ಶುಕ್ರವಾರ, ನವೆಂಬರ್ 22, 2019
23 °C
ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ: ಏಮ್ಸ್‌ ವರದಿ

ಚಿದಂಬರಂಗೆ ಸಿಗದ ಮಧ್ಯಂತರ ಜಾಮೀನು

Published:
Updated:

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ಕಾಂಗ್ರೆಸ್‌ ಹಿರಿಯ ಮುಖಂಡ ಪಿ. ಚಿದಂಬರಂ ಅವರ ಆರೋಗ್ಯ ಉತ್ತಮವಾಗಿಯೇ ಇದೆ. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಏಮ್ಸ್‌ ವೈದ್ಯಕೀಯ ಮಂಡಳಿ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಏಮ್ಸ್‌ ವೈದ್ಯಕೀಯ ಮಂಡಳಿಯ ವರದಿಯನ್ನು ಶುಕ್ರವಾರ ಕೋರ್ಟ್‌ನಲ್ಲಿ ಓದಿದರು. ಚಿದಂಬರಂ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ವರದಿ ನೀಡುವಂತೆ ನ್ಯಾಯಾಲಯವೇ ಗುರುವಾರ ಏಮ್ಸ್‌ಗೆ ಆದೇಶಿಸಿತ್ತು.

ಆನಾರೋಗ್ಯದ ನಿಮಿತ್ತ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ಕೋರಿ ಚಿದಂಬರಂ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್‌ ಕೈಟ್‌ ಅವರು, ‘ಜೈಲಿನಲ್ಲಿ ಶುದ್ಧ ಮತ್ತು ನೈರ್ಮಲ್ಯದ ವಾತಾವರಣ ಕಾಯ್ದುಕೊಳ್ಳಬೇಕು. ಅರ್ಜಿದಾರರಿಗೆ ಮನೆಯಲ್ಲಿ ಬೇಯಿಸಿದ ಆಹಾರ, ಬಾಟಲ್‌ ನೀರು ಹಾಗೂ ಸೊಳ್ಳೆ ಪರದೆ ಬಳಸಲು ಅವಕಾಶ ನೀಡಬೇಕು’ ಎಂದು ತಿಹಾರ್‌ ಜೈಲಿನ ಸೂಪರಿಂಟೆಂಡೆಂಟ್‌ಗೆ ನಿರ್ದೇಶಿಸಿದರು.

ಜತೆಗೆ, ‘ಚಿದಂಬರಂ ಅವರ ಆರೋಗ್ಯ ಕುರಿತು ನಿರಂತರವಾಗಿ ತಪಾಸಣೆ ನಡೆಸುತ್ತಿರಬೇಕು’ ಎಂದೂ ನಿರ್ದೇಶಿಸಿ ಅರ್ಜಿಯನ್ನು ವಿಲೇವಾರಿ ಮಾಡಿದರು.

 

ಪ್ರತಿಕ್ರಿಯಿಸಿ (+)