ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕಿತರ ಮೇಲೆ ನಡೆದ ಪ್ಲಾಸ್ಮಾ ಚಿಕಿತ್ಸೆ ಫಲಿತಾಂಶ ಆಶಾದಾಯಕ: ಕೇಜ್ರಿವಾಲ್‌ 

Last Updated 24 ಏಪ್ರಿಲ್ 2020, 8:46 IST
ಅಕ್ಷರ ಗಾತ್ರ

ನವದೆಹಲಿ: ‘ನಾಲ್ವರು ಕೊರೊನಾ ವೈರಸ್‌ (ಕೋವಿಡ್‌–19) ಸೋಂಕಿತರ ಮೇಲೆ ನಡೆಸಲಾದ ಪ್ಲಾಸ್ಮಾ ಥೆರಪಿ ಪ್ರಯೋಗದ ಆರಂಭಿಕ ಫಲಿತಾಂಶಗಳು ಆಶಾದಾಯಕವಾಗಿವೆ. ಅಲ್ಲದೆ, ಪ್ರಯೋಗದ ಫಲಿತಾಂಶಗಳು ಸೋಂಕಿತರ ಪ್ರಾಣ ಉಳಿಸುವ ಭರವಸೆ ನೀಡಿವೆ,’ ಎಂದು ದೆಹಲಿಯ ಮುಖ್ಯಮಂತ್ರಿಅರವಿಂದ್ ಕೇಜ್ರಿವಾಲ್ ಶುಕ್ರವಾರ ಹೇಳಿದ್ದಾರೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾಧ್ಯಮಗಳನ್ನು ಉದ್ದೇಶಿ ಮಾತನಾಡಿದ ಕೇಜ್ರಿವಾಲ್, ‘ಮುಂದಿನ ಎರಡು-ಮೂರು ದಿನಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಸರ್ಕಾರ ಉದ್ದೇಶಿಸಿದೆ. ಅದರ ನಂತರ, ದೆಹಲಿಯ ಎಲ್ಲಾ ಕೋವಿಡ್‌ 19 ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವ ಕುರಿತು ಕೇಂದ್ರದ ಅನುಮತಿಯನ್ನು ಪಡೆಯಲಿದ್ದೇವೆ,’ ಎಂದು ಅವರು ಹೇಳಿದರು.

‘ಸೋಂಕಿನಿಂದ ಚೇತರಿಸಿಕೊಂಡಿರುವ ಎಲ್ಲರೂ ಮುಂದೆ ಬಂದು ರಕ್ತದಾನ ಮಾಡಿ ಎಂದು ಮನವಿ ಮಾಡಿದ ಕೇಜ್ರಿವಾಲ್‌, ಆ ಮೂಲಕ ಸೋಂಕಿತರನ್ನು ರಕ್ಷಿಸಲು ನೆರವಾಗಬೇಕು,’ ಎಂದು ಹೇಳಿದರು.

ಪ್ಲಾಸ್ಮಾ ಥೆರಪಿ ಎಂದರೇನು?

1. ಯಾವುದೇ ರೋಗದ ವಿರುದ್ಧ ಹೋರಾಡಲು ಮಾನವನ ದೇಹವು ರೋಗನಿರೊಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ. ರೋಗವನ್ನು ಉಂಟು ಮಾಡುವ ವೈರಾಣುಗಳ ವಿರುದ್ಧ ಹೋರಾಡಲು ದೇಹವು ಪ್ರತಿರೋಧಗಳನ್ನು ಬೆಳೆಸಿಕೊಂಡಿರುತ್ತವೆ. ಕೋವಿಡ್–19 ರೋಗದಿಂದ ಗುಣಮುಖರಾದವರ ದೇಹದಲ್ಲೂ ಇಂತಹ ಪ್ರತಿರೋಧ ಕಣಗಳು ಅಭಿವೃದ್ಧಿಯಾಗಿರುತ್ತವೆ. ಇವು ರಕ್ತದ ದುಗ್ಧರಸದಲ್ಲಿ (ರಕ್ತದಲ್ಲಿರುವ ಪಾರದರ್ಶಕ ದ್ರವ) ಇರುತ್ತವೆ.

2. ರೋಗದಿಂದ ಗುಣಮುಖರಾದವರ ದುಗ್ಧರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದುಕೊಂಡು, ರೋಗದಿಂದ ಬಳಲುತ್ತಿರುವ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಒಬ್ಬ ವ್ಯಕ್ತಿಯಿಂದ ಎರಡು ಡೋಸ್‌ನಷ್ಟು ಪ್ರತಿರೋಧ ಕಣಗಳನ್ನು ತೆಗೆಯಬಹುದಾಗಿದೆ. ಒಬ್ಬ ರೋಗಿಗೆ ಒಂದು ಡೋಸ್ ನೀಡಬೇಕಾಉತ್ತದೆ. ಹೀಗಾಗಿ ಇದನ್ನು ಇಬ್ಬರು ರೋಗಿಗಳಿಗೆ ನೀಡಬಹುದಾಗಿದೆ.

3. ಕೋವಿಡ್–19 ರೋಗದಿಂದ ಗುಣಮುಖರಾದವರ ದೇಹದಲ್ಲಿದ್ದಾಗ ಈ ಪ್ರತಿರೋಧ ಕಣಗಳು, ಕೊರೊನಾ ವೈರಾಣುಗಳ ಮೇಲೆ ದಾಳಿ ನಡೆಸುವ ಗುಣ ಬೆಳೆಸಿಕೊಂಡಿರುತ್ತವೆ. ದಾಳಿಯ ಗುಣವನ್ನು ಈ ಕಣಗಳು ಶಾಶ್ವತವಾಗಿ ಕಾಯ್ದುಕೊಳ್ಳುತ್ತವೆ. ಈಗ ರೋಗಪೀಡಿತ ದೇಹ ಸೇರಿದ ನಂತರವೂ ಈ ದಾಳಿಯನ್ನು ಅವು ಮುಂದುವರಿಸುತ್ತವೆ. ಹೊಸ ದೇಹದಲ್ಲಿ ಕೆಲವು ಕಾಲವಷ್ಟೇ ಈ ಪ್ರತಿರೋಧ ಕಣಗಳು ಸಕ್ರಿಯವಾಗಿರುತ್ತವೆ. ಅವು ನಿಷ್ಕ್ರಿಯವಾಗುವಷ್ಟರಲ್ಲಿ ದೇಹವು ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ. ಹೀಗಾಗಿ ರೋಗಿ ಗುಣಮುಖನಾಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT