ಬುಧವಾರ, ಆಗಸ್ಟ್ 21, 2019
27 °C

ಉದ್ದಿಮೆ ವೈಫಲ್ಯ ಅವಮಾನವಲ್ಲ: ದಿವಾಳಿ ಸಂಹಿತೆ ತಿದ್ದುಪಡಿ ಸಮರ್ಥಿಸಿಕೊಂಡ ನಿರ್ಮಲಾ

Published:
Updated:

ನವದೆಹಲಿ: ‘ಉದ್ದಿಮೆ ವಹಿವಾಟಿನಲ್ಲಿನ ವೈಫಲ್ಯವನ್ನು ಕೀಳಾಗಿ ಕಾಣ ಬಾರದು’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ಕೆಫೆ ಕಾಫಿ ಡೇ ಸ್ಥಾಪಕ ವಿ. ಜಿ. ಸಿದ್ಧಾರ್ಥ ಅವರ ಸಾವಿಗೆ ಪ್ರತಿಕ್ರಿಯಿಸುತ್ತಿದ್ದ ಅವರು, ‘ಉದ್ದಿಮೆದಾರರು ವಹಿವಾಟಿನಲ್ಲಿ ವೈಫಲ್ಯ ಕಂಡರೆ ಗೌರವಾನ್ವಿತ ರೀತಿಯಲ್ಲಿ ಹೊರ ನಡೆಯಬೇಕು. ದಿವಾಳಿ ಸಂಹಿತೆಯಡಿ (ಐಬಿಸಿ) ಪರಿಹಾರ ಕಂಡುಕೊಳ್ಳಬೇಕು. ವಹಿವಾಟು ವೈಫಲ್ಯವು ಕಳಂಕವೇನೂ ಅಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆ ಇಲಾಖೆಯು ತಮಗೆ ಕಿರುಕುಳ ನೀಡಿತ್ತು. ಸಾಲಗಾರರು ಮತ್ತು ಬ್ಯಾಂಕ್‌ಗಳು ಸಾಲ ಮರುಪಾವತಿಗೆ ಒತ್ತಾಯಿಸಿದ್ದವು ಎಂದು ಸಿದ್ಧಾರ್ಥ ಅವರು ಬರೆದಿರುವರು ಎನ್ನಲಾದ ಪತ್ರದಲ್ಲಿ ಆರೋಪಿಸಲಾಗಿದೆ. ಇಲಾಖೆಯು ಈ ಆರೋಪವನ್ನು ತಳ್ಳಿಹಾಕಿತ್ತು.

‘ಕುಂಠಿತ ಆರ್ಥಿಕತೆ ಅಥವಾ ವಹಿವಾಟಿನ ಏರಿಳಿತದಿಂದಾಗಿ  ಉದ್ದಿಮೆಗಳು ವಿಫಲಗೊಳ್ಳುತ್ತವೆ. ಸಾಲ ನೀಡುವ ಬ್ಯಾಂಕ್‌ಗಳ ವಿಶ್ವಾಸಾರ್ಹತೆಯನ್ನೂ ಪರಾಮರ್ಶೆಗೆ ಒಳಪಡಿಸಬೇಕಾಗಿದೆ’ ಎಂದು ಚರ್ಚೆಯಲ್ಲಿ ಭಾಗವಹಿಸಿದ್ದ ಟಿಡಿಪಿ ಸಂಸದ ಜಯದೇವ ಗಲ್ಲಾ ಹೇಳಿದರು. ಬ್ಯಾಂಕ್‌ಗಳಿಂದ ಸಾಲ ಪಡೆದವರು ಮರುಪಾವತಿ ಮಾಡಲೇಬೇಕು ಎಂದು ‘ಟಿಎಂಸಿ’ಯ ಕಲ್ಯಾಣ್‌ ಬ್ಯಾನರ್ಜಿ ಅಭಿಪ್ರಾಯಪಟ್ಟರು.

ನೀತಿ ಸಂಹಿತೆ ಸಮರ್ಥನೆ: ದಿವಾಳಿ ಸಂಹಿತೆಗೆ ತಿದ್ದುಪಡಿ ತಂದಿರುವುದು ಹೆಚ್ಚು ಸಕಾಲಿಕವಾಗಿದ್ದು, 330 ದಿನಗಳಲ್ಲಿ ಸಾಲ ಮರುಪಾವತಿ ಪ್ರಕ್ರಿಯೆ ಪೂರ್ಣಗೊಳಿಸಲು ನೆರವಾಗಲಿದೆ ಎಂದು ನಿರ್ಮಲಾ ಸಮರ್ಥಿಸಿ ಕೊಂಡಿದ್ದಾರೆ.

Post Comments (+)