ್ಥ
Last Updated 13 ಮೇ 2019, 18:42 IST
ಅಕ್ಷರ ಗಾತ್ರ

ಅರವಕುರಿಚಿ:‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಒಬ್ಬ ಹಿಂದೂ ಆಗಿದ್ದ. ರಾಷ್ಟ್ರಪಿತ ಮಹಾತ್ಮ ಗಾಂಧಿಯ ಹತ್ಯೆ ಮಾಡಿದ ನಾಥುರಾಮ್‌ ಗೋಡ್ಸೆಯೇ ಮೊದಲ ಭಯೋತ್ಪಾದಕ’ ಎಂದು ನಟ, ಮಕ್ಕಳ ನೀದಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್‌ ಹಾಸನ್‌ ಹೇಳಿದ್ದಾರೆ.

ಅರವಕುರುಚ್ಚಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಪ್ರಚಾರಸಭೆಯಲ್ಲಿ ಮಾತನಾಡಿದ ಕಮಲ್‌, ‘ಭಾರತದಲ್ಲಿ ಹಿಂದೂ ಭಯೋತ್ಪಾದನೆ ಇದೆ’ ಎಂದು ನಾನು ಹಿಂದೆ ಹೇಳಿದ್ದಕ್ಕೆ ಅವರು (ಬಲಪಂಥೀಯರು) ನನ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಇದು ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರ ಎಂಬ ಕಾರಣಕ್ಕೆ ನಾನಿದನ್ನು ಹೇಳುತ್ತಿಲ್ಲ. ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಗೋಡ್ಸೆ ಎಂದು ಗಾಂಧಿಯ ಮರಿಮೊಮ್ಮಗನೂ ಹೇಳಿದ್ದರು’ ಎಂದರು.

2018 ರಲ್ಲಿ ‘ಬಲ ಪಂಥೀಯ ಭಯೋತ್ಪಾದನೆ’ ಎಂಬ ಪದಪುಂಜವನ್ನು ಬಳಸಿದ್ದಕ್ಕಾಗಿ ತಮ್ಮ ವಿರುದ್ಧ ಬಲಪಂಥೀಯರು ಆಕ್ರೋಶ ವ್ಯಕ್ತಪಡಿಸಿದ್ದನ್ನುನೆನಪಿಸಿಕೊಂಡ ಕಮಲ್‌, ‘ಭಯೋತ್ಪಾದನೆ ತಪ್ಪು, ಹಿಂದೂ ಧರ್ಮವಿರಲಿ, ಇಸ್ಲಾಂ ಇರಲಿ ಹಿಂಸೆಯನ್ನು ಸ್ವೀಕರಿಸುವುದಿಲ್ಲ ಎಂದು ನಾನು ಹೇಳಿದ್ದೆ. ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ಈ ಸಭೆಯಲ್ಲಿರುವ ನಿಜವಾದ ಮುಸ್ಲಿಮರು ನನ್ನ ಮಾತನ್ನು ಖಂಡಿತವಾಗಿ ಒಪ್ಪುತ್ತಾರೆ. ಬಿಜೆಪಿಯು ದೇಶದ ಸಿದ್ಧಾಂತವನ್ನೇ ಬದಲಿಸುವ ಪ್ರಯತ್ನ ಮಾಡುತ್ತಿದೆ. ಧರ್ಮ ಮತ್ತು ಜಾತಿಯ ಆಧಾರದಲ್ಲಿ ಜನರನ್ನು ವಿಭಜಿಸುವವರನ್ನು ಸೋಲಿಸುವುದು ಅಗತ್ಯ’ ಎಂದರು.

ಕಮಲ್‌ ಹಾಸನ್‌ ‘ಅವಹೇಳನಕಾರಿ’ ಹೇಳಿಕೆ ನೀಡಿದ್ದು ಅವರನ್ನು ಕೂಡಲೇ ಬಂಧಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಈ ಹೇಳಿಕೆಯನ್ನು ಖಂಡಿಸಿ, ಕಮಲ್‌ಹಾಸನ್‌ ಮೇಲೆ ವೈಯಕ್ತಿಕ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ತಮಿಳ್‌ಸಾಯಿ ಸೌಂದರರಾಜನ್‌, ‘ಸೈದ್ಧಾಂತಿಕ ಮತ್ತು ಶಿಸ್ತುಬದ್ಧ ಜೀವನ ನಡೆಸಿದ್ದ ಗಾಂಧೀಜಿಯ ಬಗ್ಗೆ ಮಾತನಾಡುವ ನೈತಿಕತೆ ಕಮಲ್‌ಹಾಸನ್‌ ಅವರಿಗಿಲ್ಲ’ ಎಂದಿದ್ದಾರೆ.

‘ಕಮಲ್‌ ಅವರು ಎರಡು ಧರ್ಮಗಳ ನಡುವೆ ವೈರತ್ವ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು.
ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಹಿಂದೂಗಳ ಅವಮಾನ ಮಾಡುತ್ತ, ಮತಗಳಿಗಾಗಿ ಭಿಕ್ಷೆ ಬೇಡಿದ ಕಮಲ್‌ ಹಾಸನ್‌ ಜನರ ಕ್ಷಮೆ ಯಾಚಿಸಬೇಕು’ ಎಂದು ಬಿಜೆಪಿಯ ವಕ್ತಾರ ನಾರಾಯಣ ತಿರುಪತಿ ಟ್ವೀಟ್‌ ಮೂಲಕಒತ್ತಾಯಿಸಿದ್ದಾರೆ.

ತಮ್ಮ ಹೇಳಿಕೆಯಿಂದ ವಿವಾದಸೃಷ್ಟಿಯಾಗಿರುವುದನ್ನು ಮನಗಂಡ ಕಮಲ್‌, ಸೋಮವಾರ ಮತ್ತು ಮಂಗಳವಾರ ನಡೆಸಲುದ್ದೇಶಿಸಿದ್ದ ತಮ್ಮ ಎಲ್ಲ ಪ್ರಚಾರ ಸಭೆಗಳನ್ನು ರದ್ದುಪಡಿಸಿದ್ದಾರೆ ಎಂದು ಹೇಳಲಾಗಿದೆ.

***

ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಎಂಬ ಹೇಳಿಕೆ ನೀಡಿರುವ ಕಮಲ್‌ ಹಾಸನ್‌ ಅವರ ನಾಲಿಗೆ ಕತ್ತರಿಸಬೇಕು, ಎಂಎನ್‌ಎಂ ಪಕ್ಷವನ್ನು ನಿಷೇಧಿಸಬೇಕು.

–ಕೆ.ಟಿ. ರಾಜೇಂದ್ರ ಬಾಲಾಜಿ, ತಮಿಳುನಾಡಿನ ಸಚಿವ (ಎಐಎಡಿಎಂಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT