ಐಆರ್‌ಸಿಟಿಸಿ ಹೋಟೆಲ್‌ ಹಗರಣ: ಲಾಲು ಪ್ರಸಾದ್‌ ಪತ್ನಿ, ಪುತ್ರನಿಗೆ ಜಾಮೀನು

7

ಐಆರ್‌ಸಿಟಿಸಿ ಹೋಟೆಲ್‌ ಹಗರಣ: ಲಾಲು ಪ್ರಸಾದ್‌ ಪತ್ನಿ, ಪುತ್ರನಿಗೆ ಜಾಮೀನು

Published:
Updated:

ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಹೋಟೆಲ್‌ ಹಗರಣ ವಿಚಾರವಾಗಿ ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ಆರ್‌ಜೆಡಿ ‌ಮುಖ್ಯಸ್ಥ ಲಾಲು ಪ್ರಸಾದ್‌ ಪತ್ನಿ ರಾಬ್ಡಿ ದೇವಿ, ಪುತ್ರ ತೇಜಸ್ವಿ ಯಾದವ್‌ ಮತ್ತು ಇನ್ನೂ ಕೆಲವರಿಗೆ ದೆಹಲಿ ನ್ಯಾಯಾಲಯವು ಜಾಮೀನು ನೀಡಿದೆ.

₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಹಾಗೂ ಶ್ಯೂರಿಟಿ ಪಡೆದು ಷರತ್ತುಬದ್ಧ ಜಾಮೀನು ನೀಡಲಾಗಿದೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯವು ದಾಖಲಿಸಿದ್ದ ಮತ್ತೊಂದು ಪ್ರಕರಣದಲ್ಲಿಯೂ ನವೆಂಬರ್‌ 19ರ ವರೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿಶೇಷ ನ್ಯಾಯಾಧೀಶ ಅರುಣ್‌ ಭಾರದ್ವಾಜ್‌ ಪ್ರಕರಣ ವಿಚಾರಣೆ ನಡೆಸುತ್ತಿದ್ದಾರೆ. ನವೆಂಬರ್‌ 19 ರಂದು ಲಾಲು ಪ್ರಸಾದ್‌ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದರು. 

ಸಿಬಿಐ ದಾಖಲಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯವು ಲಾಲು ಹೊರತುಪಡಿಸಿ ಉಳಿದವರಿಗೆ ಆಗಸ್ಟ್‌ 31ರಂದು ನಿರೀಕ್ಷಣಾ ಜಾಮೀನು ನೀಡಿತ್ತು. 

ಭಾರತೀಯ ರೈಲ್ವೆ ಕೇಟರಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಎರಡು ಖಾಸಗಿ ಹೋಟೆಲ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ವೇಳೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಈ ಸಂಬಂಧ ಏಪ್ರಿಲ್‌ 16ರಂದು ಲಾಲು, ರಾಬ್ಡಿ ಹಾಗೂ ತೇಜಸ್ವಿ ಸೇರಿದಂತೆ ಕೇಂದ್ರದ ಮಾಜಿ ಸಚಿವ ಪ್ರೇಮ್‌ ಚಂದ್‌ ಗುಪ್ತ ಹಾಗೂ ಅವರ ಪತ್ನಿ ಸರಳಾ ಗುಪ್ತಾ, ಐಆರ್‌ಸಿಟಿಸಿಯ ಆಗಿನ ನಿರ್ದೇಶಕರಾಗಿದ್ದ ಬಿ.ಕೆ.ಅಗರವಾಲ್‌, ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪಿ.ಕೆ.ಗೋಯಲ್‌ ಹಾಗೂ ನಿರ್ದೇಶಕರಾಗಿದ್ದ ರಾಕೇಶ್‌ ಸಕ್ಸೇನಾ ವಿರುದ್ಧ ಚಾರ್ಜ್‌ಶೀಟ್‌ ದಾಖಲಿಸಿತ್ತು.

ಸುಜಾತಾ ಹೋಟೆಲ್‌ ಮತ್ತು ಚಾಣಾಕ್ಯ ಹೋಟೆಲ್‌ ಮಾಲೀಕರಾದ ವಿಜಯ್‌ ಕೊಚ್ಚರ್‌, ವಿನಯ್‌ ಕೊಚ್ಚರ್‌ ಹೆಸರನ್ನೂ ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿತ್ತು.

ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಜಾರ್ಖಂಡ್‌ ಜೈಲಿನಲ್ಲಿರುವ ಲಾಲು, ಈ ಪ್ರಕರಣದ ವಿಚಾರಣೆಗೆ ಇದುವರೆಗೂ ಹಾಜರಾಗಿಲ್ಲ.

ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪಿತೂರಿ( 120–ಬಿ), ವಂಚನೆ(420), ಭ್ರಷ್ಟಾಚಾರ ಆರೋ‍‍‍ಪಗಳ ಅಡಿಯಲ್ಲಿ ಜುಲೈನಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ, ಪಟ್ನಾ, ರಾಂಚಿ, ಭುವನೇಶ್ವರ ಮತ್ತು ಗುರಗಾಂವ್‌ನ ಸುಮಾರು 12 ಪ್ರದೇಶಗಳಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಸಿಬಿಐ ಪ್ರಕರಣದ ಅನ್ವಯ ಜಾರಿ ನಿರ್ದೇಶನಾಲಯವೂ ದೂರು ದಾಖಲಿಸಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !