ಗುರುವಾರ , ಡಿಸೆಂಬರ್ 5, 2019
21 °C
ಸಿಇಒ ಪಾರೇಖ್‌ ವಿರುದ್ಧ ಅನಾಮಧೇಯ ದೂರುದಾರನ ಗಂಭೀರ ಆರೋಪ

ಇನ್ಫೊಸಿಸ್‌ ಸಿಇಒ ವಿರುದ್ಧ ಹಣದ ದುರ್ಬಳಕೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಐ.ಟಿ ಕ್ಷೇತ್ರದ ದೈತ್ಯ ಸಂಸ್ಥೆ ಇನ್ಫೊಸಿಸ್‌ನ ಸಿಇಒ ಸಲೀಲ್‌ ಪಾರೇಖ್‌ ಅವರ ವಿರುದ್ಧ ಕಂಪನಿಯ ಅನಾಮಧೇಯ ನೌಕರರೊಬ್ಬರು ಗಂಭೀರ ಸ್ವರೂಪದ ಹೊಸ ಆರೋಪಗಳನ್ನು ಮಾಡಿರುವುದು ಸೋಮವಾರ ಬೆಳಕಿಗೆ ಬಂದಿದೆ.

ತಾನು ಕಂಪನಿಯ ಹಣಕಾಸು ವಿಭಾಗದಲ್ಲಿ ಕೆಲಸ ಮಾಡುವ ನೌಕರನೆಂದು ಹೇಳಿಕೊಂಡಿರುವ ಅನಾಮಧೇಯ, ನಿರ್ದೇಶಕ ಮಂಡಳಿಯ ಸ್ವತಂತ್ರ ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಪಾರೇಖ್‌ ಅವರೊಬ್ಬ ವೃತ್ತಿಪರತೆಯನ್ನು ಗಾಳಿಗೆ ತೂರಿರುವ ಕಾರ್ಪೊರೇಟ್‌ ಕಳ್ಳ ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ. ಅವರ ವಿರುದ್ಧದ ಆರೋಪಗಳ ಬಗ್ಗೆ ನಿರ್ದೇಶಕ ಮಂಡಳಿಯು ನಿಷ್ಪಕ್ಷಪಾತದ ತನಿಖೆ ನಡೆಸಿ ಕಂಪನಿಯ ಉದ್ಯೋಗಿಗಳು ಮತ್ತು ಷೇರುದಾರರ ಹಿತಕಾಪಾಡಲಿದೆ ಎಂದು ಆಶಿಸಿದ್ದಾರೆ.

‘ಕಾರ್ಪೊರೇಟ್‌ ಕಳ್ಳ ಈಗ ಕಂಪನಿಯ ಒಳಗೆ ಪ್ರವೇಶ ಪಡೆದಿದ್ದು, ಕಂಪನಿಯ ಹಣ ಲೂಟಿ ಮಾಡುತ್ತಿದ್ದಾನೆ. ವೈಯಕ್ತಿಕ ಲಾಭಕ್ಕಾಗಿ ಉನ್ನತ ಹುದ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ. ನಿರ್ದೇಶಕ ಮಂಡಳಿಯು ಇಂತಹ ಕೃತ್ಯಗಳ ಬಗ್ಗೆ ತನಿಖೆ ಆರಂಭಿಸಿ, ಸ್ಥಾ‍ಪಕರು ಪಾಲಿಸುತ್ತಿದ್ದ ಮತ್ತು ಕಂಪನಿಯು ಪಾಲಿಸಿಕೊಂಡು ಬಂದಿರುವ ಕಾರ್ಪೊರೇಟ್‌ ಆಡಳಿತದ ಮೌಲ್ಯಗಳನ್ನು ಎತ್ತಿ ಹಿಡಿಯಲಿದೆ ಎಂದು ಅವರು ಆಶಿಸಿದ್ದಾರೆ.

ಸಿಇಒ ಆಯ್ಕೆಗೆ ವಿಧಿಸಿದ್ದ ಬೆಂಗಳೂರಿನಲ್ಲಿ ನೆಲೆಸಬೇಕೆಂಬ ನಿಬಂಧನೆ ಉಲ್ಲಂಘಿಸಿರುವ ಪಾರೇಖ್ ಅವರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ತಿಂಗಳಿಗೆ ಎರಡು ಬಾರಿ ಮುಂಬೈನಿಂದ ಹಾರಿ ಬರುವ ಅವರಿಗೆ ಪ್ರಯಾಣ ಮತ್ತಿತರ ಭತ್ಯೆಗೆ ಪ್ರತಿ ತಿಂಗಳೂ  ಕಂಪನಿಯು ಅಂದಾಜು ₹ 22 ಲಕ್ಷ ವೆಚ್ಚ ಮಾಡುತ್ತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಕಂಪನಿಯ ಪ್ರತಿಯೊಬ್ಬ ಸಿಬ್ಬಂದಿ ಕಚೇರಿಗೆ ಬಂದು ಹೋಗಲು ಒದಗಿಸುವ ಸಾರಿಗೆ ಸೌಲಭ್ಯದ ವೆಚ್ಚ ಭರಿಸುತ್ತಾರೆ. ಸಲೀಲ್‌ ಅವರಿಂದಲೂ ಇದೇ ಬಗೆಯಲ್ಲಿ ವೆಚ್ಚ ಮರುಪಾವತಿಸಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಲು ಅಪಾರ್ಟ್‌ಮೆಂಟ್‌ ಖರೀದಿಸಿರುವ ಸಿಇಒ ಧೋರಣೆ ಆಡಳಿತ ಮಂಡಳಿಗೆ ಮಣ್ಣೆರಚುವ ತಂತ್ರವಾಗಿದೆ. ಬೆಂಗಳೂರಿಗೆ ಬಂದಾಗಲ್ಲೆಲ್ಲ ಕೆಲ ಗಂಟೆಗಳ ಕಾಲ ಮಾತ್ರ ಸಂಸ್ಥೆಯಲ್ಲಿದ್ದು ಮುಂಬೈಗೆ ಮರಳುತ್ತಾರೆ. ಇದರಿಂದ ಪ್ರೇರಣೆಗೊಂಡಿರುವ ಅನೇಕರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಅವರನ್ನು ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ.

ಹಲವಾರು ಸಣ್ಣ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿರುವ ಪಾರೇಖ್‌, ತಮ್ಮ ಈ ಷೇರು ವಹಿವಾಟು ನಿರ್ವಹಿಸಲು ಮುಂಬೈನಲ್ಲೇ ನೆಲೆಸಿದ್ದಾರೆ. ತಮ್ಮ ಗ್ರೀನ್‌ ಕಾರ್ಡ್‌ ಉಳಿಸಿಕೊಳ್ಳಲು ಪ್ರತಿ ತಿಂಗಳೂ ಅಮೆರಿಕೆಗೆ ಭೇಟಿ ನೀಡುತ್ತಾರೆ. ಈ ಬಗ್ಗೆಯೂ ಆಡಳಿತ ಮಂಡಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇದುವರೆಗೂ ಅವರು ಕಂಪನಿಯ ಯಾವುದೇ ಗ್ರಾಹಕನನ್ನು ಭೇಟಿಯಾದ ನಿದರ್ಶನಗಳಿಲ್ಲ.

ತಮ್ಮ ಮಕ್ಕಳಿಗೆ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಕಲ್ಪಿಸಲು ಕಂಪನಿಯಿಂದ ಅವುಗಳಿಗೆ ಹಣಕಾಸು ನೆರವು ನೀಡುವ ಭರವಸೆ ನೀಡಿರುವುದೂ ತನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ತಮ್ಮ ಕಾರ್ಯಕ್ಷಮತೆಗೆ ಶೇ 108ರಷ್ಟು ಬೋನಸ್‌ ಪಡೆದಿದ್ದಾರೆ. ಕಂಪನಿಯ ಏಳಿಗೆಗೆ ಬೆವರು ಸುರಿಸಿದವರಿಗೆ ಜುಲೈ / ಆಗಸ್ಟ್‌ನಲ್ಲಿ ಶೇ 70ರಿಂದ ಶೇ 90ರಷ್ಟು ಮಾತ್ರ ಬೋನಸ್‌ ನೀಡಲಾಗಿದೆ.

ಅವರೊಬ್ಬ ಸುಳ್ಳುಗಾರ. ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿ ಕಟ್ಟುತ್ತಾರೆ. ಅವರೆಂದೂ ತಮ್ಮ ನಿರ್ಧಾರಗಳನ್ನು ಲಿಖಿತ ರೂಪದಲ್ಲಿ ದಾಖಲಿಸುವುದಿಲ್ಲ. ನಿರ್ದೇಶಕ ಮಂಡಳಿಯ ಸಭೆಗಿಂತ ಮುಂಚಿನ ಯಾವುದೇ ಸಭೆಗಳಲ್ಲೂ  ಯಾವತ್ತೂ ಭಾಗಿಯಾಗಿಲ್ಲ.

‘ಇದೆಲ್ಲ ಕಂಡು ನನಗೆ ಅಚ್ಚರಿಯಾಗುತ್ತಿದೆ. ಕಂಪನಿಗೆ ಇಂತಹ ಸಿಇಒ ಬೇಕೆ ಎಂಬ ಅನುಮಾನವೂ ನನ್ನನ್ನು ಕಾಡುತ್ತದೆ. ವೃತ್ತಿಪರತೆ
ಯನ್ನೇ ಕಾಣದ ಇಂತವರು ಕಂಪನಿಗೆ ಬೇಕೆ’ ಎಂದೂ ಅವರು ಪ್ರಶ್ನಿಸಿದ್ದಾರೆ. ಸಹ ಸ್ಥಾಪಕರು ಕಂಪನಿಯನ್ನು ಮುನ್ನಡೆಸುತ್ತಿದ್ದಾಗ ಇಂತಹ ಯಾವುದೇ ಅಕೃತ್ಯಗಳು ಕಂಡು ಬಂದಿರಲಿಲ್ಲ ಎಂದು ಹೇಳಿದ್ದಾರೆ.

ಪತ್ರವನ್ನು ಷೇರುಪೇಟೆ ನಿಯಂತ್ರಣ ಮಂಡಳಿ, ಕಂಪನಿಯ ವ್ಯವಹಾರಗಳ ಕಾರ್ಯದರ್ಶಿ, ಸಹ ಸ್ಥಾಪಕ ಎನ್‌. ಆರ್‌. ನಾರಾಯಣಮೂರ್ತಿ ಮತ್ತು ಸ್ವತಂತ್ರ ನಿರ್ದೇಶಕಿ ಕಿರಣ್‌ ಮಜುಂದಾರ್‌ ಶಾ ಮತ್ತಿತರ ಗಮನಕ್ಕೆ ತಂದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು