ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರೊಂದಿಗೆ ಅಭ್ಯರ್ಥಿಗಳ ಮೆರವಣಿಗೆ

ಅಶೋಕ್‌ ಖೇಣಿ, ಸಿಂಧ್ಯ, ರಹೀಂಖಾನ್‌, ಮಾರಸಂದ್ರ ಮುನಿಯಪ್ಪ, ರಾಜಶೇಖರ ನಾಮಪತ್ರ ಸಲ್ಲಿಕೆ
Last Updated 24 ಏಪ್ರಿಲ್ 2018, 6:41 IST
ಅಕ್ಷರ ಗಾತ್ರ

ಬೀದರ್: ವಿಧಾನಸಭೆಗೆ ಆಯ್ಕೆ ಬಯಸಿ ಬೀದರ್ ಹಾಗೂ ಭಾಲ್ಕಿ ಕ್ಷೇತ್ರದಿಂದ ತಲಾ ಐವರು, ಬಸವಕಲ್ಯಾಣದಿಂದ ಮೂವರು, ಬೀದರ್‌ ದಕ್ಷಿಣ, ಹುಮನಾಬಾದ್‌ ಹಾಗೂ ಔರಾದ್ ಕ್ಷೇತ್ರದಿಂದ ತಲಾ ಒಬ್ಬರು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಬೀದರ್‌ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಅಶೋಕ ಖೇಣಿ, ಬೀದರ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ರಹೀಂ ಖಾನ್‌, ಬಿಎಸ್‌ಪಿ ಅಭ್ಯರ್ಥಿ ಮಾರಸಂದ್ರ ಮುನಿಯಪ್ಪ, ಎನ್‌ಡಿಎಫ್‌ನಿಂದ ಖಯಾಮೊದ್ದಿನ್‌, ಪಕ್ಷೇತರ ಅಭ್ಯರ್ಥಿಗಳಾಗಿ ಅಬ್ದುಲ್‌ ರಜಾಕ್, ಅನಿಲಕುಮಾರ ಉಮೇದುವಾರಿಕೆ ದಾಖಲು ಮಾಡಿದರು.

ಬಸವಕಲ್ಯಾಣದಿಂದ ಜೆಡಿಎಸ್‌ ಅಭ್ಯರ್ಥಿ ಪಿ.ಜಿ.ಆರ್. ಸಿಂಧ್ಯ, ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ, ಆಮ್‌ ಆದ್ಮಿ ಪಾರ್ಟಿಯ ದೀಪಕ ಮಾಲಗಾರ, ಹುಮನಾಬಾದ್‌ನಿಂದ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಪಾಟೀಲ, ಭಾಲ್ಕಿಯಿಂದ ಬಿಜೆಪಿ ಅಭ್ಯರ್ಥಿ ಡಿ.ಕೆ.ಸಿದ್ರಾಮ, ಜೆಡಿಎಸ್‌ ಅಭ್ಯರ್ಥಿ ಪ್ರಕಾಶ ಖಂಡ್ರೆ, ವೆಂಕಟರಾವ್‌ ಬಿರಾದಾರ, ಔರಾದ್‌ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಧನಂಜಯ್ ನಾಮಪತ್ರ ಸಲ್ಲಿಸಿದರು.

ಅಶೋಕ ಖೇಣಿ:
ಬೀದರ್‌ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಅಶೋಕ ಖೇಣಿ ಅವರು ಬೊಮ್ಮಗೊಂಡೇಶ್ವರ ವೃತ್ತದಿಂದ ಮೆರವಣಿಗೆಯಲ್ಲಿ ಬಸವೇಶ್ವರ ವೃತ್ತಕ್ಕೆ ಬಂದು ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಅಲ್ಲಿಂದ ತಹಶೀಲ್ದಾರ್ ಕಚೇರಿಗೆ ಬಂದು ಚುನಾವಣೆ ಅಧಿಕಾರಿ ಮನೋಹರ ಅವರಿಗೆ ನಾಮಪತ್ರ ಸಲ್ಲಿಸಿದರು.

ನಂತರ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಆಶೋಕ ಖೇಣಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಪರ ಆಡಳಿತ ಮೆಚ್ಚಿ ಕಾಂಗ್ರೆಸ್ ಸೇರಿದ್ದೇನೆ. ಈಗ ಅದೇ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದೇನೆ. ಕ್ಷೇತ್ರದಲ್ಲಿ ಹಾಳಾಗಿದ್ದ ಬಹುತೇಕ ರಸ್ತೆಗಳನ್ನು ದುರಸ್ತಿಪಡಿಸಲಾಗಿದೆ. ಹೊಸ ರಸ್ತೆಗಳನ್ನೂ ನಿರ್ಮಾಣ ಮಾಡಲಾಗಿದೆ. ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಅಭಿವೃದ್ಧಿಯೇ ಈ ಚುನಾವಣೆಯಲ್ಲಿ ನನ್ನ ಕೈ ಹಿಡಿಯಲಿದೆ’ ಎಂದು ಹೇಳಿದರು.

ರಹೀಂಖಾನ್‌: ಕಾಂಗ್ರೆಸ್‌ ಅಭ್ಯರ್ಥಿ ರಹೀಂ ಖಾನ್‌ ನಗರದ ಓಲ್ಡ್‌ಸಿಟಿಯ ಚೌಬಾರಾದಿಂದ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಪಕ್ಷದ ಧ್ವಜ ಹಿಡಿದುಕೊಂಡಿದ್ದ ಕಾರ್ಯಕರ್ತರು ರಹೀಂ ಪರವಾಗಿ ಘೋಷಣೆಗಳನ್ನು ಕೂಗಿದರು. ಮಹಿಳೆಯರೂ ಮೆರವಣಿಗೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಮೆರವಣಿಗೆಯಲ್ಲಿ ಬುರ್‌ಬುರ್‌ ಪೋಚಮ್ಮ ತಂಡದವರು ಹಾಗೂ ಡೊಳ್ಳು ವಾದಕರು ಡೊಳ್ಳು ಬಾರಿಸಿ ಗಮನ ಸೆಳೆದರು. ಅಂಬೇಡ್ಕರ್ ವೃತ್ತದಲ್ಲಿ ರಹೀಂ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮುಖಂಡರಾದ ಅಯಾಜ್‌ಖಾನ್‌, ಇರ್ಷಾದ್ ಪೈಲ್ವಾನ್‌, ಅಮೃತ ಚಿಮಕೋಡ್, ಪಂಡಿತರಾವ್‌ ಇದ್ದರು.

‘ನಗರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ರಸ್ತೆಗಳು ಡಾಂಬರೀಕರಣಗೊಂಡಿವೆ. ಬ್ರಿಮ್ಸ್‌ ಬಹುಮಹಡಿ ಕಟ್ಟಡ ನಿರ್ಮಿಸ ಲಾಗಿದೆ. 100 ಹಾಸಿಗೆಗಳ ಮಕ್ಕಳ ಆಸ್ಪತ್ರೆಯ ಕಟ್ಟಡ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ₹1,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ನೋಡಿರುವ ಮತದಾರರು ಸಹಜವಾಗಿಯೇ ನನ್ನ ಪರ ಮತ ಹಾಕಲಿದ್ದಾರೆ’ ಎಂದು ರಹೀಂ ಖಾನ್ ವಿಶ್ವಾಸ ವ್ಯಕ್ತಪಡಿಸಿದರು.

ಮಾರಸಂದ್ರ ಮುನಿಯಪ್ಪ:
ಮಾರಸಂದ್ರ ಮುನಿಯಪ್ಪ ಅವರು ಮಂಗಲಪೇಟೆಯಿಂದ ಬಿಎಸ್‌ಪಿ ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಬಿಎಸ್‌ಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ತಮ್ಮ ಪಕ್ಷದ ಧ್ವಜಗಳನ್ನು ಹಿಡಿದು ಮುನಿಯಪ್ಪ ಪರವಾಗಿ ಘೋಷಣೆಗಳನ್ನು ಕೂಗಿದರು. ನಂತರ ಮುನಿಯಪ್ಪ ಅವರು ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಜೆಡಿಎಸ್‌್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಇದ್ದರು.

ಬಿಗಿ ಬಂದೋಬಸ್ತ್‌

ಬೀದರ್‌ ಕ್ಷೇತ್ರದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬಂದಾಗ ಕಾರ್ಯಕರ್ತರನ್ನು ನಿಯಂತ್ರಿಸುವುದು ಕಷ್ಟವಾಗಿತ್ತು. ಭದ್ರತಾ ಪಡೆ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಕೆಲವರು ಜಿಲ್ಲಾಧಿಕಾರಿ ಕಚೇರಿಯೊಳಗೆ ಬಂದಿದ್ದರು. ಪೊಲೀಸರು ಅವರನ್ನು ಹೊರಗೆ ಹಾಕಲು ಹರಸಾಹಸ ಮಾಡಬೇಯಿತು. ಹೀಗಾಗಿ ಸೋಮವಾರ ಬಂದೋಬಸ್ತ್‌ ಬಿಗಿಗೊಳಿಸಲಾಗಿತ್ತು.

ಅಭ್ಯರ್ಥಿಯ ಜತೆಗೆ ಐವರು ಸೂಚಕರಿಗೆ ಮಾತ್ರ ಪ್ರವೇಶ ನೀಡಲಾಯಿತು. ಮಾಧ್ಯಮ ಪ್ರತಿನಿಧಿಗಳಿಗೂ ಒಳಗೆ ಪ್ರವೇಶ ನೀಡಲಿಲ್ಲ. ನಾಮಪತ್ರ ಸಲ್ಲಿಕೆಯ ನಂತರ ಮಧ್ಯಾಹ್ನ 3 ಗಂಟೆಗೆ ಅಭ್ಯರ್ಥಿಗಳ ಆಸ್ತಿ ವಿವರದ ಅಫಿಡೆವಿಟ್‌ ನೋಟಿಸ್‌ ಬೋರ್ಡ್‌ಗೆ ಅಳವಡಿಸಬೇಕು. ಆದರೆ ಕೆಲ ಅಭ್ಯರ್ಥಿಗಳ ಅಫಿಡೆವಿಟ್‌ ಹಾಕಿರಲಿಲ್ಲ. ಜಿಲ್ಲಾ ಚುನಾವಣಾ ಅಧಿಕಾರಿ ಅನಿರುದ್ಧ ಶ್ರವಣ್‌ ಭಾನುವಾರ ಸಂಜೆ ಅಧಿಕಾರಿಗಳ ಸಭೆ ನಡೆಸಿ ಎಚ್ಚರಿಕೆ ನೀಡಿದರು. ಮಧ್ಯಾಹ್ನ 3 ಗಂಟೆ ನಂತರ ಕಡ್ಡಾಯವಾಗಿ ಅಭ್ಯರ್ಥಿಗಳ ಅಫಿಡೆವಿಟ್‌ ನೋಟಿಸ್ ಬೋರ್ಡ್‌ಗೆ ಹಾಕಬೇಕು ಎಂದು ತಾಕೀತು ಮಾಡಿದ್ದರು.

ಚುನಾವಣೆ ಜಾತ್ರೆ

ಅಭ್ಯರ್ಥಿಗಳ ಮೆರವಣಿಗೆ ನೋಡಲು ಜನ ಭಾರಿ ಸಂಖ್ಯೆಯಲ್ಲಿ ಬಂದಿದ್ದರು. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯ ಬೆಂಬಲಿಗರು ಹಾಗೂ ಮಹಿಳೆ ಯರು ತಮ್ಮ ಮಕ್ಕಳೊಂದಿಗೆ ಬಂದಿದ್ದರು. ಬಿಸಿಲಿನ ಧಗೆ ತಾಳಲಾಗದೆ ಮರಗಳ ಕೆಳಗೆ ಆಶ್ರಯ ಪಡೆದುಕೊಂಡಿದ್ದರು. ಕೆಲ ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜನರು ಅಲ್ಲಿಗೆ ಬಂದು ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿದ್ದರು. ಕಲ್ಲಂಗಡಿ, ಸೌತೆಕಾಯಿ, ಐಸ್‌ಕ್ರಿಮ್, ಮಜ್ಜಿಗೆ ವ್ಯಾಪಾರ ಜೋರಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT