ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂನ್‌ 8ಕ್ಕೆ ರಾಜ್ಯಕ್ಕೆ ಮುಂಗಾರು

ಕರಾವಳಿ ಮತ್ತು ದಕ್ಷಿಣದಲ್ಲಿ ಉತ್ತಮ, ಉತ್ತರ ಒಳನಾಡಿನಲ್ಲಿ ದುರ್ಬಲ: ಸ್ಕೈಮೆಟ್‌ ವರದಿ
Last Updated 14 ಮೇ 2019, 20:32 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿ ರಾಜ್ಯಕ್ಕೆ ಮುಂಗಾರು ಜೂನ್‌ 8ಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನೈರುತ್ಯ ಮುಂಗಾರು ಮಾರುತವು ಮೇ 22ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್‌ ದ್ವೀಪ ಸಮೂಹವನ್ನು ಪ್ರವೇಶಿಸಲಿದೆ. ಜೂನ್‌ 4ರ ವೇಳೆಗೆ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ. ನಂತರ ಕರ್ನಾಟಕ ಕರಾವಳಿಯನ್ನು ಜೂನ್ 7 ಅಥವಾ 8ರಂದು ಪ್ರವೇಶಿಸಲಿದೆ.ಮಾರುತವು ಪ್ರಬಲವಾಗಿದ್ದರೆ ರಾಜ್ಯದಲ್ಲಿ 8 ದಿನ ನಿರಂತರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ದಿನ ವ್ಯತ್ಯಾಸವಾಗಬಹುದು:ಹವಾಮಾನ ವಿಶ್ಲೇಷಣಾ ಖಾಸಗಿ ಸಂಸ್ಥೆ ಸ್ಕೈಮೆಟ್ ಸಹ, ‘ಜೂನ್ 8ರ ಹೊತ್ತಿಗೆ ಕರ್ನಾಟಕದ ಕರಾವಳಿಯನ್ನು ಮುಂಗಾರು ಪ್ರವೇಶಿಸಲಿದೆ. ಆದರೆ ಎರಡು ದಿನ ಮುಂಚಿತವಾಗಿ ಅಥವಾ ಎರಡು ದಿನ ತಡವಾಗಿ ಪ್ರವೇಶಿಸುವ ಸಾಧ್ಯತೆಯೂ ಇದೆ’ ಎಂದು ಹೇಳಿದೆ.‌

ಜೂನ್‌ 4ರಂದು ಮುಂಗಾರು ಕೇರಳವನ್ನು ಪ್ರವೇಶಿಸಲಿದೆ. ಇದು ವಾಡಿಕೆಗಿಂತ ಮೂರು ದಿನ ವಿಳಂಬ. ಮಾರುತದ ರಭಸವೂ ಕಡಿಮೆ ಇರಲಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಾರುತವು ರಾಜಸ್ಥಾನವನ್ನು ಹಾದುಹೋಗಲಿದೆ ಎಂದು ಸ್ಕೈಮೆಟ್ ಹೇಳಿದೆ.

ಉತ್ತರ ಕರ್ನಾಟಕದಲ್ಲಿ ದುರ್ಬಲ:ದೇಶದಾದ್ಯಂತ ವಿವಿಧ ವಲಯಗಳಲ್ಲಿ ಈ ಬಾರಿ ಆಗಲಿರುವ ಮುಂಗಾರು ಮಳೆಯ ಪ್ರಮಾಣವನ್ನು ಸ್ಕೈಮೆಟ್ ಅಂದಾಜಿಸಿದೆ. ಸಂಬಂಧಿತ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಕೇರಳದಲ್ಲಿ ಉತ್ತಮ ಮಳೆಯಾಗಲಿದೆ. ಆದರೆ ಕರ್ನಾಟಕದ ಉತ್ತರ ಒಳನಾಡು ಮತ್ತು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿ ಮುಂಗಾರು ದುರ್ಬಲವಾಗಿರಲಿದೆ ಎಂದು ಸ್ಕೈಮೆಟ್ ಹೇಳಿದೆ.

ವಾಯವ್ಯ ಮತ್ತು ಉತ್ತರದ ರಾಜ್ಯಗಳಾದ ರಾಜಸ್ಥಾನ, ಪಂಜಾಬ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಮುಂಗಾರು ಉತ್ತಮವಾಗಿರಲಿದೆ. ದೆಹಲಿ ಸೇರಿದಂತೆ ಈ ವಲಯದಲ್ಲಿ ವಾಡಿಕೆ ಮಳೆಯಾಗಲಿದೆ. ಗುಜರಾತ್, ಮಹಾರಾಷ್ಟ್ರದ ಮರಾಠವಾಡಾ ಮತ್ತು ವಿದರ್ಭ ಪ್ರಾಂತಗಳಲ್ಲಿ ಹಾಗೂ ಮಧ್ಯಪ್ರದೇಶದ ಪಶ್ಚಿಮ ಭಾಗದಲ್ಲಿ ಮುಂಗಾರು ತೀರಾ ದುರ್ಬಲವಾಗಿರಲಿದೆ ಎಂದು ಸ್ಕೈಮೆಟ್ ಹೇಳಿದೆ.

ಈಶಾನ್ಯ ರಾಜ್ಯಗಳಲ್ಲಿ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕೆಲವು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ಈ ವಲಯದಲ್ಲಿ ಈ ಬಾರಿ ವಾಡಿಕೆ ಮಳೆ ಸುರಿಯುವ ಸಾಧ್ಯತೆ ಶೇ 25ರಷ್ಟು ಮಾತ್ರ. ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಶೇ 10ರಷ್ಟು ಅಷ್ಟೆ ಎಂದು ಸ್ಕೈಮೆಟ್ ಅಂದಾಜಿಸಿದೆ.

ಒಟ್ಟಾರೆ ಈ ಬಾರಿ ಮುಂಗಾರು ವಾಡಿಕೆಗಿಂತ ಕಡಿಮೆ ಇರಲಿದೆ. ವಾಡಿಕೆಯಲ್ಲಿ ಶೇ 92ರಷ್ಟು ಮಾತ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಕಳೆದ ವಾರವೇ ಹೇಳಿತ್ತು. ಹವಾಮಾನ ಇಲಾಖೆ ಸಹ ಹೀಗೇ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT