ಸುಪ್ರೀಂಕೋರ್ಟ್‌: ಎಂಟನೇ ಮಹಿಳಾ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ ನೇಮಕ

7

ಸುಪ್ರೀಂಕೋರ್ಟ್‌: ಎಂಟನೇ ಮಹಿಳಾ ನ್ಯಾಯಮೂರ್ತಿಯಾಗಿ ಇಂದಿರಾ ಬ್ಯಾನರ್ಜಿ ನೇಮಕ

Published:
Updated:

ನವದೆಹಲಿ: ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರನ್ನು ಸುಪ್ರೀಕೊರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್‌ನಲ್ಲಿರುವ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಮೂರಕ್ಕೇರಿದೆ.

1950ರಿಂದ ಅಸ್ತಿತ್ವದಲ್ಲಿರುವ ಸುಪ್ರೀಂಕೊರ್ಟ್‌ನಲ್ಲಿ ಏಕಕಾಲದಲ್ಲಿ ಮೂವರು ಮಹಿಳಾ ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿರುವುದು ಇದೇ ಮೊದಲು. ಆರ್‌. ಭಾನುಮತಿ ಹಾಗೂ ಇಂದು ಮಲ್ಹೋತ್ರಾ ಅವರು ಈಗಾಗಲೇ ಕರ್ತವ್ಯದಲ್ಲಿದ್ದಾರೆ.

ಜೊತೆಗೆ ಫಾತಿಮಾ ಬೀವಿ, ಸುಜಾತಾ ವಿ. ಮನೋಹರ್‌, ರುಮಾ ಪಾಲ್‌, ಗ್ಯಾನ್‌ ಸುಧಾ ಮಿಶ್ರಾ, ರಂಜಾನಾ ಪ್ರಕಾಶ್‌ ದೇಸಾಯಿ, ಬಾನುಮತಿ ಮತ್ತು ಮಲ್ಹೋತ್ರಾ ಅವರ ನಂತರ ‘ಸುಪ್ರೀಂ’ಗೆ ನೇಮಕವಾದ ಎಂಟನೇ ಮಹಿಳಾ ನ್ಯಾಯಮೂರ್ತಿ ಎನಿಸಿದ್ದಾರೆ.

ಬ್ಯಾನರ್ಜಿ(60) ಅವರು, ಸೆಪ್ಟೆಂಬರ್‌ 24, 1957ರಲ್ಲಿ ಕೊಲ್ಕತ್ತಾದಲ್ಲಿ ಜನಿಸಿದ್ದರು. ಲೊರೆಟೋ ಹೌಸ್‌ನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ, ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಮುಗಿಸಿರುವ ಇವರು ಕಾನೂನು ಪದವಿ ಪಡೆದದ್ದು ಕಲ್ಕತ್ತಾ ವಿಶ್ವ ವಿದ್ಯಾನಿಲಯದಲ್ಲಿ.

ಕಲ್ಕತ್ತಾ ಹೈಕೋರ್ಟ್‌ನಲ್ಲಿ 1985ರಲ್ಲಿ ವಕೀಲೆಯಾಗಿ ಅಭ್ಯಾಸ ಆರಂಭಿಸಿದರು. ಏಪ್ರಿಲ್‌ 05, 2017 ಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು.

ಆ ಮೂಲಕ ಮದ್ರಾಸ್‌ ಹೈಕೋರ್ಟ್‌ಗೆ ನೇಮಕವಾದ ಎರಡನೇ ಮಹಿಳಾ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು. ಹಿಂದೆ ಕಾಂತಾ ಕುಮಾರಿ ಭಟ್ನಾಕರ್‌ ಅವರು ಕಾರ್ಯನಿರ್ವಹಿಸಿದ್ದರು.

ಬ್ಯಾನರ್ಜಿ ಹೆಸರನ್ನು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಜುಲೈ 16ರಂದು ಕೊಲಿಜಿಯಂ ಶಿಫಾರಸು ಮಾಡಿತ್ತು. 15 ದಿನಗಳ ನಂತರ ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ಸೂಚಿಸಿದೆ.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !