ಮಕ್ಕಳ ಕಳ್ಳಸಾಗಣೆ ವಿರೋಧಿ ಮಸೂದೆ: ನೇತಾರರು ಮತ್ತೆ ವೈಫಲ್ಯ - ಕೈಲಾಸ್‌ ಸತ್ಯಾರ್ಥಿ

7

ಮಕ್ಕಳ ಕಳ್ಳಸಾಗಣೆ ವಿರೋಧಿ ಮಸೂದೆ: ನೇತಾರರು ಮತ್ತೆ ವೈಫಲ್ಯ - ಕೈಲಾಸ್‌ ಸತ್ಯಾರ್ಥಿ

Published:
Updated:
Prajavani

ನವದೆಹಲಿ: ದೇಶದಲ್ಲಿ ಜಾನುವಾರುಗಳ ಬೆಲೆಗಿಂತಲೂ ಅಗ್ಗದ ಬೆಲೆಗೆ ಲಕ್ಷಾಂತರ ಮಕ್ಕಳ ಮಾರಾಟ ನಡೆಯುತ್ತಿದ್ದರೂ ರಾಜ್ಯಸಭೆಯಲ್ಲಿ ಮಕ್ಕಳ ಕಳ್ಳಸಾಗಣೆ ತಡೆ ಮಸೂದೆ ಬಗ್ಗೆ ಚರ್ಚಿಸಲು ರಾಜಕೀಯ ನೇತಾರರು ಮತ್ತೆ ವಿಫಲರಾಗಿದ್ದಾರೆ ಎಂದು ನೊಬಲ್‌ ಪ್ರಶಸ್ತಿ ಪುರಸ್ಕೃತ ಕೈಲಾಸ್‌ ಸತ್ಯಾರ್ಥಿ ಟೀಕಿಸಿದ್ದಾರೆ.

ಮಕ್ಕಳು ರಾಜಕೀಯದಲ್ಲಿ ಇನ್ನೂ ಆದ್ಯತೆಯಾಗಿಲ್ಲ ಎನ್ನುವುದನ್ನು ರಾಜಕಾರಣಿಗಳು ಮತ್ತೆ ಸಾಬೀತುಪಡಿಸಿದ್ದಾರೆ. ಇದೊಂದು ನೋವಿನ ಸಂಗತಿ ಎಂದು ಅವರು ಗುರುವಾರ ಹೇಳಿದ್ದಾರೆ.

ರಾಜ್ಯಸಭಾ ಕಲಾಪದಲ್ಲಿ ಈ ಬಾರಿ ಮಕ್ಕಳ ಕಳ್ಳಸಾಗಣೆ ತಡೆ ಮಸೂದೆ ಚರ್ಚೆಗೆ ಬಾರದಿರುವ ಬಗ್ಗೆ ಸತ್ಯಾರ್ಥಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಸರ್ಕಾರೇತರ ಸಂಸ್ಥೆಯಾದ ಬಚಪನ್‌ ಬಚಾವೊ ಆಂದೋಲನ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಲಾಲ್‌ ಬಹದ್ದೂರ್‌ ಶಾಸ್ತ್ರಿ ಸ್ಮರಣಾರ್ಥ 25ನೇ ಉಪನ್ಯಾಸದಲ್ಲಿ ‘ಸುರಕ್ಷಿತ ಬಾಲ್ಯ, ಸುರಕ್ಷಿತ ಭಾರತ’ ವಿಷಯ ಕುರಿತು ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ.

‘ದೇಶದಲ್ಲಿ ಲಕ್ಷಾಂತರ ಸಂಖ್ಯೆಯ ಬಾಲಕಿಯರು, ಬಾಲಕರು ಜಾನುವಾರುಗಳ ಬೆಲೆಗಿಂತಲೂ ಅಗ್ಗದ ಬೆಲೆಗೆ ಖರೀದಿ ಮತ್ತು ಮಾರಾಟ ಆಗುತ್ತಿದ್ದರೂ ಅದನ್ನು ತಡೆಯಲು ರಾಜಕೀಯ ವರ್ಗ ವಿಫಲವಾಗಿದೆ. ಸಂತ್ರಸ್ತ ಮಕ್ಕಳು ಈ ಬಾರಿಯಾದರೂ ಕಳ್ಳಸಾಗಣೆ ತಡೆ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗುವ ಮೂಲಕ ನಮ್ಮನ್ನು ಪಾರುಮಾಡಲಾಗುತ್ತದೆ ಎನ್ನುವ ನಿರೀಕ್ಷೆ ಹೊಂದಿದ್ದರು. ಆದರೆ, ಈಗ ಅವರೆಲ್ಲರ ನಿರೀಕ್ಷೆ ಹುಸಿಯಾಗಿದೆ’ ಎಂದರು.

‘ಅಮಾಯಕ ಮಕ್ಕಳ ಬಾಲ್ಯವನ್ನು ಹಾಳುಮಾಡುತ್ತಿರುವ ಇಂತಹ ದೊಡ್ಡ ಸಮಸ್ಯೆಗಳ ಬಗ್ಗೆ ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಕಾಳಜಿ ಇಲ್ಲ. ಘೋಷಣೆ ಮತ್ತು ವಾಕ್ಚಾತುರ್ಯ ನ್ಯಾಯ ನೀಡುವುದಿಲ್ಲ ಮತ್ತು ಸಮಾಜವನ್ನು ಪರಿವರ್ತಿಸುವುದಿಲ್ಲ. ಪ್ರಜಾಪ್ರಭುತ್ವದ ದೇವಾಲಯ ಎನಿಸಿದ ಸಂಸತ್ತನ್ನು ಕೆಲವು ದಿನಗಳಿಂದ ರಾಜಕೀಯ ಮತ್ತು ಚುನಾವಣಾ ಲಾಭಗಳಿಗೆ ಬಳಸಿಕೊಳ್ಳುತ್ತಿರುವುದನ್ನು ಎಲ್ಲರೂ ನೋಡುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ಮಕ್ಕಳ ಸುರಕ್ಷತೆ, ಶಿಕ್ಷಣ ಮತ್ತು ಯೋಗಕ್ಷೇಮದ ಕುರಿತು ಇರುವ ಸಮಸ್ಯೆ ಹಾಗೂ ಸವಾಲುಗಳ ಕುರಿತು ಚರ್ಚಿಸಲು ಸಂಸತ್‌ನಲ್ಲಿ ಒಂದು ಇಡೀ ದಿನವನ್ನು ಮೀಸಲಿಡಲು ಎಲ್ಲ ರಾಜಕೀಯ ಪಕ್ಷಗಳು ಮುಂದೆ ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಾನವ ಕಳ್ಳಸಾಗಣೆ ತಡೆ (ಮುಂಜಾಗ್ರತೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆ 2018 ರಾಜ್ಯಸಭೆಯ ಚಳಿಗಾಲದ ಅಧಿವೇಶನದ ಪಟ್ಟಿಯಲ್ಲಿತ್ತು. ಆದರೆ, ಈ ಮಸೂದೆ ಬಗ್ಗೆ ಚರ್ಚೆ ನಡೆಯಲಿಲ್ಲ ಅಥವಾ ಅಂಗೀಕಾರವೂ ಆಗಿಲ್ಲ. ಹಿಂದಿನ ವರ್ಷದ ಜುಲೈನಲ್ಲಿ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಿ, ಅಂಗೀಕಾರ ಪಡೆದಿದೆ.

*
ಮಕ್ಕಳ ಸುರಕ್ಷತೆ, ಶಿಕ್ಷಣ, ಯೋಗಕ್ಷೇಮದ ಬಗ್ಗೆ ಇರುವ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಚರ್ಚಿಸಲು ಸಂಸತ್‌ನಲ್ಲಿ ಒಂದು ಇಡೀ ದಿನ ಮೀಸಲಿಡಬೇಕು
-ಕೈಲಾಶ್‌ ಸತ್ಯಾರ್ಥಿ, ನೊಬೆಲ್‌ ಪ್ರಶಸ್ತಿ ಪುರಸ್ಕೃತ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !