ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ರೈಲ್ವೆ ಬೋಗಿಗಳು ಶುಭ್ರ, ಆರಾಮದಾಯಕ

ರೋಗಿಗಳ ಅಭಿಪ್ರಾಯ, ರೈಲ್ವೆ ಇಲಾಖೆಗೆ ಧನ್ಯವಾದ
Last Updated 23 ಜೂನ್ 2020, 8:16 IST
ಅಕ್ಷರ ಗಾತ್ರ

ನವದೆಹಲಿ: ಸ್ವಚ್ಛ ಶೌಚಾಲಯ, ಬಣ್ಣಬಣ್ಣದ ಕಸದ ಡಬ್ಬಿಗಳು, ಆರಾಮದಾಯಕ ಹಾಸಿಗೆ, ಆಮ್ಲಜನಕದ ಸಿಲಿಂಡರ್ ಸೇರಿದಂತೆ ಸಕಲ ಸೌಲಭ್ಯಗಳಿರುವ ಇದು ತಕ್ಷಣವೇ ಆಸ್ಪತ್ರೆ ಎಂದು ಭಾಸವಾಗುತ್ತದೆ. ಆದರೆ ಇದು ರೈಲ್ವೆ ಬೋಗಿ. ಕೋವಿಡ್–19 ಶಂಕಿತರ ಪ್ರತ್ಯೇಕ ವಾಸದ ಉದ್ದೇಶಕ್ಕೆ ಆಸ್ಪತ್ರೆಯ ರೀತಿ ಪರಿವರ್ತಿಸಲಾಗಿರುವ ರೈಲ್ವೆ ಬೋಗಿಯನ್ನು ಕಂಡು ರೋಗಿಗಳು ವ್ಯಕ್ತಪಡಿಸಿರುವ ಅನಿಸಿಕೆಗಳಿವು. ಇದನ್ನು ಸಾಧ್ಯವಾಗಿಸಿದ ರೈಲ್ವೆ ಇಲಾಖೆಗೆ ರೋಗಿಗಳು ಧನ್ಯವಾದ ಹೇಳಿದ್ದಾರೆ.

‘ನಾನು ರೈಲ್ವೆ ಪ್ರಯಾಣಿಕ. ಆದರೆ ಈ ಬೋಗಿಯನ್ನು ಹತ್ತಿದ ಕೂಡಲೇ ವಿವಿಧ ಸೌಲಭ್ಯಗಳನ್ನು ಕಂಡು ಬೆರಗಾದೆ. ಸೊಳ್ಳೆಯ ತಾಪತ್ರಯ ಹೊರತುಪಡಿಸಿದರೆ, ಇಲ್ಲಿನ ವಾಸ ಆರಾಮದಾಯಕವಾಗಿದೆ’ ಎನ್ನುತ್ತಾರೆ ಉತ್ತರ ಪ್ರದೇಶದ ಮವೂ ಪಟ್ಟಣದಕೃಷ್ಣಕಾಂತ್ ಶರ್ಮಾ.

ಶರ್ಮಾ ಸೇರಿದಂತೆ ಕುಟುಂಬದ ಆರು ಸದಸ್ಯರು ಕೋವಿಡ್ ಶಂಕಿತರಿಗೆ ಸಿದ್ಧಪಡಿಸಲಾದ ಬೋಗಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. 59 ಮಂದಿ ಶಂಕಿತರ ಪೈಕಿ ಇವರ ಕುಟುಂಬವೂ ಸೇರಿದೆ.

ಉತ್ತರ ಪ್ರದೇಶದಲ್ಲಿ ಕೋವಿಡ್ ಶಂಕಿತರಿಗೆಂದೇ 372 ಬೋಗಿಗಳನ್ನು ರೈಲ್ವೆ ಇಲಾಖೆ ಒದಗಿಸಿದೆ. ಮುಂಬೈನಿಂದ ವಾಪಸಾಗಿದ್ದ ಶರ್ಮಾ ಅವರ ಕುಟುಂಬವನ್ನು ಈ ಪೈಕಿ ಒಂದು ಬೋಗಿಯಲ್ಲಿ ಇರಿಸಲಾಗಿದೆ. ಇವರೆಲ್ಲರ ಮಾದರಿಯನ್ನು ಸಂಗ್ರಹಿಸಿ‍ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಫಲಿತಾಂಶ ಬರುವವರೆಗೆ ರೈಲ್ವೆ ಬೋಗಿಯಲ್ಲೇ ವಾಸ್ತವ್ಯ ಹೂಡುವಂತೆ ಸೂಚಿಸಲಾಗಿತ್ತು. ಫಲಿತಾಂಶ ನೆಗೆಟಿವ್ ಬಂದಿದ್ದರಿಂದ ಎಲ್ಲರನ್ನೂ ಮನೆಗೆ ಕಳುಹಿಸಲಾಗಿದೆ.

ಸ್ನಾನ ಮಾಡುವ ಶವರ್ ಸಾಧನಗಳು, ಸೊಳ್ಳೆ ಪರದೆ, ಜೈವಿಕ ಶೌಚಾಲಯ, ಪವರ್ ಸಾಕೆಟ್, ಆಮ್ಲಜನಕದ ಸಿಲಿಂಡರ್ ಸೇರಿದಂತೆ ರೋಗಿಗಳಿಗೆ ಆರಾಮದಾಯಕ ಎನಿಸುವ ಎಲ್ಲ ಸೌಲಭ್ಯಗಳನ್ನು ರೈಲ್ವೆ ಒದಗಿಸಿದೆ. ಹವಾನಿಯಂತ್ರಿತವಲ್ಲದ ಬೋಗಿಗಳಲ್ಲಿ ಬಿಸಿಲನ ಝಳ ತಡೆದುಕೊಳ್ಳುವುದೇ ದೊಡ್ಡ ಸವಾಲು ಎನ್ನುವುದು ರೋಗಿಗಳ ಮಾತು.

‘ಬಿಸಿಲೇರಿದಂತೆ ಹೆಚ್ಚಾಗುವ ತಾಪಮಾನ ತಡೆಯಲು ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಆದರೆ ರೈಲಿನ ಶೌಚಾಲಯಗಳ ಬಗ್ಗೆ ಇದ್ದ ಪೂರ್ವಗ್ರಹ ನಿವಾರಣೆಯಾಗಿದೆ. ಸ್ನಾನದ ಕೋಣೆ ಹಾಗೂ ಶೌಚಾಲಯ ಶುಭ್ರವಾಗಿವೆ. ವಯಸ್ಸಾಗಿರುವ ನನ್ನ ತಾಯಿ ಬಳಸಲು ಅವು ಯೋಗ್ಯವಾಗಿವೆ. ಆದರೆ ಸೊಳ್ಳೆಗಳು ಮಾತ್ರ ಹೇಗೋ ನುಸುಳಿ ಬಂದುಬಿಡುತ್ತವೆ’ ಎಂದು ಕೃಷ್ಣಕಾಂತ್ ಹೇಳಿದ್ದಾರೆ.

‘ನನ್ನ ಮಗಳಿಗೆ ಕೊರೊನಾ ನೆಗೆಟಿವ್ ಬಂದರೂ ಸಹ ಆಕೆಗೆ ಮಲೇರಿಯಾ ಬರುವ ಸಾಧ್ಯತೆ ಇದೆ ಎನಿಸುತ್ತಿದೆ. ಏಕೆಂದರೆ ಆಕೆಯ ಕೈಕಾಲು ಮುಖವನ್ನು ಸೊಳ್ಳೆಗಳು ಕಚ್ಚಿ ಹಾಕಿದ್ದವು. ಇಡೀ ರಾತ್ರಿ ಅವಳು ಅಳುತ್ತಿದ್ದಳು’ ಎಂದು ಕೃಷ್ಣಕಾಂತ್ ಅವರ ಪತ್ನಿ ನೀತು ಬೇಸರ ವ್ಯಕ್ತಪಡಿಸದ್ದಾರೆ. ಬೋಗಿಯಿಂದ ಮನೆಗೆ ಕಳುಹಿಸುವ ಮೊದಲು ಮಲೇರಿಯಾ ಹಾಗೂ ಡೆಂಗಿ ಪರೀಕ್ಷೆ ಮಾಡಬೇಕು ಎಂಬುದು ಅವರ ಆಗ್ರಹ.

ದೃಢಪಟ್ಟ ಹಾಗೂ ಸೋಂಕು ತಗುಲಿರುವ ಶಂಕೆ ಇರುವ ವ್ಯಕ್ತಿಗಳನ್ನು ಪ್ರತ್ಯೇಕ ಬೋಗಿಗಳಲ್ಲಿ ಇರಿಸಲಾಗುತ್ತಿದೆ. ದೆಹಲಿಯಲ್ಲಿ 503 ಹಾಗೂ ಉತ್ತರ ಪ್ರದೇಶದಲ್ಲಿ 372 ಬೋಗಿಗಳನ್ನು ಇದಕ್ಕಾಗಿ ರೈಲ್ವೆ ನಿಯೋಜಿಸಿದೆ. ಇಲಾಖೆಯು ಹವಾನಿಯಂತ್ರಿತವಲ್ಲದ ಒಟ್ಟು 5,321 ಬೋಗಿಗಳನ್ನು ಇದಕ್ಕಾಗಿ ಪರಿವರ್ತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT