ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮ ನಿರ್ಭೀತವಾಗಿದ್ದರೆ ಸ್ವಾತಂತ್ರ್ಯ ಸುರಕ್ಷಿತ: ಸುಪ್ರೀಂಕೋರ್ಟ್

Last Updated 19 ಮೇ 2020, 20:57 IST
ಅಕ್ಷರ ಗಾತ್ರ

ನವದೆಹಲಿ: ಅಧಿಕಾರ ಸ್ಥಾನದಲ್ಲಿ ಇರು ವವರ ಬಗ್ಗೆ ಪತ್ರಕರ್ತರು ಪ್ರತೀಕಾರದ ಭೀತಿ ಇಲ್ಲದೆ ಮಾತನಾಡುವುದು ಸಾಧ್ಯ ಇರುವವರೆಗೆ ಭಾರತದ ಸ್ವಾತಂತ್ರ್ಯವು ಸುರಕ್ಷಿತ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.

ಸಂವಿಧಾನವು ನೀಡಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಕೇಂದ್ರ ಸ್ಥಾನದಲ್ಲಿ ಪತ್ರಿಕಾ ಸ್ವಾತಂತ್ರ್ಯ ಇದೆ.ಹಾಗಿದ್ದರೂ, ಮೂಲಭೂತ ಹಕ್ಕು ಎಂಬುದು ನಿರಂಕುಶವಲ್ಲ. ಕಾಯ್ದೆ, ಕಟ್ಟಲೆಗಳಿಗೆ ಅದು ಉತ್ತರದಾಯಿ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎಂ.ಆರ್‌. ಶಾ ಅವರ ಪೀಠವು ವಿವರಿಸಿದೆ.

ಪಾಲ್ಘರ್‌ನಲ್ಲಿ ಹಿಂದೂ ಸಾಧುಗಳ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನುರಿಪಬ್ಲಿಕ್‌ ಟಿ.ವಿ.ಯ ಪ್ರಧಾನ ಸಂಪಾದಕ ಅರ್ಣಬ್‌ ಗೋಸ್ವಾಮಿ ಅವರು ಪ್ರಶ್ನಿಸಿದ್ದರು. ಇದಕ್ಕೆ ಸಂಬಂಧಿಸಿ, ದೇಶದ ವಿವಿಧ ಭಾಗಗಳಲ್ಲಿ ನೂರಕ್ಕೂ ಹೆಚ್ಚು ದೂರುಗಳು ಅರ್ಣಬ್‌ ವಿರುದ್ಧ ದಾಖಲಾಗಿದ್ದವು. ಈ ರೀತಿಯಲ್ಲಿ ದೂರುಗಳನ್ನು ದಾಖಲಿಸುವುದು ‘ಕಾನೂನು ಪ್ರಕ್ರಿಯೆಯ ದುರ್ಬಳಕೆ ಮತ್ತು ಅಂತಹುದಕ್ಕೆ ಅವಕಾಶ ಇಲ್ಲ. ಇದು ಸ್ವಾತಂತ್ರ್ಯದ ಹಕ್ಕು ಚಲಾವಣೆಯನ್ನು ದಮನ ಮಾಡುತ್ತದೆ’ ಎಂದು ಪೀಠವು ಹೇಳಿದೆ.

ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವ ಒಂದು ದೂರನ್ನು ಬಿಟ್ಟು ಉಳಿದ ಎಲ್ಲವನ್ನೂ ಪೀಠವು ವಜಾ ಮಾಡಿದೆ. ಬಲವಂತದ ಕ್ರಮಗಳಿಂದ ಇನ್ನೂ ಮೂರು ವಾರ ಅರ್ಣಬ್‌ ಅವರಿಗೆ ರಕ್ಷಣೆ ನೀಡಿದೆ. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು ಎಂಬ ಅವರ ಬೇಡಿಕೆಯನ್ನು ಪೀಠವು ತಿರಸ್ಕರಿಸಿದೆ.

ಪತ್ರಕರ್ತರ ವಿರುದ್ಧ ಒಂದು ಪ್ರಕರಣದಲ್ಲಿ ಹಲವು ಕ್ರಿಮಿನಲ್‌ ದೂರು ಸಲ್ಲಿಸುವಂತಿಲ್ಲ ಎಂದೂ ಪೀಠವು ಹೇಳಿದೆ.

‘ಪತ್ರಕರ್ತನ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಜೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ದೊಡ್ಡದಲ್ಲ. ಆದರೆ, ಒಬ್ಬರು ಇಲ್ಲದಿದ್ದರೆ ಇನ್ನೊಬ್ಬರು ಇರುವುದಿಲ್ಲ ಎಂಬುದನ್ನು ಒಂದು ಸಮಾಜವಾಗಿ ನಾವು ಮರೆಯಬಾರದು. ಒಂದು ನಿಲುವಿಗೆ ಬದ್ಧರಾಗಿರಬೇಕು ಎಂದು ಮಾಧ್ಯಮವನ್ನು ಸಂಕೋಲೆಯಿಂದ ಬಂಧಿಸಿದರೆ ಪ್ರಜೆಯು ಸ್ವತಂತ್ರವಾಗಿ ಉಳಿಯುವುದು ಸಾಧ್ಯವಿಲ್ಲ’ ಎಂದು ಪೀಠವು ಅಭಿಪ‍್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT