ಶುಕ್ರವಾರ, ಫೆಬ್ರವರಿ 28, 2020
19 °C

ಇಂಟರ್‌ನೆಟ್ ಸೇವೆ: ಜಮ್ಮು–ಕಾಶ್ಮೀರದಲ್ಲಿ ತಪ್ಪದ ಪರದಾಟ

ಸಿದ್ದರಾಜು ಎಂ. Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿದ ಆರು ತಿಂಗಳು ನಂತರ 2ಜಿ ಇಂಟರ್‌ನೆಟ್‌ ಸೇವೆ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಆದರೂ, ಜನರು ಇಂಟರ್‌ನೆಟ್‌ಗಾಗಿ ಪರದಾಡುವುದು ತಪ್ಪಿಲ್ಲ.

ಕೇಂದ್ರಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ ಕೆಲ ನಿರ್ಬಂಧದ ನಡುವೆ ಜನವರಿ 25ರಿಂದ ಪೋಸ್ಟ್‌ಪೇಯ್ಡ್‌ , ಪ್ರೀಪೇಯ್ಡ್‌ ಮೊಬೈಲ್‌ ಹಾಗೂ ಸ್ಥಿರ ದೂರವಾಣಿ ಸಂಪರ್ಕಗಳಿಗೆ 2 ಜಿ ಇಂಟರ್‌ನೆಟ್‌ ಸೇವೆ ನೀಡಲಾಗಿದೆ. ಆದರೆ 2ಜಿ ಇಂಟರ್‌ನೆಟ್‌ನಿಂದ ಯಾವುದೇ ಸೇವೆ ಅಥವಾ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ.

ವೈದ್ಯರು, ಮಾಧ್ಯಮ ಪ್ರತಿನಿಧಿಗಳು, ವೃತ್ತಿಪರರು, ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ವರ್ತಕರು ಸೇರಿದಂತೆ ಜನಸಾಮಾನ್ಯರಿಗೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ.

ಜಮ್ಮು ಪ್ರಾಂತ್ಯದಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆ ಪುನರಾರಂಭ ಮಾಡಲಾಗಿದೆ. ಕಾಶ್ಮೀರ ಕಣಿವೆಯಲ್ಲಿ ಬ್ರಾಡ್‌ಬ್ಯಾಂಡ್‌ ಬಳಕೆಗೂ ಅವಕಾಶ ನೀಡಿಲ್ಲ. ಬ್ರಾಡ್‌ಬ್ಯಾಂಡ್‌ ಸೌಲಭ್ಯವನ್ನಾದರೂ ನೀಡಿದರೆ ಒಂದಷ್ಟು ಸಮಸ್ಯೆ ನಿವಾರಣೆಯಾಗಬಹುದು ಎಂಬುದು ಇಲ್ಲಿನ ನಿವಾಸಿಗಳ ಅಭಿಪ್ರಾಯ.

ಪ್ರತಿದಿನ ಸಾಮಾನ್ಯ ಜನರು ಸರ್ಕಾರದ ಅಧಿಕೃತ ಇಂಟರ್‌ನೆಟ್‌ ಕಿಯೋಸ್ಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬೇಕಾಗಿದೆ. ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಪತ್ರಕರ್ತರಿಗೆ ಸರ್ಕಾರವು ಇಲ್ಲಿನ ವಾರ್ತಾ ಮತ್ತು ಸಂಪರ್ಕ ಇಲಾಖೆಯಲ್ಲಿ ಮಾಧ್ಯಮ ಕೇಂದ್ರ ತೆರೆದಿದೆ. 20 ರಿಂದ 25 ಬ್ರಾಡ್‌ಬ್ಯಾಂಡ್‌ ಲೈನ್‌ ಸಂಪರ್ಕ ಕಲ್ಪಿಸಲಾಗಿದೆ.

ಸರ್ಕಾರ ಇ ಮೇಲ್ ಸೇವೆ, ಬ್ಯಾಕಿಂಗ್ ವೆಬ್‌ಸೈಟ್, ಶಿಕ್ಷಣ ಸಂಸ್ಥೆಗಳ ಸಂಬಂಧಿತ ವೆಬ್‌ಸೈಟ್, ಮಾಧ್ಯಮ ಸಂಸ್ಥೆ, ಉದ್ಯೋಗ ಮಾಹಿತಿ ಒದಗಿಸುವ ವೆಬ್‌ಸೈಟ್‌, ಮನೋರಂಜನೆ, ಸಾರಿಗೆ ಸಂಪರ್ಕ ಸೇರಿದಂತೆ ಜನ ಸಾಮಾನ್ಯರಿಗೆ ಅಗತ್ಯವಿರುವ 301 ವೆಬ್‌ಸೈಟ್‌ಗಳನ್ನು ಪಟ್ಟಿ ಮಾಡಿಬಳಕೆಗೆ ಅವಕಾಶ ಕಲ್ಪಿಸಿದೆ.

‘ಮಂದಗತಿಯ 2ಜಿ ಇಂಟರ್‌ನೆಟ್‌ನಲ್ಲಿ ಇ ಮೇಲ್ ಕೂಡ ಚೆಕ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ.  ಗೂಗಲ್ ಹಾಗೂ ಗೂಗಲ್ ಮ್ಯಾಪ್ (ನಕಾಶೆ) ಓಪನ್ ಆಗುವುದಿಲ್ಲ. ಸ್ಥಿರ ದೂರವಾಣಿ ಹಾಗೂ ಮೊಬೈಲ್ ಇಂಟರ್‌ನೆಟ್‌ನಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಗೆ ಅವಕಾಶ ಇಲ್ಲ. ಸರ್ಕಾರ ಇಂಟರ್‌ನೆಟ್ ಕೊಟ್ಟ ಉದ್ದೇಶವಾದರೂ ಏನು’ ಎಂದು ವಿದ್ಯಾರ್ಥಿ ವಸೀಂ ನಬಿ ಪ್ರಶ್ನಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು