ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ವಸ್ತ್ರ ಸಂಗ್ರಹ: ಮುಂಚೂಣಿ ರಾಷ್ಟ್ರಗಳಲ್ಲಿ ಭಾರತ

ನೆಲ, ಜಲ, ಗಾಳಿಯಲ್ಲಿ ದಾಳಿ ನಡೆಸುವ ಸಾಮರ್ಥ್ಯ
Last Updated 17 ಜೂನ್ 2019, 19:33 IST
ಅಕ್ಷರ ಗಾತ್ರ

ನವದೆಹಲಿ: ‘ಅಣ್ವಸ್ತ್ರ ಸಂಗ್ರಹವನ್ನು ಹೆಚ್ಚಿಸುತ್ತಾ ಉಪಖಂಡವನ್ನು ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾಗಿ ಮಾರ್ಪಡಿಸುತ್ತಿರುವ ಮೂರು ರಾಷ್ಟ್ರಗಳಲ್ಲಿ ಭಾರತವೂ ಒಂದು’ ಎಂದು ಅಧ್ಯಯನವೊಂದು ಹೇಳಿದೆ. ಚೀನಾ ಮತ್ತು ಪಾಕಿಸ್ತಾನ ಇತರ ಎರಡು ರಾಷ್ಟ್ರಗಳಾಗಿವೆ.

‘ಭಾರತವು ಪ್ರಸಕ್ತ 130ರಿಂದ 140 ಅಣ್ವಸ್ತ್ರಗಳನ್ನು ಹೊಂದಿದೆ. ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುತ್ತಲೇ ಇದೆ. ಇದರಿಂದಾಗಿ ಮುಂದಿನ ಒಂದು ದಶಕದಲ್ಲಿ ಭಾರತದ ಅಣ್ವಸ್ತ್ರ ಸಂಗ್ರಹವು ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ಸ್ಟಾಕ್‌ಹೋಂ ಇಂಟರ್‌ನ್ಯಾಷನಲ್‌ ಪೀಸ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ (ಎಸ್‌ಐಪಿಆರ್‌ಐ) ಇತ್ತೀಚಿನ ವರದಿಯಲ್ಲಿ ಹೇಳಿದೆ. ಈ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರ ವ್ಯಾಪಾರ ಮತ್ತು ನಿಶಸ್ತ್ರೀಕರಣ ಕ್ಷೇತ್ರದಲ್ಲಿ ವಿಶೇಷತೆಯನ್ನು ಹೊಂದಿದೆ.

ಈ ದಾರಿಯಲ್ಲಿ ಭಾರತ ಒಂದೇ ಅಲ್ಲ, ಪಾಕಿಸ್ಥಾನವೂ ಸಮಾನ ವೇಗದಲ್ಲಿ ಸಾಗುತ್ತಿದೆ. ಪಾಕಿಸ್ತಾನವು ಪ್ರಸಕ್ತ 140ರಿಂದ 150 ಅಣ್ವಸ್ತ್ರಗಳನ್ನು ಹೊಂದಿದ್ದು, ಭಾರತದಂತೆ ಅದೂ ತನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಚೀನಾ ಸುಮಾರು 290 ಸಿಡಿತಲೆಗಳನ್ನು ಹೊಂದಿದೆ. ಆದರೆ ಅದು ನಿಧಾನವಾಗಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಮತ್ತು ಅಣ್ವಸ್ತ್ರಗಳ ವೈವಿಧ್ಯವನ್ನು ಹೆಚ್ಚಿಸುತ್ತಿದೆ ಎಂದು ವರದಿ ಹೇಳಿದೆ.

2019ರ ಆರಂಭದಲ್ಲಿ ಅಮೆರಿಕ, ರಷ್ಯಾ, ಬ್ರಿಟನ್‌, ಫ್ರಾನ್ಸ್‌, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್‌ ಮತ್ತು ಉತ್ತರ ಕೊರಿಯಾ ದೇಶಗಳು ಒಟ್ಟಾಗಿ ಸುಮಾರು 13,865 ಅಣ್ವಸ್ತ್ರಗಳನ್ನು ಹೊಂದಿದ್ದವು. ಅವುಗಳಲ್ಲಿ 3,750 ಅಸ್ತ್ರಗಳು ಸೇನೆಯಲ್ಲಿ ಅಳವಡಿಕೆಯಾಗಿದ್ದವು.

ಅಣ್ವಸ್ತ್ರ ನಿಶಸ್ತ್ರೀಕರಣ ಒಪ್ಪಂದಕ್ಕೆ ಅಮೆರಿಕ ಮತ್ತು ರಷ್ಯಾ ಬದ್ಧವಾಗಿದ್ದರೂ, ಒಟ್ಟಾರೆ ಅಣ್ವಸ್ತ್ರಗಳ ಶೇ 90ರಷ್ಟು ಭಾಗ ಈ ಎರಡು ರಾಷ್ಟ್ರಗಳಲ್ಲೇ ಇದೆ. ಅಮೆರಿಕ, ರಷ್ಯಾ, ಬ್ರಿಟನ್‌ ಹಾಗೂ ಫ್ರಾನ್ಸ್‌ ಅಣ್ವಸ್ತ್ರಗಳನ್ನು ಸೇನೆಯಲ್ಲಿ ಅಳವಡಿಸಿರುವ ರಾಷ್ಟ್ರಗಳಾಗಿವೆ.

ಭಾರತವು 1974 ಮತ್ತು 1998ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು. ಆದರೆ ಗಾಳಿಯಿಂದ, ನೆಲದಿಂದ ಹಾಗೂ ಸಾಗರದಿಂದ ಅಣ್ವಸ್ತ್ರ ದಾಳಿ ನಡೆಸುವ ಸಾಮರ್ಥ್ಯ ಇದೆ ಎಂಬುದನ್ನು 2018ರಲ್ಲಿ ಘೋಷಿಸಿಕೊಂಡಿದೆ. ನೆಲದಿಂದ ದಾಳಿ ಮಾಡಲು ಭಾರತವು ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳನ್ನು ಹೊಂದಿದ್ದರೆ, ಮಿರಾಜ್‌–2000 ಮತ್ತು ಜಾಗ್ವಾರ್‌ಗಳು ಗಾಳಿಯಿಂದ ಅಣುಬಾಂಬ್‌ಗಳನ್ನು ಬೀಳಿಸುವ ಸಾಮರ್ಥ್ಯವನ್ನು ಹೊಂದಿವೆ.

ಭಾರತ ಮತ್ತು ಪಾಕಿಸ್ತಾನ ತಮ್ಮ ಅಣ್ವಸ್ತ್ರಗಳ ಸಂಗ್ರಹದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಆದರೆ ಕ್ಷಿಪಣಿ ಪರೀಕ್ಷೆಯ ಬಗ್ಗೆ ಕೆಲವು ಮಾಹಿತಿಗಳನ್ನು ನೀಡುತ್ತವೆ. ಇನ್ನೊಂದೆಡೆ ಅಮೆರಿಕ, ಬ್ರಿಟನ್‌ನಂಥ ರಾಷ್ಟ್ರಗಳು ತಮ್ಮ ಅಣ್ವಸ್ತ್ರ ಸಂಗ್ರಹದ ಬಗ್ಗೆ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿವೆ ಎಂದು ಎಸ್‌ಐಪಿಆರ್‌ಐ ವರದಿ ಹೇಳಿದೆ.

ಎಸ್‌ಐಪಿಆರ್‌ಐ ವರದಿಯ ಪ್ರಕಾರ, ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಭಾರತವೂ ಒಂದು. 2018ರಲ್ಲಿ ಶಸ್ತ್ರಾಸ್ತ್ರ ಖರೀದಿಗಾಗಿ ಅತಿ ಹೆಚ್ಚು ಹಣ ವೆಚ್ಚ ಮಾಡಿದ ರಾಷ್ಟ್ರಗಳಲ್ಲಿ ಅಮೆರಿಕ, ಚೀನಾ, ಸೌದಿಅರೇಬಿಯಾ, ಭಾರತ ಹಾಗೂ ಫ್ರಾನ್ಸ್‌ ಮುಂಚೂಣಿಯಲ್ಲಿವೆ. ಜಾಗತಿಕ ಮಟ್ಟದಲ್ಲಿ ಸೇನೆಗಾಗಿ ಮಾಡುವ ಒಟ್ಟಾರೆ ವೆಚ್ಚದ ಶೇ 60ರಷ್ಟನ್ನು ಈ ರಾಷ್ಟ್ರಗಳೇ ಮಾಡುತ್ತಿವೆ ಎಂದು ವರದಿ ಹೇಳಿದೆ.

ಶಸ್ತ್ರಾಸ್ತ್ರ ಖರೀದಿಗಾಗಿಯೇ ಅತಿ ಹೆಚ್ಚು ವೆಚ್ಚ ಮಾಡುವ ವಿಶ್ವದ ಮೂರು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಸೌದಿಅರೇಬಿಯಾ, ಭಾರತ, ಈಜಿಪ್ಟ್‌, ಆಸ್ಟ್ರೆಲಿಯಾ ಹಾಗೂ ಅಲ್ಜೀರಿಯಾ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿದ ಐದು ರಾಷ್ಟ್ರಗಳಾಗಿವೆ. ಒಟ್ಟಾರೆ ಶಸ್ತ್ರಾಸ್ತ್ರ ಆಮದಿನ ಶೇ 35ರಷ್ಟನ್ನು ಈ ಐದು ರಾಷ್ಟ್ರಗಳು ಮಾಡುತ್ತವೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT